Tuesday, October 31, 2023

ಗ್ರಾ.ಪಂ.ಚುನಾವಣಾ ಫಲಿತಾಂಶ ನಾಳೆ(ಡಿ.30) ಪ್ರಕಟ

Must read

ಬಂಟ್ವಾಳ: ಗ್ರಾ.ಪಂ.ಚುನಾವಣೆ ಮುಗಿದು ಇದೀಗ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದ ಅಂತಿಮ ಕ್ಷಣದಲ್ಲಿ ಕಾತರರಾಗಿದ್ದಾರೆ.
ಅಧಿಕಾರಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಮತ ಏಣಿಕೆಯ ಕಾರ್ಯದ ತಲೆಬಿಸಿಯಾದರೆ , ಯಾರ ಹಣೆಬರಹ ಯಾವ ರೀತಿಯಲ್ಲಿ ಇದೆ ಎಂಬುದು ಅಭ್ಯರ್ಥಿಗಳ ಎದೆಯಲ್ಲಿ ಡವಡವ ಆರಂಭವಾಗಿದೆ.

*ನಾಳೆ ಡಿ.30 ಏಣಿಕೆ*
ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆದು ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಚರ್ಚೆಗಳು ಜೋರಾಗಿಯೇ ನಡೆಯುತ್ತಿದ್ದು, ಈ ನಡುವೆ ಚುನಾವಣಾ ಆಯೋಗ ನಿರ್ದೇಶನದಂತೆ ಕಂದಾಯ ಇಲಾಖೆಯು ಡಿ. 30 ರಂದು ಮೊಡಂಕಾಪು ಇನೆಂಟ್ ಜೀಸಸ್ ಶಾಲೆಯಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದೆ.
ಒಟ್ಟು 57 ಗ್ರಾ.ಪಂ.ಗಳ 837 ಸ್ಥಾನಗಳ ಪೈಕಿ 15 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 822 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯು ಬ್ಯಾಲೆಟ್ ಪೇಪರ್ ಮೂಲಕ ನಡೆದಿರುವುದರಿಂದ ಫಲಿತಾಂಶ ನಿಧಾನಗತಿಯಲ್ಲಿ ಸಾಗುವ ಸಾಧ್ಯತೆ ಇದ್ದು, ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭಗೊಂಡರೆ 11.30 ರ ವೇಳೆಗೆ ಮೊದಲ ಹಂತದ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.
ಮೊಡಂಕಾಪು ಇನೆಂಟ್ ಜೀಸಸ್ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿರುವ 23ಕೊಠಡಿಗಳಲ್ಲಿರುವ ಒಟ್ಟು 89 ಟೇಬಲ್‌ಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. 190 ಎಣಿಕೆ ಸಹಾಯಕರು ಮತ್ತು 95 ಮೇಲ್ವಿಚಾರಕರು ಸುಮಾರು 50ರಷ್ಟು ಡಿಗ್ರೂಪ್ ಸಿಬಂದಿಯ ನೆರವಿನೊಂದಿಗೆ ಎಣಿಕೆ ನಡೆಯಲಿದೆ.
ಪ್ರಸ್ತುತ ಇಲಾಖೆ ನಿಗದಿ ಪಡಿಸಿರುವ ಪ್ರಕಾರ ಬೆಳಗ್ಗೆ 8ರಿಂದ 10ರ ವರೆಗೆ 19 ಗ್ರಾ.ಪಂ.ಗಳ ಮತ ಎಣಿಕೆ ಪೂರ್ಣಗೊಂಡರೆ, 8 ಗ್ರಾ.ಪಂ.ಗಳ ಎಣಿಕೆ ಆಂಶಿಕವಾಗಿ ಪೂರ್ಣಗೊಳ್ಳಲಿದೆ. 10.15ರಿಂದ 12.15ರ ವರೆಗೆ 17 ಗ್ರಾ.ಪಂ.ಗಳ ಎಣಿಕೆ ಪೂರ್ಣಗೊಂಡರೆ, 7 ಗ್ರಾ.ಪಂ.ಗಳ ಎಣಿಕೆ ಆಂಶಿಕವಾಗಿ ಪೂರ್ಣಗೊಳ್ಳಲಿದೆ. 2.45ರಿಂದ 4.45ರ ವರೆಗೆ 24 ಗ್ರಾ.ಪಂ.ಗಳ ಮತ ಎಣಿಕೆ ಪೂರ್ಣಗೊಳ್ಳಲಿದೆ ಎಂದು ಇಲಾಖೆ ಸಮಯ ನಿಗದಿ ಪಡಿಸಿದೆ.
ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್ ನಿಯಮಪಾಲನೆ ಕಡ್ಡಾಯವಾಗಿದ್ದು, ಕೊಠಡಿಗೆ ಅಭ್ಯರ್ಥಿ ಅಥವಾ ಅವರು ಸೂಚಿಸಿದ ಏಜೆಂಟ್ ಯಾರಾದರೂ ಒಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ. ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಒಟ್ಟು ಮೂರು ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು, ಒಂದು ಸುತ್ತಿನ ಎಣಿಕೆಗೆ ಕನಿಷ್ಠ 2 ಗಂಟೆ ಬೇಕಾಗುತ್ತದೆ. ಬಳಿಕ ಕ್ಷೇತ್ರವಾರು ಘೋಷಣೆ ಮಾಡಲಾಗುತ್ತದೆ. ಮತ ಎಣಿಕೆ ಕೇಂದ್ರದ ಸುತ್ತ ರಾಜಕೀಯ ಪಕ್ಷಗಳ ಬೆಂಬಲಿತರು, ಕಾರ್ಯಕರ್ತರು ಸೇರುವ ಸಾಧ್ಯತೆ ಇರುವುದರಿಂದ ಸುಮಾರು 3೦೦ರಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

More articles

Latest article