Monday, April 8, 2024

ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ 88ನೇ ಅಧೀವೇಶನ

ಉಜಿರೆ: ಎಲ್ಲರೂ ಧರ್ಮದ ಮರ್ಮವನ್ನು ಅರಿತು ಸಾರ್ಥಕ ಜೀವನ ನಡೆಸಬೇಕು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ 88ನೆ ಅಧಿವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳವು ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತ ಸ್ಥಳ. ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯ ದಾನ ಎಂಬ ಚತುರ್ವಿಧ ದಾನಗಳು ಇಲ್ಲಿ ನಿತ್ಯೋತ್ಸವವಾಗಿದ್ದು ಧರ್ಮಸ್ಥಳವು ಮಾದರಿ ಧರ್ಮಕ್ಷೇತ್ರವಾಗಿದೆ. ಸರ್ವ ಧರ್ಮ ಸಮನ್ವಯ ಕೇಂದ್ರವಾಗಿರುವ ಧರ್ಮಸ್ಥಳದ ಮೂಲಕ ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರುತ್ತಿರುವ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಸಚಿವರು ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ ಕನಕಗಿರಿ ಜೈನ ಮಠದ ಪೂಜ್ಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ವಸ್ತುವಿನಲ್ಲಿರುವ ಸಹಜ ಸ್ವಭಾವವೇ ಧರ್ಮ ಆಗಿದೆ. ಮಾನವಲ್ಲಿ ಇಂದು ಅನೇಕ ಕಾರಣಗಳಿಂದ ಸಹಜ ಸ್ವಭಾವ ಕಡಿಮೆಯಾಗುತ್ತಿದೆ. ಪ್ರಾಣಿ ಪಕ್ಷಿಗಳು ಹಾಗೂ ಪ್ರಕೃತಿ ಮತ್ತು ಪರಿಸರ ತಮ್ಮ ಸಹಜ ಸ್ವಭಾವವನನ್ನು ಕಾಪಾಡಿಕೊಂಡು ಬಂದಿದೆ. ಆದರೆ ಮನುಷ್ಯನ ಅತಿಯಾದ ಆಸೆ-ಅಕಾಂಕ್ಷೆಗಳಿಂದ ಭೂಮಿ, ನೀರು, ಗಾಳಿ, ಇಂಧನ – ಎಲ್ಲವೂ ಇಂದು ಮಲಿನವಾಗಿದೆ. ನಮ್ಮ ಆಚರಣೆಯಲ್ಲಿ ಪ್ರಮಾದ ಮಾಡದೆ ಪ್ರಕೃತಿ ಪರಿಸರವನ್ನು ಪರಿಶುದ್ಧವಾಗಿ ಸಂರಕ್ಷಣೆ ಮಾಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಎಲ್ಲಾ ಪ್ರಾಣಿ ಪಕ್ಷಿಗಳು ಕೂಡಾ ಅವುಗಳ ಧರ್ಮ ಪಾಲಿಸುತ್ತಿರುವಾಗ ಮನುಷ್ಯ ಅಧರ್ಮದ ಹಾದಿಯಲ್ಲಿ ಸಾಗುವುದು ಸಲ್ಲದು ಎಂದು ಹೇಳಿದರು.
ಧರ್ಮಸ್ಥಳವು ಎಲ್ಲರ ಮನ ಪರಿವರ್ತನೆ ಮಾಡುವ ಮಂತ್ರಾಲಯವಾಗಿದೆ ಎಂದು ಸ್ವಾಮೀಜಿ ಬಣ್ಣಸಿದರು.

ಕಬೀರನ ವಿಚಾರಗಳ ಸಮಕಾಲೀನತೆ ಮತ್ತು ಭಕ್ತಿ ಪಂಥಗಳು ಎಂಬ ವಿಚಾರದಲ್ಲಿ ಬೆಂಗಳೂರಿನ ಕೇಶವ ಮಳಗಿ ಉಪನ್ಯಾಸ ನೀಡಿದರು.
ಮಾನವೀಯತೆಯೇ ಶ್ರೇಷ್ಠ ಧರ್ಮ ಎಂಬ ವಿಷಯದ ಬಗ್ಯೆ ಉಡುಪಿಯ ಧರ್ಮಗುರು ವಂದನೀಯ ಚೇತನ್ ಲೋಬೊ ಉಪನ್ಯಾಸ ನೀಡಿದರು.

ಮಾನವ ಧರ್ಮವೇ ಶ್ರೇಷ್ಠ: ಡಿ. ವೀರೇಂದ್ರ ಹೆಗ್ಗಡೆ
ಮಾನವ ಹಿತ ಹಾಗೂ ಲೋಕಕಲ್ಯಾಣವೇ ಎಲ್ಲಾ ಧರ್ಮಗಳ ಉದ್ದೇಶವಾಗಿದೆ. ಧರ್ಮದ ಮರ್ಮವಿರುವುದು ಆಚರಣೆಯಲ್ಲಿ. ಧರ್ಮದಲ್ಲಿ ಸತ್ವವಿದೆ, ಸತ್ಕಾರ್ಯಕ್ಕೆ ಪ್ರೇರಣೆ ಇದೆ. ಧರ್ಮವು ಎಲ್ಲರನ್ನು ಒಗ್ಗೂಡಿಸುವ ಸಾಧನವಾಗಿದ್ದು, ಮಾನವ ಧರ್ಮವೇ ಶ್ರೇಷ್ಠವಾಗಿದೆ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಸ್ವಾಗತ ಭಾಷಣದಲ್ಲಿ ಹೇಳಿದರು.
ನಾವು ಆಚರಿಸುವ ಧರ್ಮಗಳಲ್ಲಿ ವೈಯಕ್ತಿಕ ಧರ್ಮ ಮತ್ತು ವ್ಯಾವಹಾರಿಕ ಧರ್ಮ ಎಂದು ಎರಡು ವಿಧ. ಪ್ರತಿಯೊಬ್ಬರೂ ಅವರವರ ಧರ್ಮವನ್ನು ಪ್ರೀತಿಸಬೇಕು, ಗೌರವಿಸಬೇಕು ಮತ್ತು ಆಚರಿಸಬೇಕು. ಆದರೆ ಮನೆಯಿಂದ ಹೊರಗೆ ಉದ್ಯೋಗಕ್ಕೆ ಹಾಗೂ ವ್ಯವಹಾರಕ್ಕೆ ಹೋದಾಗ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಮ್ಮ ಧರ್ಮವನ್ನು ಪಾಲಿಸಿಕೊಂಡು, ನಮ್ಮ ವೃತ್ತಿಯನ್ನು ಹಾಳುಮಾಡಿಕೊಳ್ಳದೆ ಅದನ್ನು ಕಾಪಾಡಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಇಂದು ಜಾತಿ-ಮತ ಬೇಧ, ಲಿಂಗ ತಾರತಮ್ಯ, ಮೇಲು-ಕೀಳು ಎಂಬ ಭಾವನೆ ದೂರವಾಗಿದೆ. ಎಲ್ಲರೂ ಸರಿಸಮಾನರಾಗಿ, ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರಗತಿ ಸಾಧಿಸಲು ಉತ್ತಮ ಅವಕಾಶಗಳಿವೆ. ಧರ್ಮ ಸಮನ್ವಯತೆಗೆ ಕೊರೊನಾ ವ್ಯಾಧಿ ಉತ್ತಮ ಉದಾಹರಣೆಯಾಗಿದೆ.
ಧರ್ಮಸ್ಥಳದ ಭವ್ಯ ಪರಂಪರೆ ಹಾಗೂ ಚತುರ್ವಿಧ ದಾನ ಕಾರ್ಯವನ್ನು ನಿರಂತರ ಮಾಡಲಾಗುತ್ತಿದೆ. ಈ ವರ್ಷ 61 ಕೋಟಿ 23 ಲಕ್ಷ ರೂ. ವೈದ್ಯಕೀಯ ಹಾಗೂ ಶೈಕ್ಷಣಿಕ ನೆರವು ನೀಡಲಾಗಿದೆ. 1135 ದೇವಾಲಯಗಳ ಜೀರ್ಣೋದ್ಧಾರಕ್ಕೆ ನೆರವು ನೀಡಿರುವುದಲ್ಲದೆ, ಧರ್ಮೋತ್ಥಾನ ಟ್ರಸ್ಟ್ ಆಶ್ರದಲ್ಲಿ 260 ಪ್ರಾಚೀನ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 5 ಲಕ್ಷ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು 43 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ. ಇವರಿಗೆ ಬ್ಯಾಂಕ್‌ಗಳ ಮೂಲಕ 13 ಸಾವಿರ ಕೋಟಿ ರೂ. ವ್ಯವಹಾರಕ್ಕಾಗಿ ಒದಗಿಸಲಾಗಿದೆ. ಹೀಗೆ ಜಾತಿ-ಮತ ಬೇಧವಿಲ್ಲದೆ ಧರ್ಮಸ್ಥಳದಿಂದ ಎಲ್ಲರಿಗೂ ಸ್ವಾವಲಂಬಿ ಜೀವನಕ್ಕೆ ಅಭಯದಾನ ನೀಡಲಾಗಿದೆ ಎಂದು ಹೆಗ್ಗಡೆಯವರು ಮಾಹಿತಿ ನೀಡಿದರು.

ಡಾ. ಸುಧೀರ್ ಪ್ರಭು ಧನ್ಯವಾದ ಸಲ್ಲಿಸಿದರು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಕಂಚಿಮಾರು ಕಟ್ಟೆ ಉತ್ಸವ ನಡೆಯಿತು.

 

More from the blog

5,8,9,11ನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: 5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ 5, 8, 9ನೇ ತರಗತಿಗೆ ಬೋರ್ಡ್​ ಪರೀಕ್ಷೆ ಮುಗಿದಿದ್ದು,...

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...

ದ್ವಿತೀಯ ಪಿಯುಸಿ ಫಲಿತಾಂಶ ಶೀಘ್ರ ಪ್ರಕಟ

ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 3 ನೇ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಫಲಿತಾಂಶ ಪ್ರಕಟಗೊಂಡ ನಂತರ, ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು...

ಇಂದು ಸಂಪೂರ್ಣ ಸೂರ್ಯಗ್ರಹಣ : ಈ ರಾಶಿಯವರಿಗೆ ಕಾದಿದೆ ಆಪತ್ತು

ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸುತ್ತಿದೆ. ಸುಮಾರು 54 ವರ್ಷಗಳ ಬಳಿಕ ಸಂಭವಿಸುತ್ತಿರುವ ಸುದೀರ್ಘ ಸೂರ್ಯಗ್ರಹಣ ಇದಾಗಿದ್ದು, ಮಾಹಿತಿಗಳ ಪ್ರಕಾರ ಏಪ್ರಿಲ್ 8 ರಂದು ಸೂರ್ಯಗ್ರಹಣ ರಾತ್ರಿ 9.12 ರಿಂದ 1.25 ರವರೆಗೆ...