ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ಮತದಾರ ಜಾಗೃತಿ ವೇದಿಕೆಯ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶೀನಪ್ಪ, ರಾಜ್ಯಶಾಸ್ತ್ರ ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ಧಕಟ್ಟೆ ಇವರು ವಿದ್ಯಾರ್ಥಿಗಳನ್ನು ಕುರಿತು ರಾಷ್ಟ್ರೀಯ ಮತದಾರ ದಿನಾಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಯುವ ಮತದಾರರು ಹೆಚ್ಚಿದ್ದು, ಮತದಾನದ ಬಗ್ಗೆ ಇವರಲ್ಲಿ ಜಾಗೃತಿ ಹಾಗೂ ಸೂಕ್ಷ್ಮತೆಯನ್ನು ಮೂಡಿಸಿದರೆ ಚುನಾವಣೆಗಳು ಹಾಗೂ ಅವುಗಳ ತತ್ತ್ವಾದರ್ಶಗಳು ಯಶಸ್ವಿಯಾಗಲಿವೆ ಎಂದರು. ಯುವ ಮತದಾರರು ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ಹಾಗೂ ವಿವೇಕದಿಂದ ಮತ ಚಲಾಯಿಸಿದರೆ ರಾಷ್ಟ್ರದ ಭವಿಷ್ಯ ಉಜ್ವಲವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಹೆಚ್.ಕೆ ಇವರು ವಿದ್ಯಾರ್ಥಿಗಳಿಗೆ ಮುಂಬರುವ ಚುನಾವಣೆಯಲ್ಲಿ ಅಗತ್ಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಆಶೋತ್ತರಗಳನ್ನು ಈಡೇರಿಸುವಂತೆ ಕರೆ ನೀಡಿದರು. ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರಿಸುವಲ್ಲಿ ಹಾಗೂ ಮತದಾನ ಮಾಡುವಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವಂತೆ ತಿಳಿಸಿದರು. ಮತದಾನವು ನಮ್ಮ ಹಕ್ಕು ಹಾಗೂ ಜವಾಬ್ದಾರಿಯೂ ಆಗಿದೆ ಎಂದರು. ಯುವ ಮತದಾರರು ತಮಗಾಗಿ ಹಾಗೂ ತಮ್ಮವರಿಗಾಗಿ ಮತ ಚಲಾಯಿಸಿ ಸಮರ್ಥ ಹಾಗೂ ಜನಪರ ಕಾಳಜಿಯನ್ನು ಹೊಂದಿದ ನಾಯಕರನ್ನು ಆಯ್ಕೆ ಮಾಡಿದರೆ ಭಾರತದ ಪ್ರಜಾಸತಾತ್ಮಕ ತತ್ತ್ವಾದರ್ಶಗಳನ್ನು ಎತ್ತಿ ಹಿಡಿದಂತಾಗುತ್ತದೆ ಎಂದರು.
ಡಾ.ಶ್ರೀನಿವಾಸ ಗ್ರಂಥಪಾಲಕರು ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆಯನ್ನು ಸಭೆಗೆ ಬೋಧಿಸಿದರು.
ನಸೀಮಾ ಬೇಗಂ ಎಸ್, ಸಂಚಾಲಕರು ಮತದಾರರ ಜಾಗೃತಿ ವೇದಿಕೆ ಇವರು ಕಾರ್ಯಕ್ರಮವನ್ನು ಸಂಯೋಜಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ ಪ್ರಥಮ ಬಿಎ ಸ್ವಾಗತಿಸಿದ ಕಾರ್ಯಕ್ರಮವನ್ನು ಪವನ್‌ರಾಜ್ ಪ್ರಥಮ ಬಿಎ ವಂದಿಸಿದರು. ಸಚಿನ್ ಪ್ರಥಮ ಬಿಎ ನಿರೂಪಿಸಿದರು. ರಕ್ಷಾ ಮತ್ತು ಬಳಗ ಪ್ರಾರ್ಥಿಸಿದರು.