Tuesday, October 17, 2023

ಸರಕಾರಿ ಪದವಿ ಪೂರ್ವಕಾಲೇಜು ಬೆಂಜನಪದವು: 72ನೇ ಗಣರಾಜ್ಯೋತ್ಸವ

Must read

ಬಂಟ್ವಾಳ: ಸರಕಾರಿ ಪದವಿ ಪೂರ್ವಕಾಲೇಜು ಬೆಂಜನಪದವಿನ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದ ಜಂಟಿ ಆಶ್ರಯದಲ್ಲಿ 72 ನೇ ಗಣರಾಜ್ಯೋತ್ಸವವನ್ನು ಸರಳ ಮತ್ತು ಅಚ್ಚುಕಟ್ಟಾಗಿ ಆಚರಿಸಲಾಯಿತು. ದಿನದ ಅಂಗವಾಗಿ ಧ್ವಜಾರೋಹಣ ನಡೆಸಿ ಮಾತನಾಡಿದ ಸಂಸ್ಥೆಯ ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷರಾದ ವಾಮನ ಆಚಾರ್ಯ ಇವರು ಭಾರತದ ಸಂವಿಧಾನವು ಬಹಳ ವಿಶಿಷ್ಟವಾಗಿದ್ದು, ಸಂಪೂರ್ಣ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿದೆ. ಪ್ರಜಾಪ್ರಭುತ್ವವೇ ಸಂವಿಧಾನಕ್ಕೆ ಬಹುಮುಖ್ಯ ತಳಹದಿ ಇದನ್ನು ಉಳಿಸಿಕೊಂಡು ಹೋಗುವ ಜವಾಬ್ಧಾರಿ ಪ್ರತಿಯೊಬ್ಬ ಭಾರತೀಯನದ್ದಾಗಿದೆ ಅದನ್ನು ನಾವು ನೀವೆಲ್ಲ ಕಾಪಾಡೋಣ ಎಂಬ ಆಶಯ ವ್ಯಕ್ತಪಡಿಸಿದರು.

ಕಾಲೇಜು ವಿಭಾಗದ ಅರ್ಥಶಾಸ್ತ್ರ ಉಪನ್ಯಾಸಕರಾದ ನೂರ್ ಮಹಮ್ಮದ್ ‌ಇವರು ದಿನದ ಮಹತ್ವ ತಿಳಿಸುತ್ತಾ, ಸಂವಿಧಾನ ಶಿಲ್ಪಿ ಬಿ.ಆರ್ .ಅಂಬೇಡ್ಕರ್ ‌ಅವರ ಜೀವ, ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಹಾಗೆಯೇ ಸಂವಿಧಾನಕರಡು ಪ್ರತಿರಚನೆಯಲ್ಲಿ ಪಾಲ್ಗೊಂಡಿದ್ದ ಹಲವು ಗಣ್ಯರನ್ನು ಸ್ಮರಿಸುವುದರ ಜೊತೆಗೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರಾದ ಬೆನಗಲ್ ನರಸಿಂಗ ರಾವ್‌ ಇವರು ಸಂವಿಧಾನ ಸಭೆಯ ಸಾಂವಿಧಾನಿಕ ಸಲಹೆಗಾರರಾಗಿ ನಿರ್ವಹಿಸಿದ ಕೆಲಸ ಕಾರ್ಯಗಳನ್ನು ಶ್ಲಾಘಿಸುತ್ತಾ ಸರ್ವರಿಗೂ ದಿನದ ಶುಭಾಶಯ ತಿಳಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಮಣಿಕಂಠ ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ವಹಿಸಿದರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಚೇತನಾವಾಣಿ ಸಂಪೂರ್ಣ ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಧರ ಅಡಿಗ ಇವರು ಸರ್ವರನ್ನೂ ಆದರದಿಂದ ಸ್ವಾಗತಿಸಿ, 72ನೇ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು. ಉಪಪ್ರಾಂಶುಪಾಲರಾದ ಶ್ರೀದೇವಿ ಪಿ ವಂದನಾರ್ಪಣೆ ನಿರ್ವಹಿಸಿದರು. ವಿದ್ಯಾರ್ಥಿನಿಯರು, ಶಿಕ್ಷಕಿ ಮರ್ಲಿನ್ ಮೇಬಲ್ ಮಸ್ಕರೇನ್ಹಸ್ ‌ಇವರ ಮಾರ್ಗದರ್ಶನದಲ್ಲಿ ವಂದೇ ಮಾತರಂಧ್ವಜಗೀತೆ, ರಾಷ್ಟ್ರಗೀತೆಗಳನ್ನು ಹಾಡಿದರು. ವಿದ್ಯಾರ್ಥಿನಿ ಶ್ರೇಯಾ ಸಂವಿಧಾನದ ಪೀಠಿಕೆಯಥಾವತ್ತಾಗಿ ಓದಿ ತಿಳಿಸಿದಳು. ಉಳಿದಂತೆ ಸರ್ವ ಶಿಕ್ಷಕ, ಶಿಕ್ಷಕೇತರ, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದು ಸಹಕರಿಸಿದರು.

 

More articles

Latest article