ಬಂಟ್ವಾಳ : ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ನಿಯಮಿತ ಪುತ್ತೂರು ಇದರ ಕುಂಬಾರಿಕೆ ಉತ್ಪನ್ನಗಳ ಮಾರಾಟ ಮಳಿಗೆ ಬಿ.ಸಿ.ರೋಡಿನ ವಿಧಾನ ಸೌಧದ ಎದುರುಗಡೆ ಇರುವ ಅಚ್ಚುತ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಸಹಕಾರಿ ಸಂಘದ ಸ್ವಂತ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮುಖ್ಯ ಸಂಘದ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ಧನ ಮೂಲ್ಯ ತಿಳಿಸಿದರು.
ಅವರು ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 1958ರಲ್ಲಿ ಪ್ರಾರಂಭಗೊಂಡ ಸಂಘವು ಗ್ರಾಮೀಣ ಕುಶಲ ಕರ್ಮಿಗಳಿಗೆ ಆಧುನಿಕ ರೀತಿಯ ತರಬೇತಿಯನ್ನು ನೀಡಿ ಅವರು ತಮ್ಮ ಗುಡಿಕೈಗಾರಿಕೆಯನ್ನು ಸ್ವತಂತ್ರವಾಗಿ ನಡೆಸಲು ಅನುಕೂಲವಾಗುವಂತೆ ಮಾರ್ಗದರ್ಶನ ನೀಡುತ್ತಿದೆ.
ಸಂಘದ ಉತ್ಪಾದನಾ ತರಬೇತಿ ಕೇಂದ್ರದಲ್ಲಿ ಸುಂದರ ಹೂದಾನಿಗಳು, ಮ್ಯಾಜಿಕ್ ಜಗ್‌ಗಳು, ಅಲಂಕಾರಿಕ ಪಾತ್ರೆಗಳು, ನೀರಿನ ಹೂಜಿಗಳು, ಸುಂದರ ವಿವಿಧ ವಿನ್ಯಾಸದ ಹೂ ಚಟ್ಟಿಗಳು, ತಂದೂರಿ ರೊಟ್ಟಿ ತಯರಿಸುವ ಗುಡಾಣಗಳು, ಹೈಟೆಕ್ ಯುಗದ ಹೊಟೇಲ್‌ಗಳನ್ನು ಅಲಂಕರಿಸುವ ಸುಂದರವಾದ ಮಣ್ಣಿನ ಕಲಾಕೃತಿಗಳು, ದಿನಬಳಕೆಯ ಮಣ್ಣಿನ ಪಾತ್ರೆಗಳು ಹಾಗೂ ಇನ್ನೂ ಹಲವು ಜನರ ಬೇಡಿಕೆಗೆ ಅನುಸಾರವಾಗಿ ಎಲ್ಲಾ ರೀತಿಯ ಉತ್ಪನ್ನಗಳು ನಮ್ಮ ಕಾರ್ಯಾಗಾರದಲ್ಲಿ ತಯಾರಾಗುತ್ತಿದೆ ಎಂದು ತಿಳಿಸಿದರು.
ಗುರುವಾರ ನಡೆಯುವ ಸಭಾಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಕೆಐಒಸಿಎಲ್‌ನ ನಿವೃತ್ತ ಅಭಿಯಂತರ ಲೋಕನಾಥ ಡಿ., ಕೆನರಾ ಬ್ಯಾಂಕ್ ಸೀನಿಯರ್ ಮೆನೇಜರ್ ಸುಂದರ ಬಿ. ಮತ್ತು ಪುರಸಭಾ ಸದಸ್ಯ ಹರಿಪ್ರಸಾಧ್ ಭಂಡಾರಿಬೆಟ್ಟು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ, ಉಪಾಧ್ಯಕ್ಷ ದಾಮೋದರ ವಿ., ನಿರ್ದೇಶಕರುಗಳಾದ ಗಣೇಶ್, ಪ್ರಶಾಂತ್ ಬಂಜನ್ ಮತ್ತು ಸೇಸಪ್ಪ ಕುಲಾಲ್ ಉಪಸ್ಥಿತರಿದ್ದರು.