ಬೆಂಗಳೂರು: ಮರಠಾ ಸಮುದಾಯದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ಸರ್ಕಾರದ ನಿರ್ಧಾರ ವಿರೋಧಿಸಿ ಡಿ.5ರಂದು ಎಲ್ಲಾ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಡಿ.5ರಂದು ನಡೆಯಲಿರುವ ಕರ್ನಾಟಕ ಬಂದ್ಗೆ ಅವಕಾಶವಿಲ್ಲ. ಅಲ್ಲದೇ, ಕರ್ನಾಟಕ ಬಂದ್ ಮಾಡುವ ಅವಶ್ಯಕತೆ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ಮಾಡಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ. ಬಂದ್ ಮಾಡುವ ಅವಶ್ಯಕತೆ ಇಲ್ಲ. ಬಂದ್ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಕನ್ನಡಕ್ಕೆ ಏನೇನು ಆದ್ಯತೆ ಕೊಡಬೇಕು ಅದನ್ನು ಕೊಡುವಲ್ಲಿ ನಾನು ತಯಾರಿದ್ದೇವೆ, ಅದಲ್ಲದೇ ಇನ್ನೂ ಹೆಚ್ಚಿನದಾಗಿ ಕೊಡಲು ಸಿದ್ಧನಿದ್ದೇವೆ. ಸರ್ಕಾರಕ್ಕೆ ಎಲ್ಲರೂ ಸಹಕಾರ ನೀಡಬೇಕು. ಕನ್ನಡಪರ ಸಂಘಟನೆಗಳ ಮುಖಂಡರ ಮನವಿಯನ್ನು ಈಡೇರಿಸಲು ತಯಾರಿದ್ದೇವೆ. ಎಲ್ಲಾ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಬಂದ್ ಮಾಡಿದರೆ ಜನರ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ ಎಂದರು.
ಕೊರೊನಾದ ಎರಡನೇ ಅಲೆ ಹಿನ್ನೆಲೆ ರಾತ್ರಿ ಕರ್ಫ್ಯೂ ಜಾರಿ ವಿಚಾರದ ಬಗ್ಗೆ ಯಾವುದೇ ರೀತಿಯಾದ ಯೋಚನೆ ಇಲ್ಲ ಎಂದು ಸ್ಫಷ್ಟಪಡಿಸಿದ್ದಾರೆ.