ದೇಶವ್ಯಾಪಿ ಕೊರೋನಾ ಲಸಿಕೆ ಅಭಿಯಾನಕ್ಕೆ ಆನ್’ಲೈನ್ ಮೂಲಕ ಚಾಲನೆ ನೀಡಿದ ಬಳಿಕ ದೇಶದ ಜನತೆಯನ್ನುದ್ದೇಶಿ ಮಾತನಾಡಿರುವ ಮೋದಿಯವರು, ಲಸಿಕೆ ಬಂದಿರುವುದನ್ನು ತಪ್ಪಾಗಿ ತಿಳಿದು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರಬೇಡಿ ಮೊದಲ ಡೋಸ್ ನಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಂತರ ಎರಡನೇ ಡೋಸ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಒಂದು ಲಸಿಕೆ ಕಂಡು ಹಿಡಿಯಲು ಹಲವು ವರ್ಷಗಳೇ ಬೇಕಾಗುತ್ತಿತ್ತು. ಆದರೆ, ಕೆಲವೇ ಸಮಯದಲ್ಲಿ ಒಂದಲ್ಲ, ಎರಡು ದೇಶೀ ನಿರ್ಮಿತ ಲಸಿಕೆಗಳು ತಯಾರಾಗಿವೆ. ಇದೇ ವೇಳೆ ಇತರೆ ಲಸಿಕೆಗಳ ಅಭಿವೃದ್ಧಿ ಕೂಡ ವೇಗವಾಗಿ ನಡೆಯುತ್ತಿದೆ.
ಲಸಿಕೆಯನ್ನು ಎರಡು ಡೋಸ್ ಪಡೆಯುವುದು ಅತೀ ಮುಖ್ಯವೆಂದು ದೇಶದ ಜನತೆಗೆ ಹೇಳಲು ಬಯಸುತ್ತೇನೆ. ಈಗಾಗಲೇ ತಜ್ಞರೂ ಕೂಡ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಎರಡೂ ಲಸಿಕೆಗಳನ್ನು ಪಡೆಯುವುದಕ್ಕೆ ಒಂದು ತಿಂಗಳ ಅಂತರವಿರಬೇಕೆಂದು ಹೇಳಿದ್ದಾರೆ.
ಇಷ್ಟು ದೊಡ್ಡ ಮಟ್ಟದ ಲಸಿಕೆ ಅಭಿಯಾನ ಇತಿಹಾಸದಲ್ಲಿಯೇ ಎಂದೂ ಆಗಿರಲಿಲ್ಲ. 3 ಕೋಟಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ 100 ಕ್ಕೂ ಹೆಚ್ಚು ದೇಶಗಳಿವೆ. ಭಾರತವು ಮೊದಲ ಹಂತದಲ್ಲಿ ಮಾತ್ರ 3 ಕೋಟಿ ಜನರಿಗೆ ಲಸಿಕೆ ನೀಡುತ್ತಿದೆ. ಎರಡನೇ ಹಂತದಲ್ಲಿ 30 ಕೋಟಿ ಜನರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.