Thursday, October 19, 2023

ಗೃಹರಕ್ಷಕರ ಸೇವೆ ಶ್ಲಾಘನೀಯ: ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.

Must read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹಕ್ಷಕ ದಳ ಕಛೇರಿಯಲ್ಲಿ 58ನೇ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಡಿ.6ರ ರವಿವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕಚೇರಿ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ.(I.A.S.) ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಬೆಳ್ಳಾರೆ ಪ್ರಭಾರ ಘಟಕಾಧಿಕಾರಿ ವಸಂತ ಗೃಹರಕ್ಷಕರಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.

ಗೃಹರಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಜಿಲ್ಲೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ನೆರೆ ಬಂದ ಸಂದರ್ಭದಲ್ಲಿ ಜಿಲ್ಲಾಡಳಿತದೊಂದಿಗೆ ಸೇರಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಹಾಗೂ ಕೊರೋನಾ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಆಗಿ ಮಾಡಿದ ಸೇವೆ ಅತ್ಯಂತ ಶ್ಲಾಘನೀಯ ಎಂದರು. ಮಂಗಳೂರಿನ ಬೀಚ್‌ಗಳಲ್ಲಿ ಕೂಡ ಗೃಹರಕ್ಷಕರು ಪ್ರವಾಸಿಗರ ರಕ್ಷಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ ಎಂದರು ಹಾಗೂ ಜಿಲ್ಲೆಯ ಎಲ್ಲಾ ಗೃಹರಕ್ಷಕರಿಗೆ ಜಿಲ್ಲಾಡಳಿತ ಪರವಾಗಿ ಗೃಹರಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ| ಶಿವಪ್ರಸಾದ್ ರೈ ಶುಭ ಹಾರೈಸಿದರು. ಸಮಾಜ ಮತ್ತು ಕಮ್ಯೂನಿಟಿ ಹಾಗೂ ಪೊಲೀಸರ ನಡುವಿನ ಕೊಂಡಿಯಾಗಿ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ಗೃಹರಕ್ಷಕರು ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳ ಹಾಗೂ ಪೌರರಕ್ಷಣಾ ದಳದ ಸಮಾದೇಷ್ಟ ಡಾ| ಮುರಲೀ ಮೋಹನ್ ಚೂಂತಾರು ಅವರು ವಾರ್ಷಿಕ ವರದಿ ಮಂಡಿಸಿದರು. ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸದಸ್ಯರು ಹಾಗೂ ಜಿಲ್ಲಾ ಪೌರರಕ್ಷಣಾ ಪಡೆಯ ತಂಡದವರು ಹಗಲಿರುಳು ಸೇವೆ ಸಲ್ಲಿಸಿದ್ದಾರೆ. ಸುಮಾರು 14 ಮಂದಿ ಗೃಹರಕ್ಷಕರಿಗೆ ಕೊರೋನಾ ಸೋಂಕು ತಗಲಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂಬುದು ಸಂತಸದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಸುರತ್ಕಲ್ ಪ್ರಭಾರ ಘಟಕಾಧಿಕಾರಿ ರಮೇಶ್, ಬೆಳ್ತಂಗಡಿ ಪ್ರಭಾರ ಘಟಕಾಧಿಕಾರಿ ಜಯಾನಂದ, ಮೂಡಬಿದ್ರಿ ಘಟಕದ ಪ್ರಭಾರ ಘಟಕಾಧಿಕಾರಿ ಪಾಂಡಿರಾಜ್, ಪಣಂಬೂರು ಘಟಕದ ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯ್ಕ, ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿ ಸಂಜೀವ ಇವರುಗಳನ್ನು ಜಿಲ್ಲಾಧಿಕಾರಿಗಳು ಜಿಲ್ಲಾ ಕಛೇರಿ ಪರವಾಗಿ ಫಲಪುಷ್ಪ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.

ಜಿಲ್ಲಾ ಕಛೇರಿಯ ಅಧೀಕ್ಷಕ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್. ಹಾಗೂ ಘಟಕಾಧಿಕಾರಿಗಳು ಮತ್ತು ಎಲ್ಲಾ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಕುಮಾರಿ ನಿಧಿ ಜಿ. ಪ್ರಾರ್ಥನೆ ಮಾಡಿದರು. ಜಿಲ್ಲಾ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿದರು. ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ ವಂದಿಸಿದರು. ಮುರಳೀಧರ ಕಾರ್ಯಕ್ರಮವನ್ನು ನಿರೂಪಿಸಿದರು.

 

More articles

Latest article