Friday, October 20, 2023

ಶುಚಿತ್ವ ಆಹಾರ ಆರೋಗ್ಯ

Must read

ಲೇ: ರಮೇಶ ಎಂ ಬಾಯಾರು ಎಂ.ಎ; ಬಿಇಡಿ

ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸುತ್ತೇವೆ. ನಮ್ಮ ಹಳೇ ದಿನಗಳಲ್ಲಿ ತಿನ್ನುವ ಉಣ್ಣುವ ಮೊದಲು ಮತ್ತು ನಂತರ ಕೈ ತೊಳೆದರೆ ಸಾಕಿತ್ತು. ಇಂದು ಹಣ್ಣು ತರಕಾರಿಗನ್ನು ಸ್ಪರ್ಶಿಸಿದರೆ ಕೈ ತೊಳೆಯ ಬೇಕು. ಹಣ್ಣುಗಳ ಸಿಪ್ಪೆ ಸುಲಿದರೆ ತಿನ್ನುವ ಮೊದಲು ಚೆನ್ನಾಗಿ ಕೈ ತೊಳೆಯಬೇಕು. ಎಂಡೋ ಸಾಲ್ಫಾನ್, ಫ್ಯೂರಿಡಾನ್, ಎಕಾಲೆಕ್ಸ್, ಕ್ಲೋರೋಡೈಲ್, ಫಂಗಿಸೈಡ್ ವಿಷಗಳು ನಮ್ಮ ಕೈಯಲ್ಲಿ ಪದರ ಪದರವಾಗಿ ಅಂಟಿಕೊಂಡಿರುತ್ತದೆ, ಕೈ ತೊಳೆಯದೇ ಹೋದರೆ ಲಿವರ್ ಮತ್ತು ಕಿಡ್ನಿಗಳು ಡಿಸ್ ಫಂಕ್ಷನ್, ಆಸ್ಮಾ, ಡಿಪ್ರೆಶ್ಶನ್, ಕ್ಯಾನ್ಸರ್ ಖಂಡಿತ ಎನ್ನುವ ಭಯವಿದೆ. ಜೊತೆಗೆ ಇಂದು ಕೋವಿಡ್-19ರ ಕಾರಣದಿಂದ ಯಾವುದನ್ನೂ ಮುಟ್ಟ ಬಾರದು, ಯಾವುದನ್ನಾದರೂ ಮುಟ್ಟಿದರೆ ಕೈ ತೊಳೆಯದೇ ಕಣ್ಣು, ಮೂಗು ಮತ್ತು ಬಾಯಿಗೆ ಕೈ ತಾಗಿಸಲೇ ಬಾರದು ವಿಟಮಿನ್ ಎ ಕಣ್ಣಿನ ಬಲಿಷ್ಠತೆಗೆ, ಸಿ ರೋಗನಿರೋಧಕ ಶಕ್ತಿಗೆ, ಬಿ ಕಾಂಪ್ಲೆಕ್ಸ್ ನಾಡಿ ವ್ಯೂಹಕ್ಕೆ ಎಂದು ಓದಿದ್ದೇವೆ. ನಮ್ಮ ಎಳವೆಯಲ್ಲಿ ನಾವು ವೈದ್ಯರ ಬಳಿ ಹೋಗಿದ್ದೇವೆಯೇ? ಶಾಲೆಗೆ ಗೈರಾಗಿದ್ದೇವೆಯೇ? ಗೈರು ಆಗಿದ್ದರೂ, ವೈದ್ಯರಲ್ಲಿಗೆ ಹೋಗಿದ್ದರೂ ಅಪರೂಪಕ್ಕೆ ಮಾತ್ರ. ಹಿಂದಿನ ದಿನಗಳಲ್ಲಿ ಎಲೆಗಳ ರಸ, ಬೇರುಗಳ ರಸ, ಹಣ್ಣುಗಳ ರಸ, ಜೇನು, ಶುಂಠಿ, ಮಜ್ಜಿಗೆ ಸೊಪ್ಪು, ತುಳಸಿ ರಸ, ಗಿಡಮೂಲಿಕೆ ಬಳಸಿ ಚಿಕ್ಕಪುಟ್ಟ ಕಾಯಿಲೆ ಕಡಿಮೆಯಾಗುತ್ತಿದ್ದರೆ ಅದಕ್ಕೆ ಕಾರಣ ನಾವು ತಿನ್ನುತ್ತಿದ್ದ ನಮ್ಮ ಹೆತ್ತವರು ಕೊಡುತ್ತಿದ್ದ ಆಹಾರ. ಎಲ್ಲ ಪೋಷಕಾಂಶಗಳೂ ಮೇಳೈಸಿದ ಆಹಾರವದು.
ದೀರ್ಘ ಕಾಲದ ಸಂರಕ್ಷಣೆ ಮತ್ತು ವೇಗವಾಗಿ ಮಾಗಿಸುವ ಲಾಭದ ಉದ್ದೇಶದಿಂದ ತರಕಾರಿ ಮತ್ತು ಹಣ್ಣುಗಳಿಗೆ ಚುಚ್ಚುವ ವಿವಿಧ ಹಾರ್ಮೋನ್‌ಗಳಿಂದಾಗಿ ನಮ್ಮ ಹಣ್ಣು ಮತ್ತು ತರಕಾರಿಗಳಲ್ಲಿ ವಿಟಮಿನ್‌ಗಳ ಪ್ರಮಾಣ ಅಲ್ಪ ಮಟ್ಟಕ್ಕೆ ಇಳಿದಿದೆ. ಎಲ್ಲ ಪೌಷ್ಟಿಕಾಂಶಗಳೂ ನಾಶವಾಗಿವೆ. ಹಣ್ಣು ತರಕಾರಿಗಳಿಗೆ ರೋಗ ಬಾರದೇ ಇರಲೆಂದು ಸಿಂಪಡಿಸುವ ನಾನಾ ಕೀಟನಾಶಕಗಳು, ಸಮೃದ್ಧ ಬೆಳೆಗಾಗಿ ಬಳಸುವ ರಾಸಾಯನಿಕ ಗೊಬ್ಬರಗಳು ನಮ್ಮ ಎಲ್ಲ ಆಹಾರಗಳನ್ನು ದುರ್ಬಲಗೊಳಿಸಿವೆ. ಇದರಿಂದಾಗಿ ಆರೋಗ್ಯಕಾರಕವಾಗಿರಬೇಕಾದ ಆಹಾರ ವಿಷಮಯಗೊಂಡಿದೆ.
ಇಂತಹ ಆಹಾರ ಸೇವಿಸಿದ ನಮ್ಮ ಮಕ್ಕಳು ಶಾಲಾ ಹಾಜರಿ ವಹಿಯಲ್ಲಿ ಎಷ್ಟು ಗೈರು ಹಾಜರಿ ಅಂಕಿತ ಹಾಕಿಸಿಲ್ಲ? ನಾವು ನಿರಂತರ ಶಿಶು ವೈದ್ಯರ ಸಂಪರ್ಕದಲ್ಲಿರುತ್ತೇವೆ. ಅವರ ಭೇಟಿಗಾಗಿ ದಿನಗಟ್ಟಲೆ ಕಾಯುತ್ತೇವೆ. ಮೆಡಿಕಲ್ ಬಿಲ್ ಪೇ ಮಾಡುತ್ತೇವೆ. ವೈದ್ಯರ ಭೇಟಿಗೆ ಅದೆಷ್ಟೋ ನಮ್ಮ ದಿನಗಳನ್ನು ಸಮಯವನ್ನು ವ್ಯಯಿಸಿದ್ದೇವೆ. ಆಸ್ಪತ್ರೆಗಳಲ್ಲಿ ದಾಖಲಿಸಿಯೋ ಸ್ವಯಂ ದಾಖಲಾಗಿಯೋ ಅದೆಷ್ಟೋ ಹಣ ಮತ್ತು ದಿನಗಳನ್ನು ಕಳೆದುಕೊಳ್ಳುತ್ತಲಿದ್ದೇವೆ. ಒಮ್ಮೆ ಗುಣವಾದಂತೆ ಕಂಡರೂ ಕೆಲವೇ ದಿನಗಳಲ್ಲಿ ಮತ್ತೆ ಕಾಯಿಲೆ ಉಲ್ಬಣಿಸಿ ವೈದ್ಯರ ಭೇಟಿ ಮಾಡುತ್ತೇವೆ. ಆಹಾರದಲ್ಲಿ ರೋಗ ನಿರೋಧಕ ಗುಣ ಇಲ್ಲದಿರುವುದೇ ನಮ್ಮ ಅನಾರೋಗ್ಯ ಮತ್ತು ನಾನಾ ರಾದ್ಧಾಂತಗಳಿಗೆ ಕಾರಣ.
ಯಾವುದೇ ಯೋಗ, ವಾಕಿಂಗ್, ಓಟ, ಜಿಮ್ಮ್ ನಮ್ಮ ಆರೋಗ್ಯವನ್ನು ಬೆಳೆಸದು. ಕೇವಲ ದೈಹಿಕ ಮತ್ತು ಮಾನಸಿಕ ವ್ಯಾಯಾಮವನ್ನಷ್ಟೇ ನೀಡಬಹುದು. ಔಷಧಗಳು ರೋಗವನ್ನು ಶಮನಗೊಳಿಸಬಹುದು. ನಮ್ಮ ಬಹುತೇಕ ರೋಗಗಳಿಗೆ ಔಷಧಗಳಿಂದ ಶಾಶ್ವತವಾದ ಪರಿಹಾರ ಸಿಗದು. ರೋಗ ಇಳಿಯಲು ನಮ್ಮ ಹಿತ್ತಿಲಿನಲ್ಲಿ ಮತ್ತು ಹೊಲದಲ್ಲಿ ಬೆಳೆದ ಸಾವಯವ ಪೌಷ್ಟಿಕ ಸಂತುಲಿತ ಆಹಾರವೇ ಆಗಬೇಕು. ಮನೆಯ ಅಡುಗೆ ಕೋಣೆಯಲ್ಲಿ ತಯಾರಾದ ರಸಪಾಕವೇ ಆಗಬೇಕು. ನಮ್ಮ ಆರೋಗ್ಯ ನಮ್ಮ ಶುಚಿತ್ವ ಮತ್ತು ಆಹಾರದಲ್ಲಿಯೇ ಇದೆಯಲ್ಲವೇ?
ನಮ್ಮ ಮಕ್ಕಳಲ್ಲಿ ಮಾತನಾಡಿಸುತ್ತಾ ಅವರ ಕಲಿಕೆಯ ಶ್ರದ್ಧೆ ಇಳಿಕೆಯಾಗುತ್ತಿರುವುದರ ಹಾಗೂ ಗೈರು ಹಾಜರಿಯ ಕಾರಣ ಕೇಳಿದಾಗ ಅವರ ಬಾಯಿಯಿಂದ ಪ್ರಮುಖವಾಗಿ ಬರುವ ಮಾತುಗಳು : ಮರೆವು, ಏಕಾಗ್ರತೆಯ ಕೊರತೆ, ಆಲಸ್ಯ, ತಲೆನೋವು, ಹೊಟ್ಟೆ ನೋವು ಮೈಕೈನೋವು, ನಿರುತ್ಸಾಹ, ನಿದ್ದೆಬರುವುದಿಲ್ಲ, ವಿಪರೀತ ನಿದ್ದೆ, ಓದಲು ಕುಳಿತಾಗ ಬೆವರುತ್ತದೆ, ಶೀತ, ಜ್ವರ ಕೆಮ್ಮು ಹೀಗೆ…. ಇದೆಲ್ಲ ವಿಷ ಆಹಾರ ಸೇವನೆಯ ದುಷ್ಪರಿಣಾಮಗಳೆಂಬುದರಲ್ಲಿ ಎರಡು ಮಾತಿಲ್ಲ.
ನಾವು ರೋಗಪೀಡಿತರಾಗಿ ಮಣ್ಣು ಸೇರುವ ಮೊದಲು ಆಹಾರಕ್ಕಾಗಿ ಮರಳಿ ಮಣ್ಣಿಗೆ ಹೋಗೋಣ. ಸಾಯಿಸುವ ವಿಷಗಳನ್ನು ಬಿಟ್ಟು ಸಾವಯವದತ್ತ ಮನಸ್ಸು ಹರಿಸೋಣ. ಇದು ಸಾಧ್ಯನಾ? ಜಾಗ ಇಲ್ಲ- ಸಮಯ ಇಲ್ಲ, ಖರ್ಚುದಾಯಕ- ಜಾಗ ನಮ್ಮ ಮನೆಯ ಪಕ್ಕದ್ದು ಸಾಕು. ಚಿಕ್ಕ ಚಿಕ್ಕ ಗೋಣಿಗಳಲ್ಲಿ ದೈನಂದಿನ ಅಗತ್ಯಗಳಿಗೆ ತಕ್ಕ ತರಕಾರಿ ಬೆಳೆಸಬಹುದು. ತರಕಾರಿ ಕೊಯಿದು ಉಳಿವ ಕಸ, ಒಲೆಯ ಬೂದಿ, ಕೈಕಾಲು ಮುS ತೊಳೆದ ನೀರು ಗಿಡಗಳ ಪೋಷಣೆಗಾಗಿ ಬಳಸ ಬಹುದು. ಒಂದು ಸಾವಿರ ಚದರಡಿಯಿಂದ ಎರಡು ಸಾವಿರ ಚದರಡಿ ತನಕ ವಿಸ್ತಾರದ ಮನೆ ಕಟ್ಟಿಸುವಾಗ ತರಕಾರಿ ಮತ್ತು ಹಣ್ಣುಗಳಿಗೆ ಇನ್ನೂರೋ ಮುನ್ನೂರೋ ಚದರ ಅಡಿ ಸ್ಥಳ ಪಡೆಯಲು ಕಷ್ಟವೇ?
ಅನಿವಾರ್ಯ ಕಾರಣ ಹೊರತು ಡಾಕ್ಟರರನ್ನು ಕಾಯುವ ಸಮಯ, ಅವರಿಗೆ ನೀಡುವ ಹಣ ನಾವು ಬೆಳೆಸುವ ತರಕಾರಿ, ಹಣ್ಣುಗಳಿಗೆ ಬೇಡವೇ ಬೇಡ. ಮೆಡಿಕಲ್ ಬಿಲ್ಲಿಗೆ ಆಗುವ ಹಣ ತರಕಾರಿ ಬೆಳೆಸಲು ಬೇಡ. ನಮ್ಮ ಕೆಲಸ ಮಾಡಿದರೆ ಅದಾಗಿಯೇ ಹಣ್ಣು ತರಕಾರಿಗಳು ಗಿಡಗಳಲ್ಲಿ ಬೆಳೆಯುತ್ತವೆ. ಪೇರಳೆ, ಬಾಳೆ, ಚಿಕ್ಕು , ಮಾವು, ಅನಾನಸು, ಪಪ್ಪಾಯಿ, ನುಗ್ಗೆ, ತೊಂಡೆ, ಬದನೆ, ಮೆಣಸು, ಬಸಳೆ, ಹರಿವೆ, ಬೆಂಡೆ, ಸೌತೆ, ಕುಂಬಳ, ಚೀನಿ ಮುಂತಾದುವು ಎಲ್ಲ ಹಿತ್ತಿಲಲ್ಲೂ ಬೆಳೆಯುತ್ತವೆ. ನಮ್ಮ ಹಿತ್ತಿಲು ಮತ್ತು ಹೊಲದ ಆಹಾರ ಉಣ್ಣುವಾಗ ಸಿಗುವ ಮಜಾನೇ ವಿಶಿಷ್ಟ.

More articles

Latest article