ಬಂಟ್ವಾಳ: ತನ್ನ ಇಡೀ ಕುಟುಂಬದ ಆಧಾರವಾಗಿದ್ದ ಹೋಟೆಲ್ ಕಾರ್ಮಿಕನೋರ್ವ ಪ್ರಸ್ತುತ ಕಿಡ್ನಿ ವೈಫಲ್ಯದಿಂದ ಸಂಪೂರ್ಣ ನಲುಗಿ ಹೋಗಿದ್ದು, ವಾರಕ್ಕೆ ಮೂರು ಡಯಾಲಿಸೀಸ್ ಚಿಕಿತ್ಸೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇವರ ಆನಾರೋಗ್ಯದಿಂದ ಕುಟುಂಬ ಆಹಾರಕ್ಕೂ ಪರದಾಡುವ ಜತೆಗೆ ಡಯಾಲಿಸೀಸ್‌ಗೆ ದುಬಾರಿ ಖರ್ಚು ಮಾಡಬೇಕಾದ ಸ್ಥಿತಿ ಇದ್ದು, ಹೀಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ.
ಪಾಣೆಮಂಗಳೂರಿನ ಮೊಗರ್ನಾಡು ನಿವಾಸಿ ೪೨ ವರ್ಷದ ಸತೀಶ್ ಅವರ ಕುಟುಂಬದ ಚಿಂತಾಜನಕ ಸ್ಥಿತಿ ಇದು. ಅದು ಮೆಲ್ಕಾರಿನ ಹೋಟೆಲೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಸಖೀ ಜೀವನ ನಡೆಸುತ್ತಿದ್ದರು. ಆದರೆ ಇವರು ಏಕಾಏಕಿ ಕಿಡ್ನಿ ವೈಫಲ್ಯದ ಖಾಯಿಲೆಗೆ ತುತ್ತಾಗಿ ಪ್ರಸ್ತುತ ಇಡೀ ಕುಟುಂಬವೇ ನಲುಗಿ ಹೋಗಿದೆ.
ಸತೀಶ್ ಅವರು ಮನೆಯಲ್ಲಿ ಹಿರಿಯರಾಗಿದ್ದು, ಇಬ್ಬರು ತಮ್ಮಂದಿರು ಹಾಗೂ ಓರ್ವ ತಂಗಿ ಸೇರಿ ನಾಲ್ವರು ಮನೆಯಲ್ಲಿದ್ದಾರೆ. ತಮ್ಮಂದಿರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಆದರೆ ಮನೆಯ ಖರ್ಚು, ಅಣ್ಣನ ಔಷಽ ಅವರ ದುಡಿಮೆ ಸಾಲುತ್ತಿಲ್ಲ. ಸತೀಶ್ ಅವರಿಗೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ವಾರಕ್ಕೆ ಮೂರು ಡಯಾಲಿಸೀಸ್ ಆಗಬೇಕಿದ್ದು, ಒಮ್ಮೆಗೆ ೧೨೦೦ ರೂ.ಬೇಕಾಗುತ್ತದೆ.
ಜತೆಗೆ ಬಸ್ಸಿನಲ್ಲಿ ಹೋಗಿ ಬರುವ ಖರ್ಚು ಪ್ರತ್ಯೇಕವಾಗಿದ್ದು, ಆದರೆ ಅನಾರೋಗ್ಯದ ಕಾರಣದಿಂದ ಬಸ್ಸಿನಲ್ಲಿ ಹೋಗುವುದಕ್ಕೂ ಪರದಾಡುತ್ತಿದ್ದಾರೆ. ಅವರ ಅನಾರೋಗ್ಯದ ಶಾಶ್ವತ ಪರಿಹಾರಕ್ಕೆ ಲಕ್ಷಾಂತರ ರೂಪಾಯಿ ಬೇಕಿರುವುದರಿಂದ ಇವರ ಕುಟುಂಬ ಅದರ ಗೋಜಿಗೆ ಹೋಗಿಲ್ಲ. ಪ್ರಸ್ತುತ ಡಯಾಲಿಸೀಸ್ ಖರ್ಚಿಗಾದರೂ ಅನುಕೂಲವಾಗಲಿ ಎಂದು ಸಹೃದಯಿ ದಾನಿಗಳ ನೆರವು ಯಾಚಿಸುತ್ತಿದ್ದಾರೆ.
ನೆರವು ನೀಡುವ ದಾನಿಗಳು ಸತೀಶ್ ಅವರ ಹೆಸರಿನಲ್ಲಿ ಕೆನರಾ(ಸಿಂಡಿಕೇಟ್) ಬ್ಯಾಂಕ್ ಶಂಭೂರು ಶಾಖೆಯ ಖಾತೆ ಸಂಖ್ಯೆ 02942610003616 ( IFSC-SYNB0000294 ) ಗೆ ತಮ್ಮ ನೆರವು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಅವರ ಮೊ.ಸಂಖ್ಯೆ 6363377405ಯನ್ನು ಸಂಪರ್ಕಿಸಬಹುದಾಗಿದೆ.