ಮಂಗಳೂರು: ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರವಾಗಿದ್ದು, ಸಮಾನತೆ ಸಾಮಾಜಿಕ ನ್ಯಾಯ ಮತ್ತು ಸ್ವತಂತ್ರತೆ ಎಂಬ ಮೂರು ತತ್ವಗಳ ಭದ್ರ ಅಡಿಪಾಯವನ್ನು ಹೊಂದಿದೆ. ಈ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಬರದಂತೆ ನಾವೆಲ್ಲ ಕೆಲಸ ಮಾಡಿ ದೇಶದ ಪ್ರಗತಿಗೆ ಕಟಿಬದ್ಧರಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಪ್ರಜೆಗಳೇ ನಡೆಸುವ ಈ ಸಾಂವಿಧಾನಿಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಈ ದಿನ ನಾವೆಲ್ಲ ನಮ್ಮ ತಪ್ಪು ಒಪ್ಪುಗಳನ್ನು ವಿಮರ್ಶಿಸಿ ಸಿಂಹಾವಲೋಕನ ಮಾಡಿ, ದೇಶಕ್ಕಾಗಿ ನಮ್ಮನ್ನು ಮಗದೊಮ್ಮೆ ಸಮರ್ಪಿಸಿಕೊಳ್ಳೋಣ ಎಂದು ದ.ಕ. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ಅಭಿಪ್ರಾಯಪಟ್ಟರು.



ಅವರು ಇಂದು ಮೇರಿ ಹಿಲ್‌ನಲ್ಲಿರುವ ಗೃಹರಕ್ಷಕ ದಳ ಕಛೇರಿಯಲ್ಲಿ ಬೆಳಗ್ಗೆ 7.15ಕ್ಕೆ ಧ್ವಜಾರೋಹಣ ನಡೆಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗುರುರಾಜ್ ಯಂ. ಐಷರ್ ಡೀಲರ್, ಪಿಎಸ್.ಎನ್. ಆಟೋಮೊಟಿವ್ ಮಾರ್ಕೆಟಿಂಗ್‌ನ ಸೀನಿಯರ್ ಸರ್ವಿಸ್ ಮೇನೇಜರ್ ಇವರು ಮಾತನಾಡುತ್ತಾ, ಸಂವಿಧಾನದ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಗೃಹರಕ್ಷಕರು ಮತ್ತು ಪೊಲೀಸರ ಪಾತ್ರ ಹಿರಿದಾಗಿದೆ. ಸಾರ್ವಜನಕರು ಕಾರ್‍ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಜೊತೆ ಕೈಜೋಡಿಸಿದರೆ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ನುಡಿದರು.
ಈ ಸಂದರ್ಭ ಕುಮಾರಿ ನಿಧಿ ಜಿ. ಅವರು ಮಾತನಾಡಿ ಎಲ್ಲರಿಗೂ ಸ್ವತಂತ್ರವಾಗಿ ಜೀವಿಸಲು ಹಾಗೂ ಶಿಕ್ಷಣ ಪಡೆಯಲು ಅವಕಾಶ ನೀಡಿದ ಇಂತಹ ಸಂವಿಧಾನವನ್ನು ಜಾರಿಗೆ ತರಲು ಶ್ರಮಿಸಿದ ಎಲ್ಲಾ ಹಿರಿಯರನ್ನು ಸ್ಮರಿಸುತ್ತೇನೆ ಎಂದರು. ಈ ಸಂದರ್ಭ ಕಚೇರಿ ಪ್ರಥಮ ದರ್ಜೆ ಸಹಾಯಕರಾದ ಅನಿತಾ ಟಿ.ಎಸ್., ಮಂಗಳೂರು ಘಟಕದ ಘಟಕಾಧಿಕಾರಿಯಾದ ಮಾರ್ಕ್‌ಶೇರ್, ಪುತ್ತೂರು ಘಟಕಾಧಿಕಾರಿ, ಅಭಿಮನ್ಯು ರೈ, ಹಿರಿಯ ಗೃಹರಕ್ಷಕರಾದ ರಮೇಶ್ ಭಂಡಾರಿ, ಸುನಿಲ್ ಕುಮಾರ್ ಹಾಗೂ ಗೃಹರಕ್ಷಕ/ಗೃಹರಕ್ಷಕಿಯರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.