Saturday, October 28, 2023

ಯುವತಿಗೆ ಕಿರುಕುಳ ನೀಡಿ ಸುದ್ದಿಯಾದ ಪ್ರಕರಣ: ಆರೋಪಿಯ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ ಕಮೀಷನರ್ ಎನ್.ಶಶಿಕುಮಾರ್

Must read

ಬಂಟ್ವಾಳ: ಖಾಸಗಿ ಬಸ್‌ನಲ್ಲಿ ಜ.14ರಂದು ಗುರುವಾರ ಪ್ರಯಾಣಿಸುತ್ತಿದ್ದ ಯುವತಿಯೋರ್ವಳಿಗೆ ಪ್ರಯಾಣಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ ಕುರಿತ ಸಾಮಾಜಿಕ ಜಾಲತಾಣದಲ್ಲಿ ಯುವತಿಯು ಪೋಸ್ಟ್ ಹಂಚಿಕೊಂಡಿರುವುದು ಗಮನಕ್ಕೆ ಬಂದ ಬಳಿಕ ಯುವತಿ ಯ ಸಂಪರ್ಕಿಸಲಾಯಿತು. ಬಳಿಕ ಯುವತಿಯೇ ಉಳ್ಳಾಲ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗುವುದು. ಈ ಬಗ್ಗೆ ಕ್ರಮ ಕೈಗೊಳ್ಳಲು ಡಿಸಿಪಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.ಜೊತೆಗೆ ಬಸ್ ಮಾಲೀಕರನ್ನು ಕರೆದು ಸಭೆ ಈ ಬಗ್ಗೆ ಜಾಗೃತಿಯನ್ನು ಮೂಡಿಸಲು ತಿಳಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಬಸ್‌ಗಳಲ್ಲಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದರೆ ಇಂತಹ ಘಟನೆಗಳನ್ನು ತಡೆಗಟ್ಟಬಹುದು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಮಹಿಳಾ ತಂಡವೊಂದನ್ನು ರಚಿಸಿ, ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಚಿಂತಿಸಿದ್ದೇವೆ. ಶೀಘ್ರದಲ್ಲಿಯೇ ಈ ಕಾರ್ಯಾಚರಣೆ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಿದರು.

*ಯುವತಿಗೆ ಕಿರುಕುಳ ನೀಡಿದ ಘಟನೆಯ ಏನು ಗೊತ್ತೇ?* 

ಜ.14ರಂದು ಅಪರಾಹ್ನ 3:45ರ ಸುಮಾರಿಗೆ ಯುವತಿಯೊಬ್ಬಳು ಖಾಸಗಿ ಬಸ್‌ನಲ್ಲಿ ದೇರಳಕಟ್ಟೆಯಿಂದ ಪಂಪ್‌ವೆಲ್ ಕಡೆಗೆ ತೆರಳುತ್ತಿದ್ದ ವೇಳೆ ಯುವತಿ ಪಕ್ಕದಲ್ಲಿ ಕುಳಿತ ಅಪರಿಚಿತ ವ್ಯಕ್ತಿಯೊಬ್ಬ ಮೊದಲು ಆಕೆಯ ದೇಹ ಸ್ಪರ್ಶಿಸಲು ಆರಂಭಿಸಿದ್ದಾನೆ. ಈ ವೇಳೆಯಲ್ಲಿ ಯುವತಿ ವಿರೋಧ ವ್ಯಕ್ತಪಡಿಸಿದರೂ ಆಕೆಯ ಬೆಂಬಲಕ್ಕೆ ಬಸ್ಸಿನಲ್ಲಿದ್ದ ಯಾವ ಪ್ರಯಾಣಿಕರೂ ಮುಂದಾಗಿರಲಿಲ್ಲ. ಚಾಲಕ, ಬಸ್ ನಿರ್ವಾಹಕರೂ ಸ್ಪಂದಿಸಿರಲಿಲ್ಲವೆಂದು ಯುವತಿ ಇನ್‌ಸ್ಟಾಗ್ರಾಂನಲ್ಲಿ ಘಟನೆಯ ವಿವರ ಹಂಚಿಕೊಂಡಿದ್ದರು ಎಂದು ಆಯುಕ್ತರು ಹೇಳಿದರು.

ಇಂತಹ ಘಟನೆಯು ಯಾವುದೇ ಭಾಗದಲ್ಲಿ ನಡೆದರೂ 112 ನಂಬರ್‌ಗೆ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದರು.

ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಶೀಘ್ರದಲ್ಲಿ ಪತ್ತೆಹಚ್ಚಿ, ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

More articles

Latest article