ಬಂಟ್ವಾಳ : ಮತದಾನದ ಹಕ್ಕು ದೇಶದ ನಾಗರೀಕರಿಗೆ ಸಿಕ್ಕಿರುದ ದೊಡ್ಡ ಗೌರವ, ಇದನ್ನು ಮನನ ಮಾಡಿಕೊಂಡು ನಿಷ್ಠೆ ಹಾಗೂ ಜವಬ್ದಾರಿಯಿಂದ ಚಲಾಯಿಸಬೇಕು ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್ ಹೇಳಿದರು.
ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾನ ಪ್ರಕ್ರಿಯೆಯ ಅಕ್ರಮದಲ್ಲಿ ಭಾಗವಹಿಸುವವರ ಬಗ್ಗೆಯೂ ಇಲಾಖೆಗೆ ಮಾಹಿತಿ ನೀಡಿ ಅಂತವರ ವಿರುದ್ಧವೂ ಜಾಗೃತರಾಗಬೇಕಾಗಿದೆ ಎಂದರು.
ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿ ಗಳು ಮತದಾನ, ಪ್ರಜಾಪ್ರಭುತ್ವ ಹಾಗೂ ಮತದಾರರ ಬಗ್ಗೆ ತಿಳಿದುಕೊಂಡ ವಿಚಾರಗಳನ್ನು ಮತ್ತಷ್ಟು ಮಂದಿಗೆ ತಿಳಿಸುವಂತಾಗಬೇಕುಎಂದು ಅವರು ಹೇಳಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿ, ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಮತದಾನ ಹಾಗೂ ಸಂಸದೀಯ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ತಿಳಿಸಿದಾಗ, ಮುಂದಿನ ಹಂತದಲ್ಲಿ ಪ್ರಜ್ಞಾವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ಮತದಾನ ಹಕ್ಕು ಕುರಿತಾಗಿ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ ಎಂದರು.
ಇದೇ ಸಂದರ್ಭ ಮತದಾರರ ದಿನಾಚರಣೆಯ ಅಂಗವಾಗಿ ದ.ಕ.ಜಿಲ್ಲಾ ಸ್ವೀಪ್ ಸಮಿತಿ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನಗಳನ್ನು ವಿತರಿಸಲಾಯಿತು. ಹೊಸ ಮತದಾರರಿಗೆ ಡಿಜಿಟಲ್ ಗುರುತಿನ ಚೀಟಿಯನ್ನು ಇದೇ ಸಂದರ್ಭ ವಿತರಿಸಲಾಯಿತು.
ಕ್ಷೇತ್ರ ಸಂಯೋಜಕಿ ಸುಜಾತ ಕುಮಾರಿ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು.
ಚುನಾವಣೆ ಶಿರಸ್ತೇದಾರ್ ರಾಜೇಶ್ ನಾಯ್ಕ್, ಚುನಾವಣೆ ಶಾಖೆಯ ಪ್ರಥಮ ದರ್ಜೆ ಸಹಾಯಕರಾದ ರಾಜ್ ಕುಮಾರ್, ಕಾರ್ತಿಕ್, ಕೇಂದ್ರ ಸ್ಥಾನಿಯ ಶಿರಸ್ತೇದಾರ್ ಅಣ್ಣು ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.