ಬಂಟ್ವಾಳ : ಶೈಕ್ಷಣಿಕ ರಂಗದಲ್ಲಿ ಮುಂದುವರೆದು ಪ್ರತಿ ಮನೆಯಲ್ಲೂ ಕೂಡ ಒಬ್ಬ ವಿದ್ಯಾ ಧನಿಕ ನಿರುವುದು ಕಾಲದ ಬೇಡಿಕೆಯಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅಸ್ತಿತ್ವವನ್ನು ಉಳಿಸಲು, ಹಕ್ಕನ್ನು ಕೇಳಲು, ಕಚೇರಿಗಳ ಮುಂದೆ ಮಂಡಿಯೂರಿ ನಿಲ್ಲುವ ಅವಕಾಶವನ್ನು ಸಮುದಾಯ ಉಂಟುಮಾಡಿ ಕೊಡಬಾರದು. ಪ್ರತಿ ಮೊಹಲ್ಲಾಗಳ ಕೂಡ ಮುಂಜಾಗ್ರತೆ ವಹಿಸಿ ನಮ್ಮ ಮಕ್ಕಳು ಶಿಕ್ಷಣ ವಂಚಿತರಾಗದಂತೆ ಜಾಗ್ರತೆ ವಹಿಸುವುದು ಕಡ್ಡಾಯ ಎಂದು ದಕ್ಷಿಣಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದರು. ಶೈಕ್ಷಣಿಕ ರಂಗದಲ್ಲಿ ಅಪಾರ ಕೊಡುಗೆಯನ್ನು ನೀಡಿದ ಜಿಲ್ಲೆ ಕಂಡ ಪರಮೋನ್ನತ ವಿದ್ವಾಂಸರ ಜೀವನವು ಅದಕ್ಕೆ ಮಾದರಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉನ್ನತ ವಿದ್ವಾಂಸರಾಗಿ ಶೈಕ್ಷಣಿಕ ರಂಗದಲ್ಲಿ ಮಹೋನ್ನತ ಪಾತ್ರವಹಿಸಿ, ಧಾರ್ಮಿಕ ಸಾಮಾಜಿಕ ರಂಗದಲ್ಲಿ ನಾನಾ ರೀತಿಯ ಕೊಡುಗೆಯನ್ನು ನೀಡಿದ ಜಿಲ್ಲೆಯ ಪರಮೋನ್ನತ ಖಾಝಿಗಳಾಗಿದ್ದ ಶೈಖುನಾ ಕೋಟ ಉಸ್ತಾದ್ ಶಹೀದೇ ಮಿಲ್ಲತ್ ಸಿಎಂ ಉಸ್ತಾದ್ ಇವರ ಜೀವನ ಚರಿತ್ರೆ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪಾಣೆಮಂಗಳೂರು ಸಮೀಪದ ನೆಹರುನಗರ ಮಸೀದಿ ವಠಾರದಲ್ಲಿ ಜರಗಿದ ಸೆಮಿನಾರ್ ಹಾಗೂ ಅನುಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನುಅರ್ಶದೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷ ಕೆ.ಯು. ರಹ್ಮಾನ್ ಅರ್ಶದಿ ಕೋಲ್ಪೆ ವಹಿಸಿದ್ದರು.
ಅಸ್ಸಯ್ಯದ್ ಅಕ್ರಮ್
ಅಲೀ ರಹ್ಮಾನಿ ತಂಗಳ್ ಉದ್ಘಾಟಿಸಿ ಮಹಾ ಸಾಧಕರಾಗಿದ್ದ ಮಹಾನುಭಾವರು ಖಗೋಳ ಶಾಸ್ತ್ರಜ್ಞರು ಕೂಡ ಆಗಿದ್ದರು. ಖಗೋಳ ಶಾಸ್ತ್ರದ ಬಗ್ಗೆ ಅರಬಿ ಇಂಗ್ಲಿಷ್ ಮಲಯಾಳಂ ಭಾಷೆಯಲ್ಲಿ ಗ್ರಂಥಗಳನ್ನು ಕೂಡ ರಚಿಸಿದ್ದು ಇವರ ಜೀವನ ಚರಿತ್ರೆಯು ಬರುವ ತಲೆಮಾರಿಗೆ ಮಾರ್ಗದರ್ಶನವೂ ಉದಾತ್ತ ಮಾದರಿಯು ಕೂಡಾ ಆಗಿದ್ದರಿಂದ ಉಸ್ತಾದರ ಪೂರ್ವ ವಿದ್ಯಾರ್ಥಿ ಸಂಘಟನೆ ಅರ್ಶದೀಸ್ ಅಸೋಶಿಯೇಶನ್ ಕೇಂದ್ರ ಸಮಿತಿ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅರ್ಶದಿ ರೈಟಿಂಗ್ ಹಬ್ ಜವಾಬ್ದಾರಿಯನ್ನು ನೆರವೇರಿಸಿದಂತಾಗಿದೆ ಎಂದರು. ಹಸ್ಸನ್ ಅರ್ಶದಿ ಬೆಳ್ಳಾರೆ ಪ್ರಾಸ್ತಾವಿಕ, ಸಲೀಂ ಅರ್ಶದಿ ದೆಮ್ಮಲೆ ಪುಸ್ತಕ ಪರಿಚಯ, ಅಡ್ವೋಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣಗೈದರು. ನೆಹರು ನಗರ ಜಮಾತ್ ಅಧ್ಯಕ್ಷ ಪಿ.ಎಸ್. ಅಬ್ದುಲ್ ಹಮೀದ್ ಮೊದಲ ಕೃತಿ ಸ್ವೀಕರಿಸಿದರು.
ಅಸ್ಸಯ್ಯದ್ ಬುರ್ಹಾನ್ ತಂಗಳ್ ಅಲ್ ಬುಖಾರಿ ಕಾಸರಗೋಡು, ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಮೌಲಾನ ಅಬ್ದುರ್ರಝಾಕ್ ಹಾಜಿ ಮಲೇಶಿಯಾ ಕಬಕ, ದಾರುನ್ನೂರ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಬ್ದುಲ್ ರಜಾಕ್ ಹಾಜಿ , ಫಕೀರಪ್ಪ ಮಾಸ್ಟರ್ ದಾರುನ್ನೂರ್, ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ಹಕೀಂ ಪರ್ತಿಪ್ಪಾಡಿ, ಅಬ್ದುಲ್ ರಹಿಮಾನ್ ಫೈಝಿ, ಶಂಸುದ್ದೀನ್ ಹನೀಫಿ, ಸಲೀಂ ನಹರುನಗರ ಮೊದಲಾದವರು ಉಪಸ್ಥಿತರಿದ್ದರು.