ಮಂಗಳೂರು: ಇಂದಿನ ಆಧುನಿಕತೆಯ ಪ್ರಭಾವದಿಂದ ಹಾಗೂ ವಿದ್ಯಾರ್ಥಿಗಳ ಕೊರತೆಯಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಅಳಿವಿನಂಚಿನಲ್ಲಿದ್ದು, ಇಂತಹ ಸಂದರ್ಭದಲ್ಲಿ ಆ ಸಂಸ್ಥೆಯ ಹಳೆವಿದ್ಯಾರ್ಥಿಗಳು ಶಾಲೆಯ ಶಕ್ತಿಯಾಗಿ ಆತ್ಮಸ್ಥೈರ್ಯವನ್ನು ತುಂಬುವಂತಾಗಬೇಕು ಎಂದು ಹೋಲಿಕ್ರಾಸ್ ಸಂಸ್ಥೆಯ ಸಿಸ್ಟರ್ ಸುಜಾತಾ ಪ್ರಾಸ್ತಾವಿಕವಾಗಿ ಮಾತನಾಡಿದರು.



ನೀರುಮಾರ್ಗ ಅಡ್ಯಾರ್ ಪದವಿನ ರಾಜೇಶ್ವರ್ ಹೈಸ್ಕೂಲಿನಲ್ಲಿ ನಡೆದ ಹಳೆವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ಗಣರಾಜ್ಯೋತ್ಸವ ಧ್ವಜಾ ರೋಹಣಗೈದು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಿತಿ ರಚನೆ ಹಳೆ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಸಿಹಿ ಅನುಭವಗಳನ್ನು ಹಂಚಿಕೊಂಡರಲ್ಲದೆ ಒಂದು ಹಂತದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಬಂದೊದಗಿದ ಈ ಸಂದರ್ಭದಲ್ಲಿ ಕೆಲವೊಂದು ಸಲಹೆ-ಸೂಚನೆಗಳನ್ನು ನೀಡಿದರು. ಅದಲ್ಲದೆ ನೂತನ ಹಳೆವಿದ್ಯಾರ್ಥಿಗಳ ಕಮಿಟಿಯನ್ನು ರಚಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕರಾದ ಮಹಾಬಲ ಕುಲಾಲ್, ಶಿಕ್ಷಕರಾದ ಪರಮೇಶ್ವರ ಭಟ್, ಗಾಯತ್ರಿ, ಹ್ಯೂಬರ್ಟ್. ಜೆಸಿಂತಾ, ಮಾಲಿ, ವಿನ್ನಿ, ದೀಕ್ಷಿತಾ, ಹಳೆ ವಿದ್ಯಾರ್ಥಿಗಳ ಪರವಾಗಿ ಫಾ.ನೆಲ್ಸನ್ ಡಿಸೋಜ, ಅಬ್ದುಲ್ ಹಮೀದ್, ರಸಿಕಾ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ವಾಗತಿಸಿ, ರಸಿಕಾ ವಂದಿಸಿದರು. ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು.
40ರ ಸಂಭ್ರಮ :
1982ರಲ್ಲಿ ಆರಂಭವಾದ ರಾಜೇಶ್ವರ್ ಹೈಸ್ಕೂಲಿನಲ್ಲಿ ಇಷ್ಟರವರೆಗೆ ಸುಮಾರು 8 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆದು ಇಂದು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷ ಸಂಸ್ಥೆ 40 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.