ಬಂಟ್ವಾಳ: ಗ್ರಾಮಗಳನ್ನು ರಾಮರಾಜ್ಯ ಮಾಡುವ ಉದ್ದೇಶದಿಂದ ಹತ್ತು ವರ್ಷಗಳ ಹಿಂದೆ ಮಾಡಲಾದ ವ್ಯವಸ್ಥೆ ಇಂದು ಗ್ರಾಮದ ಅಭಿವೃದ್ಧಿ ಗೆ ಮಹತ್ತರ ಕೊಡುಗೆ ನೀಡಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ(ರಿ.) ದ.ಕ.ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.
ಇಡೀ ಜಿಲ್ಲೆಯಲ್ಲಿ 190 ಪಿಡಿಒಗಳು ಕೆಲಸ ಮಾಡುತ್ತಿದ್ದು, ಗ್ರಾಮದ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜತೆಯಾಗಿ ಸಮನ್ವಯದಿಂದ ನಡೆಯಬೇಕು. ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯವಿದ್ದು, ಉದ್ಯೋಗ ಖಾತರಿ ಮೂಲಕ ಗ್ರಾಮದ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳು ಕೂಡ ವಿಶೇಷ ಮುತುವರ್ಜಿ ವಹಿಸುತ್ತಿದ್ದಾರೆ. ಪಿಡಿಒಗಳಿಗೆ ಹಕ್ಕುಗಳ ಜತೆ ಹೆಚ್ಚಿನ ಜವಾಬ್ದಾರಿಯೂ ಇದೆ.
ಜನರು ನಿಮ್ಮ ಬಳಿ ಬಂದಾಗ ಅವರ ಜೊತೆ ಜವಬ್ದಾರಿಯಿಂದ ವ್ಯವಹಾರ ನಡೆಸಿ. ಎಲ್ಲರ ಜೊತೆಯಾಗಿ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ. ಕರ್ತವ್ಯಗಳನ್ನು ಅರಿತುಕೊಂಡು ಗ್ರಾಮದ ಬಡಜನರ ಜತೆ ಅನುಭವಗಳನ್ನು ಹಂಚಿಕೊಂಡು ಸಮಾಜದಲ್ಲಿ ಸ್ಪಂದನೆ ನೀಡಿ. ಸರಕಾರಿ ಅಽಕಾರಿಗಳು ಕರ್ತವ್ಯವನ್ನು ಸೇವೆ ಎಂದು ಪರಿಗಣಿಸಬೇಕು. ಸಂಘಟನೆಯ ಮೂಲಕ ಕುಂದುಕೊರತೆಗಳನ್ನು ನಿವಾರಿಸಲು ಸರಕಾರ ಸಿದ್ಧವಿದೆ ಎಂದರು.
ಪಿಡಿಒಗಳ ಸಂಘದ ಜಿಲ್ಲಾ ಅಧ್ಯಕ್ಷ ನಾಗೇಶ್ ಅವರು ಮಾತನಾಡಿ,ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗ್ರೂಪಿ ಬಿಗೆ ಮೇಲ್ದರ್ಜೆಗೇರಿಸುವುದು ಹಾಗೂ ಬಾಕಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡುವ ಕಾರ್ಯವನ್ನು ಚುರುಕುಗೊಳಿಸುವಂತೆ ಸರಕಾರದ ಜೊತೆ ಮಾತುಕತೆ ಮಾಡುವಂತೆ ಮನವಿ ಮಾಡಿದರು. ಗ್ರಾ.ಪಂ.ಉನ್ನತ ಸೇವೆಗಳನ್ನು ಒದಗಿಸುವ ಮೂಲಕ ಅತ್ಯುತ್ತಮ ಸೇವೆಯನ್ನು ಪಿಡಿಒಗಳು ನೀಡುತ್ತಿದ್ದಾರೆ. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ಎಲ್ಲರ ಸಹಕಾರ ಬೇಕು ಎಂದು ಅವರು ತಿಳಿಸಿದರು.
ಶಾಸಕರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಪ್ರಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಪೂರ್ಣಿಮಾ ಉಪಸ್ಥಿತಿದರಿದ್ದರು. ಸಂಘಟನಾ ಕಾರ್ಯದರ್ಶಿ ಗಾಯತ್ರಿ ಪಿ.ಧನ್ಯವಾದ ನೀಡಿದರು.