ಬಂಟ್ವಾಳ : ಅಯ್ಯೋಧ್ಯಾ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಪೂರ್ವಭಾವಿಯಾಗಿ ಸಜೀಪ ವಲಯದ ಶ್ರೀರಾಮ ನಾಮ ಭಜನಾ ಸಂಕೀರ್ತನಾ ಯಾತ್ರೆ ನಡೆಯಿತು. ಸಜೀಪ ಮೂಡ ಗ್ರಾಮದ ಕಂದೂರು ಶ್ರೀಕೃಷ್ಣ ಶಿಶುಮಂದಿರ ಹಾಗೂ ಸಜೀಪ ಮುನ್ನೂರು ಗ್ರಾಮದ ಶಾರದಾನಗರ ಶ್ರೀ ಶಾರದಾಂಬಿಕ ಭಜನಾ ಮಂದಿರದಿಂದ ಏಕಕಾಲದಲ್ಲಿ ಸಂಕೀರ್ತನೆ ಯಾತ್ರೆ ಹೊರಟು ಸಜೀಪಮೂಡದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರದಲ್ಲಿ ಸಂಪನ್ನಗೊಂಡು ಜ್ಞಾನ ಮಂದಿರದಲ್ಲಿ ಪ್ರಭು ಶ್ರೀರಾಮಚಂದ್ರನಿಗೆ ಮಂಗಳೋತ್ಸವ ನಡೆಯಿತು. ನೂರಾರು ರಾಮಭಕ್ತರು ಕಣ್ತುಂಬಿಕೊಂಡರು.
ಪ್ರಸಾದ ವಿತರಣೆಯ ನಂತರ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಧರ್ಮ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಹಾಗೂ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ವಿಭಾಗ ಪ್ರಮುಖರೂ ಆಗಿರುವ ಶರಣ್ ಪಂಪುವೆಲ್ ಇವರು ಮಾತನಾಡಿ ಅಯ್ಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ನಡೆದ ಹೋರಾಟದ ಸಂಪೂರ್ಣ ಚಿತ್ರಣವನ್ನು ರಾಮಭಕ್ತರ ಮುಂದೆ ವಿವರಿಸಿದರು. ಇದೇ ಸಂದರ್ಭದಲ್ಲಿ ಭಜನಾ ಸಂಕೀರ್ತನ ಯಾತ್ರೆಯಲ್ಲಿ ಪಾಲ್ಗೊಂಡ ಭಜನಾ ಮಂಡಳಿಗಳಿಗೆ ಶ್ರೀರಾಮನ ಮೂರ್ತಿ ಮತ್ತು ಗೌರವ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಸಜೀಪ ವಲಯದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಮನೋಹರ ಕರ್ಕೇರಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಜೇಶ್ ಶಾರದಾ ನಗರ ಸ್ವಾಗತಿಸಿದರು. ಸಜೀಪ ಮುನ್ನೂರು ಮಂಡಲ ಅಭಿಯಾನದ ಪ್ರಮುಖರಾದ ಅರುಣ್ ಕುಮಾರ್ ಕುಕ್ಕುದಕಟ್ಟೆ ಪ್ರಾಸ್ತವನೆಗೈದರು. ಸಜೀಪ ಮುನ್ನೂರು ಮಂಡಲ ಅಭಿಯಾನ ಪ್ರಮುಖರಾದ ಸುರೇಶ್ ಬಂಗೇರ ಆರ್ಯಾಪು ವಂದಿಸಿದರು. ಪ್ರಶಾಂತ್ ಕಂದೂರು ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡದ ಉಪಾಧ್ಯಕ್ಷ ಲೋಹಿತ್ ಪಣೋಲಿಬೈಲ್, ಸಜೀಪ ವಲಯ ವಿಶ್ವ ಹಿಂದೂ ಪರಿಷತ್ತಿನ ಜಯಪ್ರಕಾಶ್ ಪೆರ್ವ, ಸಜೀಪ ವಲಯ ಭಜರಂಗದಳ ಸಂಚಾಲಕ ಶರತ್ ಸಜೀಪ ಮತ್ತು ನೂರಾರು ರಾಮಭಕ್ತರು ಉಪಸ್ಥಿತರಿದ್ದರು.