Thursday, October 26, 2023

ಪ್ರತಿಯೊಬ್ಬರೂ ಮತಚಲಾಯಿಸಿ: ಎ.ಸಿ.ಮದನ್ ಮೋಹನ್.

Must read

ಬಂಟ್ವಾಳ: ಪ್ರತಿಯೊಬ್ಬರು ನಾಳೆ ಅಂದರೆ ಡಿ.22 ರ ಮಂಗಳವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಲ್ಲಿ ನಡೆಯಲಿರುವ ಗ್ರಾ.ಪಂ.ಚುನಾವಣೆಯಲ್ಲಿ ಮತಚಲಾಯಿಸಿ , ತಮ್ಮ ಹಕ್ಕನ್ನು ಚಲಾಯಿಸಿ ಎಂದು ಮಂಗಳೂರು ಸಹಾಯಕ ಕಮೀಷನರ್ ಮದನ್ ಮೋಹನ್ ತಿಳಿಸಿದ್ದಾರೆ.
ಅವರು ಇಂದು ಮೊಡಂಕಾಪು ಇನ್ಪೆಂಟ್ ಜೀಸಸ್ ವಿದ್ಯಾಸಂಸ್ಥೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿರುವ ವೇಳೆ ಆಗಮಿಸಿ ಮಾಧ್ಯಮದವರ ಜೊತೆ ಮಾತನಾಡಿದರು.


ಚುನಾವಣಾ ಪೂರ್ವತಯಾರಿ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಮತಗಟ್ಟೆಗಳಿಗೆ ಚುನಾವಣಾ ಸಾಮಾಗ್ರಿಗಳ ಜೊತೆ ತೆರಳಲು ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ.
ಪ್ರತಿಯೊಂದು ಮತಗಟ್ಟೆಗೆ ತೆರಳುವ ಮೊದಲು ಅಧಿಕಾರಿಗಳು ಮತದಾನದ ಸಾಮಾಗ್ರಿಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅವರು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ಎಲ್ಲಾ ತಯಾರಿ, ಮುಂಜಾಗ್ರತೆ ಕ್ರಮ, ಮುನ್ಸೂಚನೆಗಳನ್ನು ಕೈಗೊಂಡಿದ್ದು ಸಾರ್ವಜನಿಕ ರು ನಿರಾಳವಾಗಿ ಮತದಾನ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ 57 ಗ್ರಾ.ಪಂ.ಗಳಿಗೆ ಮೊದಲ ಹಂತದಲ್ಲಿ ಅಂದರೆ ಡಿ. ಮಂಗಳವಾರ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಡಿ. 21ರಂದು ಸೋಮವಾರ ಮೊಡಂಕಾಪು ಇನ್ಪೆಂಟ್ ಜೀಸಸ್ ವಿದ್ಯಾಸಂಸ್ಥೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು.

ಬಳಿಕ ಸುಮಾರು 155 ವಾಹನಗಳ ಮೂಲಕ ಮತಪೆಟ್ಟಿಗೆಗಳನ್ನು ಆಯಾಯ ಬೂತ್‌ಗಳಿಗೆ ಸಾಗಿಸಲಾಯಿತು.

ತಾಲೂಕಿನ 57 ಗ್ರಾ.ಪಂ.ಗಳ 837 ಸ್ಥಾನಗಳಿಗೆ(15 ಸ್ಥಾನಗಳ ಅವಿರೋಧ ಆಯ್ಕೆ) ಚುನಾವಣೆ ನಡೆಯಲಿದ್ದು, 1925 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 46 ಅತಿಸೂಕ್ಷ್ಮ 86 ಸೂಕ್ಷ್ಮ ಹಾಗೂ 264 ಸಾಮಾನ್ಯ ಮತಗಟ್ಟೆಗಳು ಸೇರಿ ಒಟ್ಟು 396 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಪ್ರತಿ ಮತಗಟ್ಟೆಗಳಲ್ಲಿ ತಲಾ 6 ಮಂದಿಯಂತೆ ಸುಮಾರು 2 ಸಾವಿರದಷ್ಟು ಸಿಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.
ಡಿ. 21ರಂದು ಇನೆಂಟ್ ಜೀಸಸ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿರುವ ಮಸ್ಟರಿಂಗ್ ಕೇಂದ್ರದಲ್ಲಿ ಬೆಳಗ್ಗೆ 9.30ರಿಂದ ಮಸ್ಟರಿಂಗ್ ಕಾರ್ಯ ಪ್ರಾರಂಭಗೊಂಡಿದ್ದು, ಸಿಬಂದಿಗೆ ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಪ್ರತಿ ಸಿಬಂದಿ ತಮಗೆ ನಿಗದಿ ಪಡಿಸಿದ ವಾಹನಗಳ ಮೂಲಕ ಮತಗಟ್ಟೆಗಳಿಗೆ ತೆರಳಿದ್ದಾರೆ.

ತಲಾ 6 ಮಂದಿ ಸಿಬಂದಿ:

ಗ್ರಾ.ಪಂ.ಚುನಾವಣೆಗಾಗಿ ಪ್ರತಿ ಬೂತ್‌ಗಳಲ್ಲಿ 6ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಓರ್ವ ಪ್ರಿಸೈಡಿಂಗ್ ಆಫೀಸರ್(ಪಿಆರ್‌ಒ), ಸಹಾಯಕ ಪ್ರಿಸೈಡಿಂಗ್ ಆಫೀಸರ್(ಎಪಿಆರ್‌ಒ), ಇಬ್ಬರು ಪೋಲಿಂಗ್ ಪರ್ಸನ್‌ಗಳು, ಓರ್ವ ಡಿ ಗ್ರೂಪ್ ಸಿಬಂದಿ ಹಾಗೂ ಓರ್ವ ಪೊಲೀಸ್ ಸಿಬಂದಿ ಪ್ರತಿ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಒಟ್ಟು 155 ವಾಹನಗಳು:


ಮತಗಟ್ಟೆ ಸಿಬಂದಿ ಆಯಾಯ ಮತಗಟ್ಟೆಗಳಿಗೆ ತೆರಳುವ ದೃಷ್ಟಿಯಿಂದ ೧೫೫ ವಾಹನಗಳನ್ನು ಈಗಾಗಲೇ ನಿಗದಿ ಪಡಿಸಲಾಗಿದ್ದು, 55 ಕೆಎಸ್‌ಆರ್‌ಟಿಸಿ ಬಸ್ಸುಗಳು ಇರುತ್ತದೆ. ಉಳಿದಂತೆ ಜೀಪು, ಖಾಸಗಿ ಮಿನಿ ಬಸ್ಸು, ಮ್ಯಾಕ್ಸಿ ಕ್ಯಾಬ್‌ಗಳನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ 4 ಮತಗಟ್ಟೆಗಳ ಮತಪೆಟ್ಟಿಗಳು ಹಾಗೂ ಸಿಬಂದಿಯನ್ನು ಕೊಂಡೊಯ್ಯಲಾಗುತ್ತದೆ.

ಮಿನಿ ಬಸ್ಸುಗಳ ಮೂಲಕ 3 ಮತಗಟ್ಟೆಗಳು, ಮ್ಯಾಕ್ಸಿ ಕ್ಯಾಬ್‌ಗಳಲ್ಲಿ 2 ಹಾಗೂ ಜೀಪುಗಳ ಮೂಲಕ ಒಂದು ಮತಗಟ್ಟೆಯ ಆಧಿಕಾರಿಗಳು ಹಾಗೂ ಮತಪೆಟ್ಟಿಗೆ ಇರುತ್ತದೆ. ಸಾಮಾನ್ಯವಾಗಿ ಇತರ ವಾಹನಗಳು ತೆರಳಲು ಅಸಾಧ್ಯವಾದ, ತೀರಾ ಒಳ ಪ್ರದೇಶಗಳಿಗೆ ಜೀಪಿನ ಮೂಲಕ ಪೆಟ್ಟಿಗೆಗಳನ್ನು ಸಾಗಿಸಲಾಗುತ್ತದೆ ಎಂದು ಚುನಾವಣಾ ಸಿಬಂದಿ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಿ.ಸಿ.ರೋಡು ಘಟಕದಿಂದ ಸಾಕಷ್ಟು ಬಸ್ಸುಗಳನ್ನು ಚುನಾವಣೆ ಕರ್ತವ್ಯ ನಿಯೋಜಿಸಿರುವುದರಿಂದ ತಾಲೂಕಿನ ಗ್ರಾಮೀಣ ರಸ್ತೆಗಳಲ್ಲಿ ಯಾವುದೇ ಬಸ್ಸುಗಳು ಓಡಾಡುವುದಿಲ್ಲ. ಉಳಿದಂತೆ ಪುತ್ತೂರಿನಿಂದ ಬಸ್ಸುಗಳನ್ನು ಹೊಂದಾಣಿಕೆ ಮಾಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.

More articles

Latest article