ನೆನಪು ಮಾಡಬೇಕೆನಿಸಿತು
ಈ ಇಮೋಜಿ
ಬರುವ ಮೊದಲು
ನಗು-ಅಳುವನ್ನು
ತೋರಿಸಿರುವುದು ಹೇಗೆ..!?
ಅದೆಲ್ಲಿಂದಲೋ ಎಲ್ಲಿಗೋ
ಮಾತನ್ನು ಕಳಿಸಿದ್ದಿದೆ..
‘ಪ್ರಿಯ…’
ಅಮ್ಮ,ಅಪ್ಪ,ಅಜ್ಜ,ಅಜ್ಜಿ,ಗೆಳೆಯ,ಗೆಳತಿ…
ಹೀಗೆ ಪ್ರಾರಂಭವಾದ
ಮಾತಿನಲ್ಲಿ ಅಲ್ಲಲ್ಲಿ ಖುಷಿ
ಅಲ್ಲಲ್ಲಿ ದುಃಖ
ಮತ್ತೆ ಕುತೂಹಲ, ಕೋಪ
ಹೀಗೆ
ಎಲ್ಲಾ ಭಾವಕ್ಕೂ
ಒಂದೊಂದು ಪದಗಳ ಜೋಡಿಸಿ
ಬರೆದ ಪತ್ರ
ನಗು-ನೋವನ್ನು
ವಿನಿಮಯ ಮಾಡಿ ಕೊಂಡಿದೆ..
ನಿಂತಲ್ಲೇ ನಿಂತು
ಎಲ್ಲರೂ ಜೊತೆಯಾಗಿ
ಗಂಟೆಗಟ್ಟಲೆ ಮಾತಾಡಿದಾಗ
ಬಿಲ್ ಪೇ ಮಾಡುವ
ಅಪ್ಪನ ಎದೆಯಲ್ಲಿ
ಸಣ್ಣಗೆ ನೋವು ಕಂಡದ್ದಿದ್ದೆ..
ಕಿವಿಗಿಟ್ಟ ಆ ರಿಸೀವರ್
ಅದರಲ್ಲೇ ಸವಿ ಮಾತು
ಅಳುವ ನಗುವ ಧ್ವನಿ
ಸ್ವರವೇ ಇಲ್ಲಿ
ಭಾವನೆಗಳ ವಿನಿಮಯ
ಆ ಲ್ಯಾಂಡ್ ಫೋನ್
ಕೈ ಕೊಟ್ಟದ್ದೇ ಹೆಚ್ಚು
ಆದರೂ
ಸಂಬಂಧಗಳ ಹತ್ತಿರ
ಇಡುವ ಪ್ರಯತ್ನ
ಮಾಡುತ್ತಲೇ ಇತ್ತು..!
ಇಂದೇನು
ಯಾವ ಹಂಗು ಇಲ್ಲ
ಯಾರು ಯಾರ ಜೊತೆಯೂ
ಯಾವ ಹೊತ್ತಲ್ಲೂ
ಯಾವ ಸ್ಥಳದಲ್ಲೂ
ಮಾತಾಡಬಹುದು
ಬರೀ ಬೆರಳಿನಿಂದಲೇ..
ಇಲ್ಲಿ ಇಮೋಜಿಗಳೇ
ಭಾವನೆಗಳ ವಿನಿಮಯ
ಮಾಡುತ್ತಿದೆ..
ಜಗತ್ತೇನೋ
ಇವತ್ತು ಅಂಗೈಯಲ್ಲಿ…
ಹಾಗೆಯೇ
ಭಾವನೆಗಳು ಬರೀ
ಬೆರಳಿನಲ್ಲಿ..!?
✍️ಯತೀಶ್ ಕಾಮಾಜೆ