ವಿಟ್ಲ: ಕರಾವಳಿ ಭಾಗದ ರೈತರ ಕೃಷಿ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ನಾಶ ಮಾಡುವ ಕಾರ್ಯ ಮಾಡಲಾಗುತ್ತಿದೆ. ಕೃಷಿ ಭೂಮಿಯನ್ನು ಹಾಳು ಮಾಡಿ ರೈತರನ್ನು ಒಕ್ಕಲೆಬ್ಬಿಸಿ ಕೈಗಾರಿಕಾ ಪ್ರದೇಶ ಮಾಡುವ ಹುನ್ನಾರವಿದ್ದರೆ ತಕ್ಷಣ ಕೈಬಿಡಬೇಕು. ಯೋಜನೆಯ ಸಮಗ್ರ ಮಾಹಿತಿಯನ್ನು ಬಹಿರಂಗ ಪಡಿಸಿ, ರೈತಾಪಿ ವರ್ಗಕ್ಕೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆಗ್ರಹಿಸಿದ್ದಾರೆ.



ಒಂದು ಯೋಜನೆಯನ್ನು ಜಾರಿ ಮಾಡುವ ಸಂದರ್ಭ ಸಾಧಕ ಬಾಧಕಗಳನ್ನು ಜನರ ಗಮನಕ್ಕೆ ತಂದು, ಅಭಿಪ್ರಾಯಗಲನ್ನು ಸಂಗ್ರಹಿಸಿ, ಪರಿಹಾರಗಳನ್ನು ವಿತರಣೆ ಮಾಡುವುದು ಕ್ರಮವಾಗಿದೆ. 2013ರಲ್ಲಿ ಪ್ರಾರಂಭವಾದ ಪಡುಬಿದರೆ – ಕಾಸರಗೋಡು ಸಂಪರ್ಕ ಕಲ್ಪಿಸುವ 400ಕೆವಿ ವಿದ್ಯುತ್ ಮಾರ್ಗದ ಎಲ್ಲಾ ಸರ್ವೇ ಕಾರ್ಯವನ್ನು ಮಾಹಿತಿ ನೀಡದೆ ನಡೆಸಲಾಗಿದೆ. ವಿದ್ಯುತ್ ಟವರ್ ನಿರ್ಮಾಣಕ್ಕಾಗಿ ಗುಪ್ತವಾಗಿ ದಾಖಲೆ ಪತ್ರಗಳ ಕಾರ್ಯ ಮಾಡಿರುವುದು ಸರಿಯಲ್ಲ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ತಕ್ಷಣ ವಿದ್ಯುತ್ ಮಾರ್ಗ ಸಂಚರಿಸುವ ಜಾಗದ ರೈತ ಸಂತ್ರಸ್ತರ ಸಭೆಯನ್ನು ನಡೆಸಬೇಕು. ಬಲಾತ್ಕಾರವಾಗಿ ರೈತರ ಒಕ್ಕಲೆಭಿಸುವುದು, ಅರಣ್ಯಗಳನ್ನು ಕಡಿಯುವುದು ನಾಶ ಮಾಡುವುದು ಪ್ರಜಾತಂತ್ರವ್ಯವಸ್ಥೆಗೆ ವಿರೋಧವಾಗಿ ನಡೆಯುವಂತ ಸರ್ವಾಧಿಕಾರಿ ದೋರಣೆಯಾಗಿದೆ. ರೈತ ಸಂಘದ ನಿಯೋಗ ಸ್ಥಳೀಯ ಶಾಸಕರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರನ್ನು ಬೇಟಿ ಮಾಡಿ ವಿದ್ಯುತ್ ಮಾರ್ಗದ ಬಗ್ಗೆ ತಿಳಿಸಿದಾಗ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಅಧಿವೇಶನ ಕಳಿದ ತಕ್ಷಣ ರೈತರನ್ನು ಹಾಗೂ ಜಿಲ್ಲಾಧಿಕಾರಿಯನ್ನು ಸ್ಥಳಕ್ಕೆ ಕರೆದು ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ನೋಡುವ ಭರವಸೆಯನ್ನು ನೀಡಿದ್ದಾರೆ ಎಂದರು.
ಧಾಮಿಕ ಶ್ರದ್ಧಾ ಕೇಂದ್ರ ಹಾಗೂ ರೈತರ ಫಲವತ್ತಾದ ಭೂಮಿಯ ಮೇಲೆ ಮಾರ್ಗ ಸಂಚರಿಸುವ ಜತೆಗೆ ಗೋಮಾಳಗಳಲ್ಲಿ ವಿದ್ಯುತ್ ಟವರ್ ನಿರ್ಮಾಣಕ್ಕೆ ಈಗಾಗಲೇ ನಕ್ಷೆ ಸಿದ್ದಪಡಿಸಿರುವ ಮಾಹಿತಿ ಇದೆ. ಯೋಜನೆಯ ಬಗ್ಗೆ ಸಂದಸರಿಗೆ ಹಾಗೂ ಉಸ್ತುವಾರಿ ಸಚಿವರಿಗೆ ಮಾಹಿತಿ ಇರಲೇ ಬೇಕಾಗಿದ್ದು, ಅವರು ಮೌನವಾಗಿರುವುದು ಸಂಶಯವನ್ನು ಮೂಡಿಸುತ್ತಿದೆ. ಯೋಜನೆಯನ್ನು ಜಾರಿ ಮಾಡುವ ಮೊದಲು ರೈತ ಸಂತ್ರಸ್ತರನ್ನು ಕರೆದು ಮಾತುಕತೆಯನ್ನು ಸ್ಥಳೀಯ ಮಟ್ಟದಲ್ಲಿ ಮಾಡದೇ ಹೋದಲ್ಲಿ ರಾಜ್ಯಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕೃಷಿ ಭೂಮಿ ಹಾಗೂ ಖಾಸಗೀ ಭೂಮಿಯಲ್ಲಿ ಬೃಹತ್ ವಿದ್ಯುತ್ ಮಾರ್ಗ ರಚನೆಯ ಕಾರ್ಯವನ್ನು ಕೈಬಿಟ್ಟು, ಚತುಷ್ಪತ ಹೆದ್ದಾರಿಗಳಲ್ಲಿ ಆಧುನಿಕ ತಂತ್ರಜ್ಞನ ಬಳಸಿ ವಿದ್ಯುತ್ ತೆಗೆದುಕೊಂಡು ಹೋಗುವ ಕಾರ್ಯ ಮಾಡಬೇಕು. ಇದಕ್ಕೆ ಸಮಸ್ಯೆ ಯಾಗುವುದಾದರೆ, ಸಮುದ್ರ ಮಾರ್ಗದ ಮೂಲಕ ಯಾರಿಗೂ ತೊಂದರೆಯಾದ ರೀತಿಯಲ್ಲಿ ನೀರಿನ ಒಳಗೆ ಕೇಬಲ್ ಬಳಸಿಕೊಂಡು ವಿದ್ಯುತ್ ತೆಗೆದುಕೊಂಡು ಹೋಗುವ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ 400ಕೆವಿ ವಿದ್ಯುತ್ ಮಾರ್ಗ ರಚನೆಯ ಜವಾಬ್ದಾರಿ ಹೊತ್ತವರು ಯಾರೆಂಬ ಮಾಹಿತಿ ಇಲ್ಲದೆ, ಜಿಲ್ಲಾಧಿಕಾರಿ ಏಕಾಏಕಿ ಅನುಮೋದನೆ ನೀಡುವುದು ಸಮಂಜಸವಲ್ಲ. ರೈತರ ಕೃಷಿ ಭೂಮಿ ಹಾಗೂ ಅರಣ್ಯ ನಾಶಕ್ಕೆ ಜಿಲ್ಲಾಧಿಕಾರಿ ಓರ್ವನೇ ಕಾರಣವಾಗಿದ್ದಾನೆ. ಸಮಾನ್ಯ ರೈತನಿಗೆ ಮಾಹಿತಿ ನೀಡದೇ ಜಮೀನಲ್ಲಿ ಟವರ್ ಗಾಗಿ ಗುಂಡಿ ತೆಗೆಯುವ ಕಾರ್ಯ ಮಾಡಿದರೆ ಸಾಮಾನ್ಯ ಜನರು ಬದುಕುವುದು ಕಷ್ಟಕರ. ರೈತ ಸಂಘದ ಮನವಿಗೆ ಸ್ಪಂದಿಸದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕುಳಿತು ಕಡತಗಳಿಗೆ ಸಹಿ ಹಾಕುವುದು ಬೇಡ. ಹಳ್ಳಿಗಳಿಗೆ ಆಗಮಿಸಿ, ಸಮಸ್ಯೆಗಳನ್ನು ಗಮನಿಸಿ ಪರಿಹಾರ ನೀಡುವ ಕಾರ್ಯವನ್ನು ಮಾಡಬೇಕು. ಜನರ ಮನವಿಗಳಿಗೂ ಸಮರ್ಪಕವಾಗಿ ಸ್ಪಂದನೆ ಸಿಗುತ್ತಿಲ್ಲ ಇಂತಹ ನಡವಳಿಕೆಯನ್ನು ರೈತ ಸಂಘ ಸಹಿಸುವುದಿಲ್ಲ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುಧೀಶ್ ಮೈಯ್ಯ, ಉಪಾಧ್ಯಕ್ಷ ರೋನಾಲ್ಡ್ ಡಿಸೋಜ ಅಮುಂಜೆ ಪೆÇಳಲಿ, ವಿಟ್ಲ ಕಾರ್ಯದರ್ಶಿ ಸುಧೀಶ್ ಭಂಡಾರಿ ಉಪಸ್ಥಿತರಿದ್ದರು.