ನನ್ನ ಎದೆಯ ನೂರು ಮಾತು
ಹೇಳದೇನೆ ಉಳಿದಿವೆ
ಬೇಗುದಿಯ ಬೆಂದೊಡಲಲಿ
ದಿನಗಳೆಲ್ಲ ಕಳೆದಿವೆ
ಬಾರದಿರುವ ಬಯಕೆಯೆಲ್ಲ
ತುಂಬಿ ನಿಂತೆ ಎದೆಯಲಿ
ನಿನ್ನ ನೋಟ ತಾಗಿಸಿಯೆ
ಹೊಡೆದೆ ನನ್ನ ಗದೆಯಲಿ
ಕಳ್ಳ ಕೃಷ್ಣನೆಂಬ ನುಡಿಯ
ಕೇಳಿ ತನುವು ಸೊರಗಿತು
ತುಂಟನಲ್ಲ ಧೂರ್ತನವನು
ಎನಲು ಮನವು ಕೊರಗಿತು
ರಾಧೆ ಒಡಲ ದನಿಗೆ ನೀನೆ
ತಾಳ ಮೇಳವಾದೆಯು
ಇರುವನಕ ನಿನ್ನ ಒಲವು
ಇಲ್ಲ ಎನಗೆ ಬಾಧೆಯು
ದೇವ ನೀನು ಎಂದ ಕೆಲರು
ಗುಡಿಯ ಕಟ್ಟಿ ಕುಣಿವರು
ಬೆರೆಯದೇನೆ ಮನದಿ ಹಲರು
ಹೆಜ್ಜೆ ಕುಟ್ಟಿ ದಣಿವರು
ಯಾರ ಮಾತು ಬೇಡ ನನಗೆ
ಸಾಕು ನಿನ್ನ ಒಲುಮೆಯು
ಗಾಳಿ ಹಾಕು ಬಿಡದೆ ನೀನು
ಕಾಯದಿರಲಿ ಕುಲುಮೆಯು
#ನೀ.ಶ್ರೀಶೈಲ ಹುಲ್ಲೂರು