ಲೇ: ರಮೇಶ ಎಂ ಬಾಯಾರು ಎಂ.ಎ. ಬಿ.ಇಡಿ
ಗ್ರಾಮ ಪಂಚಾಯತ್‌ಗಳು ಪ್ರಜಾಪ್ರಭುತ್ವದ ಪ್ರಪ್ರಥಮ ಸೋಪಾನ. ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಗ್ರಾಮಗಳ ನಿಕಟ ಚಿತ್ರಣವನ್ನು ಹೊಂದಿರಲು ಅಸಾಧ್ಯ. ಈ ಸರಕಾರಗಳ ಎಲ್ಲ ಸೌಲಭ್ಯಗಳನ್ನು ಹಳ್ಳಿಗಳಿಗೆ ತಲುಪಿಸಲು ಗ್ರಾಮ ಪಂಚಾಯತ್ ಹೆಚ್ಚು ನಿಷ್ಠವಾಗಿ ತೊಡಗಬೇಕು. ಗಾಂಧೀಜಿಯವರ ರಾಮ ರಾಜ್ಯದ ಕಲ್ಪನೆಯು ಸಾಕಾರವಾಗಲು ಪಂಚಾಯತ್ ಪ್ರತಿನಿಧಿಗಳ ತೊಡಗಿಸುವಿಕೆಯೇ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮ ಪಂಚಾಯತು ಸಾರ್ವಜನಿಕರೊಂದಿಗೆ ಸಮೀಪವರ್ತಿಯಾಗಿದೆ. ಪಂಚಾಯತ್ ಪ್ರತಿನಿಧಿಗಳು ಜನ ಬಯಸಿದ ಗ್ರಾಮ ನಾಯಕರು ಎಂಬುದನ್ನು ಮರೆಯಲಾಗದು. ಗ್ರಾಮದ ಪ್ರಗತಿಯಾದರೆ ದೇಶ ಉನ್ನತಿಗೇರುತ್ತದೆ. ಗ್ರಾಮ ನಿಷ್ಕ್ರಿಯವಾದರೆ ದೇಶದ ಗತಿ ಅಧೋಗತಿಯಲ್ಲವೇ?
ಗ್ರಾಮ ನಾಯಕರು ಗ್ರಾಮದ ಪ್ರತಿಯೊಂದು ಸಮಸ್ಯೆಗಳನ್ನು ಅರಿತಿರುತ್ತಾರೆ. ಸಾರ್ವಜನಿಕರಿಗೆ ಸ್ವಚ್ಛ ಕುಡಿಯುವ ನೀರು, ವಸತಿರಹಿತರಿಗೆ ಸೂರು, ಸಂಪರ್ಕಕ್ಕೆ ಪೂರಕವಾದ- ದಾರಿಗಳು, ರಸ್ತೆಗಳು ಮತ್ತು ಸಂಕಗಳು, ಬೀದಿ ದೀಪಗಳು, ಕೃಷಿಗೆ ಪೂರಕವಾಗಿ ನೀರಾವರಿ ವ್ಯವಸ್ಥೆಗಳು, ಆರೋಗ್ಯರಕ್ಷಣೆಗಾಗಿ ಸಮುದಾಯ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಮುದಾಯ ಭವನ, ಬಸ್ ನಿಲ್ದಾಣಗಳು, ಮಳೆ ಪ್ರವಾಹ ಮತ್ತು ಭೂಸವೆತಗಳ ನಿಯಂತ್ರಣ, ಅರಣ್ಯೀಕರಣ, ಪರಿಸರ ಶುಚಿತ್ವ, ಸಾರ್ವಜನಿಕ ಗ್ರಂಥಾಲಯ, ಸಾರ್ವಜನಿಕ ಸಂತೆ ಕಟ್ಟೆ, ವಿವಿಧ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು, ಪಶು ಸಂಗೋಪನೆ ಹಾಗೂ ಹೈನುಗಾರಿಕೆ, ಭಿಕ್ಷಾಟನೆ ನಿರ್ಮೂಲನ, ಸಾಮುದಾಯಿಕ ಪಿಡುಗುಗಳ ನಿಯಂತ್ರಣ, ದುಶ್ಚಟ ನಿಯಂತ್ರಣ, ಶೈಕ್ಷಣಿಕ ಸೌಲಭ್ಯಗಳ ಉನ್ನತೀಕರಣ, ಗುಡಿ ಕೈಗಾರಿಕೆಗಳಿಗೆ ಕಾಯಕಲ್ಪ, ಮತೀಯ ಹಾಗೂ ಜಾತೀಯ ಸಾಮರಸ್ಯ, ಶಾಂತಿ, ಸಹಕಾರ ಮತ್ತು ನೆಮ್ಮದಿಗಳು ರಾಮರಾಜ್ಯಕ್ಕೆ ಪೂರಕವಾದ ಮೂಲಾಂಶಗಳಲ್ಲಿ ಕೆಲವು.
ಗ್ರಾಮ ನಾಯಕರಿಗೆ ಇಷ್ಟೆಲ್ಲವನ್ನೂ ಸೀಮಿತ ಅವಧಿಯೊಳಗೆ ಮಾಡಲು ಸಾಧ್ಯವೇ ಎಂಬ ಸಂದೇಹ ಆಥವಾ ಆತಂಕ ಸಹಜ. ರಾಜಕೀಯ ರಹಿತವಾದ ಒಂದು ಸಹಯೋಗದ ಚಿಂತನೆಯಿದ್ದಾಗ ಎಲ್ಲವೂ ಸಾಧ್ಯ. ಸಹಯೋಗ ಎಂದಾಗ ಗ್ರಾಮ ನಾಯಕರಿಗೆ ಪಂಚಾಯತ್‌ನ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಪ್ರೇರಣೆ ಮತ್ತು ಸ್ವಯಂ ಸ್ಫೂರ್ತಿಯಿಂದ ಬೆಂಬಲವಾಗಬೇಕು. ಪಂಚಾಯತ್ ಆಡಳಿತ ಎಂಬುದು ಕಾನೂನಿನ ಪರಿಮಿತಿಗೆ ಸೀಮಿತ. ಕಾನೂನು ಮೀರಿ ಪಂಚಾಯತ್ ಏನನ್ನೂ ಮಾಡಲಾಗುವುದಿಲ್ಲ. ಆದರೆ ಕಾನೂನೆಂಬುದು ಸರಕಾರದ ನಿಧಿಯ ವೆಚ್ಚ ಮತ್ತು ಕಾರ್ಯಕ್ರಮಗಳ ಅನುಷ್ಠಾನಗಳಿಗೆ ಸೀಮಿತವೇ ಹೊರತು ಗ್ರಾಮ ವಿಕಾಸಕ್ಕೆ ಪಂಚಾಯತಿನದೇ ಆದ ನಾವಿನ್ಯಶಾಲೀ ಚಿಂತನೆಗಳನ್ನು ಸಂಘಟಿಸುವುದಕ್ಕೆ ಅಡ್ಡಿಯಾಗದು.
ಗ್ರಾಮ ಪಂಚಾಯತ್ ಆರಂಭಿಕ ಹೆಜ್ಜೆಯಾಗಿ ಸಮುದಾಯವನ್ನು, ಸಂಘ ಸಂಸ್ಥೆಗಳ ಪ್ರಮುಖರನ್ನು ಸೇರಿಸಿ ಮಂಥನ ಸಭೆಗಳನ್ನು ಜರಗಿಸಬೇಕು. ಸಭೆಯನ್ನು ಒಂದು ಯಾ ಎರಡು ದಿನ ಪೂರ್ಣಾವಧಿಯಲ್ಲಿ ನಡೆಸ ಬೇಕಾಗಬಹುದು. ಅಥವಾ ದಿನ ಗೊತ್ತುಮಾಡಿ ವಾರ್ಡು ವಾರು ಸಭೆ ಸೇರಬಹುದು. ಆದರೆ ಇದು ಸರಕಾರ ಉದ್ದೇಶಿಸುವ ಗ್ರಾಮಸಭೆಗಳಂತೆ ಆಗಬಾರದು. ಪಂಚಾಯತ್ ವ್ಯಾಪ್ತಿಯ ಭೌತಿಕ ಸಮಸ್ಯೆಗಳ ಹಾಗೂ ಅಗತ್ಯಗಳ ಸಂಪೂರ್ಣ ಮಾಹಿತಿಗಳನ್ನು ಕ್ರೋಢೀಕರಿಸಬೇಕು ಈ ಕೆಲಸಗಳಗೆ ತಗಲಬಹುದಾದ ವೆಚ್ಚವನ್ನು ಅಂದಾಜಿಸಬೇಕು. ಒಟ್ಟು ವೆಚ್ಚ ಮತ್ತು ಒಟ್ಟು ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಐದು ವರ್ಷಗಳಿಗೆ ಹಂಚಿಕೆ ಮಾಡಬೇಕು. ಈ ಮೊಬಲಗನ್ನು ಸರಿದೂಗಿಸಲು ಸರಕಾರದ ಅನುದಾನವನ್ನೂ ಪರಿಗಣಿಸಿ ಕೊರತೆಯನ್ನು ತುಂಬುವ ಬಗ್ಗೆ ಗ್ರಾಮದೊಳಗೆ ಅಥವಾ ಪರಿಸರದ ಯಾ ಹೊರ ಪರಿಸರದ ದಾನಿಗಳನ್ನು ಗುರುತಿಸಬೇಕು. ಗ್ರಾಮದೊಳಗೆ ಬೆಳ್ಳಿಹಬ್ಬ, ವಾರ್ಷಿಕೋತ್ಸವ, ಜಾತ್ರೋತ್ಸವಗಳಿಗೆ ದೊಡ್ಡ ಮೊತ್ತದ ಉದಾರ ನೆರವು ನೀಡುವ ದಾನಿಗಳಿದ್ದಾರೆ. ಅವರು ಗ್ರಾಮ ಪಂಚಾಯತ್ ರೂಪಿಸುವ ಅಭಿವೃದ್ಧಿ ಕೆಲಸಗಳಿಗೂ ಸಹಾಯ ಮಾಡುವರು.
ಐದು ವರ್ಷದ ಕ್ರಿಯಾ ಯೋಜನೆಗೆ ಗ್ರಾಮದಿಂದ ಹತ್ತು ಕೋಟಿ ರೂಪಾಯಿ ಬೇಕೆಂದಾದರೆ ಮೊದಲವರ್ಷದ ಆಯವ್ಯಯದ ಎರಡು ಕೋಟಿ ರೂಪಾಯಿ ಸಂಗ್ರಹವಾಗಬೇಕು. ಈ ಸಂಗ್ರಹವು ವಸ್ತು ಮತ್ತು ಶ್ರಮರೂಪದ್ದೇ ಆದರೆ ಹೆಚ್ಚು ಪಾರದರ್ಶಕವಾಗುತ್ತದೆ. ಹಾಗೆಯೇ ಮುಂದಿನ ನಾಲ್ಕು ವರ್ಷಗಳಿಗೂ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಉತ್ತಮ. ಈ ವರ್ಷದ ದಾನಿಯು ಮುಂದಿನ ವರ್ಷದಲ್ಲಿ ಪುನಹ ದೇಣಿಗೆ ಕೊಡಬಹುದೇ? ದಾನಿಯು ತನ್ನನ್ನು ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸುವುದಿಲ್ಲ. ಪಾರದರ್ಶಕತೆಯೊಂದಿದ್ದರೆ ಸಹಾಯದ ಹೊಳೆ ನಿಶ್ಚಿತ.
ಈ ಕಾರ್ಯಕ್ರಮಗಳ ಸಂಯೋಜನೆಯನ್ನು ಮಾಡುವವರು ಯಾರು? ಗ್ರಾಮ ಪಂಚಾಯತ್ ಅಧ್ಯಕ್ಷರ ಹಿರಿತನದಲ್ಲಿ ಪಂಚಾಯತ್ ಹಂತದ ಮುಖ್ಯ ಕ್ರಿಯಾ ಸಮಿತಿಯನ್ನು ರಚಿಸುವುದರೊಂದಿಗೆ ವಾರ್ಡುವಾರು ಉಪ ಕ್ರಿಯಾ ಸಮಿತಿಗಳನ್ನು ರಚಿಸಿ, ಕಾಮಗಾರಿಯ ಸಂಘಟನೆಯ ಪೂರ್ಣ ಜವಾಬ್ದಾರಿ ವಹಿಸಿ ಕೊಡಬೇಕು. ಉಪಸಮಿತಿಯಲ್ಲಿ ಓರ್ವ ಸಂಚಾಲಕ, ಸಹಸಂಚಾಲಕ, ಖಜಾಂಚಿ ಹಾಗೂ ವಾರ್ಡಿನ ಗ್ರಾಮ ಪಂಚಾಯತ್ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಇರಬೇಕು. ಇವರು ಗ್ರಾಮದ ಮುಖ್ಯ ಸಮಿತಿಗೆ ನೇರ ಜವಾಬ್ದಾರರಾಗಿರುವರು.
ಉದ್ಯೋಗ ಖಾತರಿಯೋಜನೆಯು ಗ್ರಾಮ ವಿಕಾಸಕ್ಕೆ ವರದಾನ. ಒಂದು ಕುಟುಂಬವು ಸಾರ್ವಜನಿಕ ವಲಯದೊಳಗೆ ಕನಿಷ್ಟ ಇಪ್ಪತ್ತ ಐದು ದಿನಗಳ ಕೆಲಸಗಳನ್ನು ಮಾಡುವ ಮನಸ್ಸು ಮಾಡಿದರೆ ಇಡೀ ಗ್ರಾಮದಿಂದ ಒಟ್ಟಾಗುವ ಶ್ರಮ ಅದೆಷ್ಟೋ ಸಾವಿರ ಘಂಟೆಗಳಾಗುತ್ತವೆ. ಒಂದು ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಫಲಾನುಭವಿ ಕುಟುಂಬಗಳು ಆರು ನೂರು ಇದ್ದರೆ ಇಪ್ಪತ್ತೈದು ದಿನಗಳ ಸೇವೆಯೆಂದರೆ ಹದಿನೈದು ಸಾವಿರ ಮಾನವ ದಿನಗಳಾಗುತ್ತವೆ. ಇವರ ಸೇವೆ ದೊರೆತರೆ ಹತ್ತಿರ ಹತ್ತಿರ ಕೋಟಿ ರೂಪಾಯಿಯ ಕೆಲಸಗಳಾಗುತ್ತವೆ. ನರೇಗಾ ಫಲಾನುಭವಿಗಳು ಮಾಡುವ ಶ್ರಮ ಅದು ನಿಸ್ವಾರ್ಥವಾಗಿರುತ್ತದೆ. ಅವರ ಶ್ರಮ ದುಪ್ಪಟ್ಟಿರುತ್ತದೆ ಎಂಬುದನ್ನು ಮರೆಯಲಾಗದು. ಉಪಸಮಿತಿಗಳು ನರೇಗಾ ಕುಟುಂಬಗಳ ಮನವೊಲಿಸುವ ಕೆಲಸವನ್ನು ಅಗತ್ಯವಾಗಿ ಮಾಡಬೇಕು. ಸಂಘಟಿತ ಚಿಂತನೆಯನ್ನು ಮಾಡಿ ಕಾರ್ಯಾರಂಭ ಮಾಡಿದರೆ ಯಶಸ್ಸು ಖಂಡಿತ. ಬಸ್ ನಿಲ್ದಾಣ, ಶಾಲಾ ಆವರಣ ಗೋಡೆ, ಹೊಸ ಕೊಳವೆ ಬಾವಿ ಹೀಗೇ ನಾನಾ ವ್ಯವಸ್ಥೆಗಳಿಗೆ ದಾನಿಗಳು ಪ್ರತೀ ಊರಲ್ಲೂ ಇರುತ್ತಾರೆ. ವ್ಯಕ್ತಿಗಳಲ್ಲದೆ ಸಂಘ ಸಂಸ್ಥೆಗಳೂ ಇರುತ್ತವೆ. ಹೊರಗಡೆಯ ಊರುಗಳಿಗೆ ದಾನ ನೀಡುವವರು ತಮ್ಮೂರಿಗೂ ನೀಡದಿರುವರೇ? ನೆರವು ಪಡೆಯುವ ಯೋಚನೆ, ಯೋಜನೆ ಮತ್ತು ಪ್ರಯತ್ನ ಕಡಿಮೆಯಿದೆ ಎಂದೇ ಅನಿಸುತ್ತದೆ.
ಗ್ರಾಮದಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳು ರೂಪಿಸುವ ಕಾರ್ಯಕ್ರಮಗಳಿಗೆ ಇದರಿಂದ ಹೊಡತ ಬೀಳದೇ ಎಂಬ ಸಂದೇಹ ಸಹಜ. ದಾನಿಗಳಲ್ಲಿ ಎರಡು ವರ್ಗದವರಿದ್ದಾರೆ. ಮೊದಲನೇಯ ವರ್ಗದವರು ತಮ್ಮ ಆಯ್ಕೆಯ ಕ್ಷೇತ್ರಗಳಿಗೆ ಮಾತ್ರ ಸಹಕರಿಸುವವರು. ಎರಡನೇಯ ವರ್ಗದವರು ತಮ್ಮನ್ನು ಸಂಪರ್ಕಿಸಿದವರಿಗೆಲ್ಲರಿಗೂ ಸಹಕರಿಸುತ್ತಾರೆ. ಉಳ್ಳವನು ದೇಣಿಗೆ ನೀಡಲು ತಾವಾಗಿಯೇ ಮುಂದೆ ಬರುವ ಸಂಸರ್ಭಗಳು ತೀರಾ ಕಡಿಮೆ. ಪರಿಶ್ರಮಿಸದೆ ಸುಖವಿರದಲ್ಲವೇ?