ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅತಿ ಹೆಚ್ಚು ಗ್ರಾಪಂಗಳು ಇರುವ ಬಂಟ್ವಾಳದಲ್ಲಿ ಮತ ಎಣಿಕೆ ಕಾರ್ಯ ಈ ವರೆಗೆ ಯಾವುದೇ ಸಮಸ್ಯೆ ಯಿಲ್ಲದೆ ಶಾಂತಿಯುತವಾಗಿ ನಡೆಯುತ್ತಿದೆ.
ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇರುವ 89 ಎಣಿಕಾ ಟೇಬಲ್ ಗಳಲ್ಲಿ ನಡೆಯುತ್ತಿದ್ದು, ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಎಣಿಕಾ ಕೇಂದ್ರದ ಹೊರಗೆ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸುತ್ತಿದ್ದಾರೆ.
ಇದೇ ವೇಳೆ ಎರಡು ಗುಂಪುಗಳ ನಡುವೆ ಸಂಘರ್ಷಮಯ ವಾತಾವರಣವೂ ಮೂಡಿ ಬಳಿಕ ಪೊಲೀಸರ ಮಧ್ಯಪ್ರವೇಶದೊಂದಿಗೆ ಪರಿಸ್ಥಿತಿ ತಿಳಿಯಾಯಿತು.
ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ಸುತ್ತಿನ ಮತ ಎಣಿಕೆಯು ಮುಗಿಯವ ಸಂದರ್ಭ ಮಧ್ಯಾಹ್ನ ಸುಡುಬಿಸಿಲೇರಿತ್ತು. ಫಲಿತಾಂಶ ಘೋಷಣಾಪತ್ರವನ್ನು ಅಭ್ಯರ್ಥಿಗಳು ಪಡೆಯುವ ಮುನ್ನವೇ ಬೆಂಬಲಿಗರು ಸಂಭ್ರಮಾಚರಣೆಗಳನ್ನು ನಡೆಸುತ್ತಿದ್ದು, ಮತ್ತೊಂದು ಸುತ್ತಿನ ಎಣಿಕೆಗೆ ಬರುವ ಅಭ್ಯರ್ಥಿಗಳು ಹೊರಗೆ ಕಾಯುತ್ತಿದ್ದರು.
ಇತ್ತೀಚಿನ ಮಾಹಿತಿ ಬಂದಾಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ತಮ್ಮ ತಮ್ಮ ಬೆಂಬಲಿಗರು ವಿಜಯಿಯಾಗಿದ್ದಾರೆ ಎಂದು ಹೇಳುವ ಪಂಚಾಯಿತಿಗಳನ್ನು ಅವಲೋಕಿಸಿದಾಗ ಒಟ್ಟು 18 ಗ್ರಾಪಂಗಳಲ್ಲಿ 10 ಗ್ರಾಪಂಗಳ ವಿಜೇತರಲ್ಲಿ ಬಿಜೆಪಿ ಬೆಂಬಲಿತರು ಅಧಿಕವಿದ್ದರೆ, ಉಳಿದ 8 ಗ್ರಾಪಂಗಳಲ್ಲಿ 7 ಗ್ರಾಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕ ಸಂಖ್ಯೆಯಲ್ಲಿದ್ದಾರೆ.
ಸಂಗಬೆಟ್ಟು, ಪಿಲಾತಬೆಟ್ಟು, ಕಾವಳಮುಡೂರು, ಉಳಿ, ಅಮ್ಮುಂಜೆ, ,ಮೇರಮಜಲು, ರಾಯಿ, ಅನಂತಾಡಿ, ಇಡ್ಕಿದು, ವಿಟ್ಲಮುಡ್ನೂರುಗಳಲ್ಲಿ ಬಿಜೆಪಿ ಬೆಂಬಲಿತರು ಗರಿಷ್ಠ ಸಂಖ್ಯೆಯಲ್ಲಿ ಜಯಗಳಿಸಿದ್ದರೆ, ಮಾಣಿಲ, ಪೆರ್ನೆ, ನಾವೂರು, ಕರಿಯಂಗಳ, ಕರೋಪಾಡಿ, ಫಜೀರು, ಪೆರ್ನೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗರಿಷ್ಠ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ. ಬಿಜೆಪಿ 10, ಕಾಂಗ್ರೆಸ್ 7 ಪೆರಾಜೆ ಗ್ರಾಪಂ ಸಮಬಲದಲ್ಲಿದೆ ಎಂದು ಇದುವರೆಗಿನ ಮಾಹಿತಿ ತಿಳಿಸಿದೆ.
ಚುನಾವಣಾ ಆಯೋಗ ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ 70 ಮಂದಿ ವಿಜೇತರಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ.
**ಪೋಲೀಸ್ ಬಿಗಿ ಬಂದೋಬಸ್ತ್ ಎಸ್. ಪಿ.ಬೇಟಿ*
ಮತದಾನ ಎಣಿಕೆ ಕೇಂದ್ರ ಸ್ಥಳಕ್ಕೆ ಮಂಗಳೂರು ಎಸ್.ಪಿ. ಲಕ್ಮೀಪ್ರಸಾದ್ ಬೇಟಿ ನೀಡಿ ಪರಿಶೀಲನೆ ನಡೆಸಿ ದ್ದಾರೆ.
ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ಹಾಗೂ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತೃತ್ವದಲ್ಲಿ ಜೊತೆಗೆ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಗ್ರಾಮಾಂತರ ಎಸ್.ಐ.ಪ್ರಸನ್ನ, ಟ್ರಾಫಿಕ್ ಎಸ್.ಐ. ರಾಜೇಶ್ ಕೆ.ವಿ.ವಿಟ್ಲ ಎಸ್.ಐ. ವಿನೋದ್ ರೆಡ್ಡಿ ಅವರು ಬಿಗಿ ಬಂದೋ ಬಸ್ತ್ ವ್ಯವಸ್ಥೆ ಕಲ್ಲಿಸಿದ್ದಾರೆ.
ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪೋಲೀಸ್ ನಿಯೋಜನೆ ಮಾಡಿದ್ದಾರೆ.