ಬಂಟ್ವಾಳ : ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಗೆ ಮಂಜೂರಾದ 1.22 ಕೋ.ರೂ.ಅನುದಾನದ ಕಟ್ಟಡ ಕಾಮಗಾರಿ ಆರಂಭಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪ್ರಸ್ತುತ ಮಂಜೂರಾದ ಅನುದಾನದಲ್ಲಿ ಸುಮಾರು 7 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಈ ಸಂಸ್ಥೆಯ ಅಭಿವೃದ್ಧಿಯ 10 ಕೋ.ರೂ.ಗಳ ಯೋಜನೆ ಸರಕಾರದ ಹಣಕಾಸು ಇಲಾಖೆಯಲ್ಲಿದ್ದು, ಅದರ ಮಂಜೂರಾತಿ ಪ್ರಯತ್ನಿಸುತ್ತೇನೆ, ತನ್ನ ನಿಧಿಯಿಂದ ಇಲ್ಲಿನ ಗ್ರಂಥಾಲಯದ ಪುಸ್ತಕಕ್ಕೆ ಅನುದಾನ ನೀಡಲಾಗುತ್ತದೆ, ಜತೆಗೆ ಕಾಲೇಜಿನ ಸಂಪರ್ಕ ರಸ್ತೆ, ಮಕ್ಕಳಿಗೆ ಅತ್ಯಲ್ಪ ವೆಚ್ಚದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗೂ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಾಂಶುಪಾಲ ಸಿ.ಜೆ.ಪ್ರಕಾಶ್ ಅವರು ಕಾಲೇಜಿನ ಪ್ರಯೋಗಾಲಯ, ಉಪನ್ಯಾಸಕರು ಹಾಗೂ ಇತರ ಸೌಕರ್ಯಗಳ ಕುರಿತು ವಿವರಿಸಿದರು.
ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಲೋಕೋಪಯೋಗಿ ಇಲಾಖೆಯ ಎಇಇ ಷಣ್ಮುಗಂ, ಸಂಸ್ಥೆಯ ಕುಲಸಚಿವ ಒಫೀಲಿಯಾ ವಿ.ಡಿಸೋಜ, ವಿವಿಧ ವಿಭಾಗಗಳ ಮುಖ್ಯಸ್ಥರಾದ ದೇವರಾಜ್ ನಾಯ್ಕ್, ಉಷಾ ನಾಯ್ಕ್, ಶಾಮರಾಜ ಎನ್, ಸನತ್ ರಾಮ್ ಬಿ, ಉಪನ್ಯಾಸಕರು, ಎಂಜಿನಿಯರ್ ಗಳು ಉಪಸ್ಥಿತರಿದ್ದರು.