Wednesday, October 18, 2023

ಕಸ ಸಂಗ್ರಹಿಸದಿದ್ದರೂ ಹಣ ವಸೂಲಿ : ಬಂಟ್ವಾಳ ಪುರಸಭೆ ಸಭೆಯಲ್ಲಿ ಸದಸ್ಯರು ಅಸಮಾಧಾನ

Must read

ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಗೆ ಒಮ್ಮೆ ಕಸ ಸಂಗ್ರಹದ ವಾಹನ ಮನೆ ಮನೆ ಬರುತ್ತಿರುವುದರಿಂದ ಜನರು ರಸ್ತೆ ಬದಿಯಲ್ಲಿ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದಾರೆ. ಹೀಗಾಗಿ ಮೆಲ್ಕಾರ್, ಬಿ.ಸಿ.ರೋಡ್, ತಲಪಾಡಿ ಮೊದಲಾದ ಕಡೆ ರಸ್ತೆ ಬದಿಯೇ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ ಎಂದು ಪುರಸಭೆಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭಾ ಅಧ್ಯಕ್ಷ ಮುಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿ ನಡೆದ ಚರ್ಚೆಯಲ್ಲಿ, ಕಸ ಸಂಗ್ರಹದ ಮಾಸಿಕ ಹಣವನ್ನು ಮನೆ ತೆರಿಯೊಂದಿಗೆ ವಸೂಲಿ ಮಾಡಲಾಗುತ್ತಿದೆ. ಆದರೆ ಎಲ್ಲಿಯೂ ಸಮರ್ಪಕವಾಗಿ ಕಸ ಸಂಗ್ರಹವಾಗುತ್ತಿಲ್ಲ. ಅಧಿಕಾರಿಗಳ ಬಳಿ ಕೇಳಿದರೆ ಕಸ ಸಂಗ್ರಹಕ್ಕೆ ವಾಹನದ ಕೊರತೆ ಇದೆ ಎಂದು ಹೇಳುತ್ತಾರೆ ಎಂದು ಸದಸ್ಯರು ಪಕ್ಷ ಭೇದ ಮರೆತು ದೂರಿದರು.

ಕಸ ಸಂಗ್ರಹಕ್ಕೆ ವಾಹನದ ಕೊರತೆ ಇದೆ ಎಂದು ಅಧಿಕಾರಿಗಳ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ವಾಹನಗಳ ಖರೀದಿಗೆ 90 ಲಕ್ಷ ರೂಪಾಯಿ ಇಟ್ಟು ಮೂರು ವರ್ಷಗಳಾದವು. ಹಣ ಇದ್ದರೂ ವಾಹನ ಖರೀದಿಸುವ ಬದ್ಧತೆ ಅಧಿಕಾರಿಗಳಿಗೆ ಇಲ್ಲ ಎಂದು ಮುಖ್ಯಾಧಿಕಾರಿ ಮತ್ತು ಇಂಜಿನಿಯರಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಜಿಪನಡು ಗ್ರಾಮದಲ್ಲಿ ಪುರಸಭೆಗೆ ಸೇರಿದ ಡಂಪಿಂಗ್ ಯಾರ್ಡ್ ಕಾಮಗಾರಿ ಈ ವರೆಗೆ ಪೂರ್ಣಗೊಂಡಿಲ್ಲ. ಅದರ ಬಗ್ಗೆಯೂ ಕೇಳುವವರಿಲ್ಲ. ಕಾಮಗಾರಿಯ ಗುತ್ತಿಗೆ ಪಡೆದವರಲ್ಲಿ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಬೇಕು. ತಪ್ಪಿದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಡಿಗೆ ಸೇರಿಸಬೇಕು ಎಂದು ಸದಸ್ಯರು ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.

ಬಿ.ಸಿ‌.ರೋಡ್ ಬಳಿಯ ಜೋಡುಮಾರ್ಗ ಮತ್ತು ಬಂಟ್ವಾಳದ ಸಾಲುಮರದ ತಿಮ್ಮಕ್ಕ ಉದ್ಯಾನವನವನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದೆ. ಆದರೆ ಈ ಎರಡೂ ಉದ್ಯಾನ ವನ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಕಳೆಗುಂದಿದೆ. ಉದ್ಯಾನವನದಲ್ಲಿರುವ ಸಿಮೆಂಟ್ ಕುರ್ಚಿಗಳು ತುಂಡಾಗಿವೆ. ಮಕ್ಕಳ ಆಟಿಕೆಗಳು ನಾಶವಾಗಿದೆ. ಎರಡೂ ಉದ್ಯಾನವನ್ನು ನಿರ್ವಹಣೆ ಮಾಡಲು ಪುರಸಭೆ ಮುಂದಾಗಬೇಕು ಎಂದು ಸದಸ್ಯರು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಸ್ವ ಉದ್ಯೋಗಕ್ಕೆ ಒಂದು ಲಕ್ಷ ರೂಪಾಯಿ ಪುರಸಭೆಯಿಂದ ಸಬ್ಸಿಡಿ ನೀಡಲಾಗುತ್ತಿದೆ. ಆದರೆ ಯಾವುದೇ ಬ್ಯಾಂಕ್ ನವರು ಅದಕ್ಕೆ ಬೇಕಾದ ಸಾಲ ನೀಡುತ್ತಿಲ್ಲ. ಆ ದಾಖಲೆ ಪತ್ರ ಈ ದಾಖಲೆ ಪತ್ರ ಎಂದು ಅಲೆದಾಡಿಸುತ್ತಾರೆ. ಹಾಗಾಗಿ ಪುರಸಭೆಯ ಅಧಿಕಾರಿಗಳು ಬ್ಯಾಂಕ್ ಮ್ಯಾನೇಜರ್ ಬಳಿ ಮಾತನಾಡಿ ಅರ್ಜಿ ಹಾಕಿದವರಿಗೆ ಸಾಲ ನೀಡುವಂತೆ ಸದಸ್ಯರು ಆಗ್ರಹಿಸಿದರು.

ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ವೇದಿಕೆಯಲ್ಲಿ ಇದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ಅಬೂಬಕ್ಕರ್ ಸಿದ್ದೀಕ್, ಮುನೀಶ್ ಅಲಿ, ಇದ್ರೀಶ್, ಝೀನತ್, ವಾಸು ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಹಸೈನಾರ್, ಮುಹಮ್ಮದ್ ನಂದರಬೆಟ್ಟು, ಲುಕ್ಮಾನ್, ಗೋವಿಂದ ಪ್ರಭು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.

More articles

Latest article