ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ಶ್ರೀ ಮಂತ್ರ ದೇವತೆ ಕೊರಗಜ್ಜ ಕ್ಷೇತ್ರದಲ್ಲಿ ಇದೇ 15ರಿಂದ 19ರ ತನಕ ನಡೆಯಲಿರುವ ಚಂಡಿಕಾಯಾಗ ಸಹಿತ ಯಕ್ಷಗಾನ ಮತ್ತು ವಾರ್ಷಿಕ ನೇಮೋತ್ಸವ ಮತ್ತಿತರ ಕಾರ್ಯಕ್ರಮ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಲೋಕೇಶ್ ಹೇಳಿದ್ದಾರೆ.
ಕೊರಗಜ್ಜ ಕ್ಷೇತ್ರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಡಿ.15ರಂದು ಬೆಳಿಗ್ಗೆ ಗಂಟೆ 7.30 ರಿಂದ ವೇದಮೂರ್ತಿ ಸುಬ್ರಹ್ಮಣ್ಯ ಪರಾಡ್ಕರ್ ಗುಂಡ್ಯಡ್ಕ ಮತ್ತು ರಾಧಾಕೃಷ್ಣ ಭಟ್ ಪೆದಮಲೆ ಮಾರ್ಗದರ್ಶನದಲ್ಲಿ ಚಂಡಿಕಾಯಾಗ ಆರಂಭಗೊಳ್ಳಲಿದ್ದು, ಅಂದು ಮಧ್ಯಾಹ್ನ ಜೀ ಕನ್ನಡ ಮಹರ್ಷಿವಾಣಿ ಖ್ಯಾತಿಯ ಡಾ.ಆನಂದ ಗುರೂಜಿ ಮತ್ತು ಕಟೀಲು ಕ್ಷೇತ್ರದ ವೇದಮೂರ್ತಿ ಕಮಲಾದೇವಿ ಅಸ್ರಣ್ಣರ ಉಪಸ್ಥಿತಿಯಲ್ಲಿ ಪೂರ್ಣಾಹುತಿಗೊಳ್ಳಲಿದೆ ಎಂದರು.
ಇದೇ ವೇಳೆ ಕೊರಗಜ್ಜ ಭಕ್ತಿಗೀತೆ ಹಾಡಿ ಗಮನ ಸೆಳೆದ ಬಾಲ ಪ್ರತಿಭೆ ಕಾರ್ತಿಕ್ ಕಾರ್ಕಳ ಇವರನ್ನು ಸನ್ಮಾನಿಸಿ ಆಶೀರ್ವಚನ ನೀಡುವರು. ಅಂದು ಸಂಜೆ ರಾತ್ರಿ ಗಂಟೆ 7.30 ರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿತ್ರನಟ ಅರ್ಜುನ್ ಕಾಪಿಕಾಡ್ ಮತ್ತು ದೇವದಾಸ ಕಾಪಿಕಾಡ್ ಭಾಗವಹಿಸುವರು. ರಾತ್ರಿ ಗಂಟೆ 9ರಿಂದ ’ಪನಿಯರೆ ಆವಂದಿನ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಡಿ.17 ರಂದು ರಾತ್ರಿ ಗಂಟೆ 9ಕ್ಕೆ  ಕಟೀಲು ಮೇಳದವರಿಂದ 3ನೇ ವರ್ಷದ ’ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ. ಡಿ. 19ರಂದು ರಾತ್ರಿ ಗಂಟೆ 8 ರಿಂದ ಮಂತ್ರದೇವತೆ ಮತ್ತು ಕೊರಗಜ್ಜ ದೈವಗಳಿಗೆ ವಾರ್ಷಿಕ ನೇಮೋತ್ಸವ ನಡೆಯಲಿದ್ದು, ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ಇದೆ ಎಂದು ಅವರು ವಿವರಿಸಿದರು.
ಕಳೆದ 24 ವರ್ಷಗಳಿಂದ ಇಲ್ಲಿ ಕೊರಗಜ್ಜ ದೈವ ಆರಾಧಿಸಿಕೊಂಡು ಬರುತ್ತಿದ್ದು, ಕಳೆದ ಐದು ವರ್ಷಗಳಿಂದ ವಿವಿಧ ಜಿಲ್ಲೆಯ ಭಕ್ತರು ಆಗಮಿಸಿ ಅವರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಕೋವಿಡ್ ಸಂಕಷ್ಟ ಸಮಯದಲ್ಲಿ ನೂರಾರು ಕುಟುಂಬಗಳಿಗೆ ಉಚಿತ ಅಕ್ಕಿ ಮತ್ತಿತರ ಸಾಮಾಗ್ರಿ ವಿತರಿಸಲಾಗಿದ್ದು, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯೂ ನಡೆಯುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಜಿ ವಲಯಾಧ್ಯಕ್ಷ ಚಂದಪ್ಪ ಪೂಜಾರಿ ಇದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here