Friday, April 5, 2024

ಆತ್ಮಹತ್ಯೆ ಆತ್ಮಪರಿವರ್ತನೆ

ಲೇ: ರಮೇಶ ಎಂ ಬಾಯಾರು ಎಂ.ಎ; ಬಿ.ಇಡಿ

ದಿನಂಪ್ರತಿ ಅಲ್ಲಲ್ಲಿ ನಡೆಯುವ ಆತ್ಮಹತ್ಯೆಗಳ ಬಗ್ಗೆ ಪತ್ರಿಕಾವರದಿಗಳನ್ನು ನಾವು ಪದೇ ಪದೇ ಓದುತ್ತೇವೆ. ರೇಡಿಯೋದಲ್ಲಿ ಆಲಿಸುತ್ತೇವೆ ಮತ್ತು ಟಿ.ವಿ.ಗಳಲ್ಲಿ ದರ್ಶಿಸುತ್ತೇವೆ. ಬದುಕಿನ ದುಃಖದ ಸ್ಥಿತಿಯನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗುವ ಅಸಂಖ್ಯ ಮೃದು ಹೃದಯಿಗಳಿದ್ದಾರೆ. ನಾನಾ ಕಾರಣಗಳಿಗಾಗಿ ಆತ್ಮಹತ್ಯೆಯ ಹೆಸರಿನಲ್ಲಿ ಮೃತ್ಯು ವಿಜೃಂಭಿಸುತ್ತದೆ. ಇಂತಹ ಘಟನೆಗಳು ಬಹಳ ಕಠೋರ ಹೃದಯಗಳನ್ನೂ ಕರಗಿಸುತ್ತದೆ.
ಆತ್ಮ ಹತ್ಯೆಯೆನ್ನುವುದು ಸ್ವಯಂಪ್ರೇರಿತವೇ ಅಥವಾ ಬಾಹ್ಯಪ್ರೇರಿತವೇ ಎನ್ನುವುದೇ ಅರ್ಥವಾಗದ ಅಂಶ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಯಿಂದ ಆತ್ಮ ಹತ್ಯೆ ಎಂದಾಗ ಆತನ ಆತ್ಮ ಹತ್ಯೆಯ ನಿರ್ಧಾರದ ಹಿಂದೆ ಬಾಹ್ಯ ಒತ್ತಡವಿರಲಿಲ್ಲ ಎನ್ನುವಂತಿಲ್ಲ. ಪರೀಕ್ಷೆಗೆ ಮೊದಲು ಹೆತ್ತವರು ಆತನಲ್ಲಿ ಹೇಳಿರುವ ವಿವಿಧ ನಿರೀಕ್ಷೆಗಳು ಹುಸಿಯಾಯಿತಲ್ಲ ಎಂಬ ಕಾರಣಕ್ಕಲ್ಲವೇ ಆತ ಆತ್ಮ ಹತ್ಯೆ ಮಾಡಿರುವುದು? ಆ ನಿರೀಕ್ಷೆಯ ಒತ್ತಡಗಳು ಇರದೇ ಇರುತ್ತಿದ್ದರೆ ಆತ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದನೇ?

ರೈತನ ಆತ್ಮ ಹತ್ಯೆ ಎನ್ನುವಾಗಲೂ ಇದೇ ರೀತಿಯ ಒತ್ತಡಗಳು ಅವನನ್ನು ಕಾಡಿಯೇ ಇರುತ್ತವೆ. ಅದು ಸಾಲ ನೀಡಿದಾತನ ಒತ್ತಡವಿರಬಹುದು. ಬೆಳೆ ನಷ್ಟವಾಗಿ ಸಾಲ ತೀರಿಸಲಾಗದ ಮುಜುಗರದ ಪರಿಸ್ಥಿಯನ್ನು ಸಹಿಸುವ ಆತ್ಮ ಸಂಯಮದ ಕೊರತೆಯಿರಬಹುದು. ಯವುದೋ ಒಂದು ಒತ್ತಡ ಆತ್ಮಹತ್ಯೆಗೆ ಕಾರಣವಾಗಿರುತ್ತದೆಯೇ ಹೊರತು ಸ್ವಯಂ ಪ್ರೇರಿತವಲ್ಲ ಎಂದೆನಿಸುತ್ತದೆ. ಆದರೆ ಆತ ಅಥವಾ ಆಕೆಯಲ್ಲಿ ಆತ್ಮಸಂಯಮದ ಕೊರತೆಯನ್ನೂ ಗುರುತಿಸಲೇಬೇಕು.
ತಾಳಲಾಗದ ಋಣ ಭಾರ, ಬರಗಾಲದ ಹಾನಿಗಳು, ಬೆಳೆಯಲ್ಲಾದ ನಷ್ಟ, ಪರೀಕ್ಷೆಯಲ್ಲಿ ಅನುತ್ತೀರ್ಣ, ಕುಟುಂಬಿಕರೊಬ್ಬರು ಪ್ರೇಮಿಯೊಂದಿಗೆ ಮಾಡಿದ ಪಲಾಯನ, ಮನೆಯಲ್ಲಿ ಕುಡಿತ, ಮನೆ ಯಾ ಸಂಬಂಧಿಗಳ ಮನೆಯಲ್ಲಾದ ಆಕಸ್ಮಿಕ ಸಾವು, ಗಂಡ ಹೆಂಡಿರ ವಿರಸ, ಹಿರಿಯರ ಗದರಿಸುವಿಕೆ, ಕಿರಿಯರು ಹೇಳಿದ ಗೇಲಿಯ ಅಥವಾ ಹಿಂಸಕ ಮಾತುಗಳು ಹೀಗೆ ನಾನಾ ಕಾರಣಗಳನ್ನು ಮುಂದಿರಿಸಿಕೊಂಡು ಆಗುವ ಆತ್ಮಹತ್ಯೆ ಪ್ರಕರಣಗಳಿಗೆ ಕೊನೆಯಿಲ್ಲ.
ಆತ್ಮಹತ್ಯೆಗಳು ಹೆಚ್ಚುತ್ತಿರುವುದು ಸಾಮಾಜಿಕ ದುರಂತ. ಆದರೆ ಆತ್ಮಹತ್ಯೆ ಮಾಡುವುದು ಮತ್ತು ಮಾಡಲು ಕಾರಣರಾಗುವುದು ಘನ ಘೋರವಾದ ಪಾಪ ಕಾರ್ಯವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಡಿ.ವಿ.ಜಿ.ಯವರ ಈ ಕೆಳಗಿನ ಸಾಲುಗಳು ಮಾನವನು ಜೀವನವನ್ನು ಹೇಗೆ ಗೌರವಿಸಬೇಕೆಂಬುದನ್ನು ತಿಳಿಸುತ್ತದೆ.

ಗೌರವಿಸು ಜೀವನವ, ಗೌರವಿಸು ಚೇತನವ
ಆರದೋ ಜಗವೆಂದು ಭೇದವೆಣಿಸದಿರು,
ಹೋರುವುದೇ ಜೀವನ ಸಮೃದ್ಧಿಗೋಸುಗ ನಿನಗೆ
ದಾರಿಯಾತ್ಮೋನ್ನತಿಗೆ- ಮಂಕು ತಿಮ್ಮ|

ಜೀವನವನ್ನು ಗೌರವಿಸಬೇಕು. ಜೀವನಕ್ಕಾಗಿ ಹೋರಾಡಬೇಕು. ಆತ್ಮೋನ್ನತಿಗಾಗಿ ಈ ಜೀವನವನ್ನು ರಹದಾರಿಯನ್ನಾಗಿಸಬೇಕು ಎಂದು ಸಾರುವ ಈ ಸಾಲುಗಳು ಅದೆಷ್ಟು ಮನೋಜ್ಞವಾಗಿವೆ.
ಈ ದೇಹ ಭಗವಂತನ ವರಪ್ರಸಾದ. ಈ ದೇಹವನ್ನು ನಮ್ಮಿಚ್ಛೆಯಂತೆ ನೀಗುವ ಅಧಿಕಾರವನ್ನು ಭಗವಂತನು ನಮಗೆ ನೀಡಿಲ್ಲ. ಹಾಗಿರುವಾಗ ಸೃಷ್ಟಿಕರ್ತನ ನಿರ್ಧಾರವನ್ನು ಉಪೇಕ್ಷಿಸಿ ಆತ್ಮಹತ್ಯೆ ಮಾಡುವುದು ಪಾಪಕರವಾಗಿದೆ. ದಾಸಶ್ರೇಷ್ಠರಾದ ಪುರಂದರದಾಸರು ’ಮಾನವ ಜನುಮ ದೊಡ್ಡದು, ಅದನು ಹಾನಿಮಾಡಬೇಡಿ ಎಲೆ ಹುಚ್ಚಪ್ಪಗಳಿರಾ’ ಎಂದು ಆದೇಶಿಸಿದ್ದಾರೆ. ಮಾನವ ಮೃತ್ಯುಂಜಯನಲ್ಲವೆಂಬುದು ಸತ್ಯ. ಆದರೆ ಬದುಕಿನ ಅಂತ್ಯದವರೆಗೆ ಜೀವನವನ್ನು ಗೌರವಿಸುವುದರಲ್ಲಿ ಮಾತ್ರವೇ ಸಾರ್ಥಕತೆಯಿದೆ. ’ಶರೀರಮಾದ್ಯಂ ಖಲು ಧರ್ಮಸಾಧನಂ’ ಎನ್ನುವಂತೆ ಎಲ್ಲಾ ಆಶೋತ್ತರಗಳಿಗೂ ದೇಹವೇ ಮುಖ್ಯ. ಈ ದೇಹದಲ್ಲಿರುವ ಭಗವಂತನ ಪ್ರತೀಕವಾದ ಆತ್ಮದಿಂದಾಗಿ ದೇಹವು ದೇಗುಲವೆಂದು ಗೌರವಿಸಲ್ಪಡುತ್ತದೆ. ದೇಹವೆಂಬ ದೇಗುಲದಿಂದ ಆತ್ಮವೆಂಬ ಭಗವಂತನನ್ನು ಹೊರ ದಬ್ಬುವ ಪಾಪಕೃತ್ಯವೇ ಆತ್ಮಹತ್ಯೆ. ಅದಕ್ಕಾಗಿಯೇ ಆತ್ಮಹತ್ಯೆಯನ್ನು ಪಾಪಕಾರಕ ಎಂದು ಬಲವಾಗಿಯೇ ಪ್ರತಿಪಾದಿಸಬೇಕು.
ಕೆಲವೊಮ್ಮೆ ಜೀವನವು ಹಲವಾರು ದುಗುಡಗಳಿಗೊಳಗಾಗುತ್ತದೆ. ಆ ದುಗುಡಗಳನ್ನು ಸವಾಲಾಗಿ ಸ್ವೀಕರಿಸ ಬಲ್ಲವನೇ ಆತ್ಮ ಸಂಯಮಿ. ತನಗೇನೇನೋ ಆಗಿದೆಯಾದರೂ ಏನೂ ಅಗಿಲ್ಲದಂತಿರುವುದೇ ಆತ್ಮ ಸಂಯಮ. ಆತ್ಮ ಸಂಯಮವು ಮನಸ್ಸಿನೊಳಗಿನಿಂದಲೇ ಹುಟ್ಟಿ ನಮ್ಮೊಳಗೆ ಬಲಿತು ಬೆಳೆಯಬೇಕು. ತಾನು ಆತ್ಮ ಸಂಯಮಿ ಎಂಬ ತೋರಿಕೆಯು ಅಪ್ರಯೋಜಕ. ಅದು ಬೂಟಾಟಿಕೆಯೇ ಆಗುತ್ತದೆ. ಪ್ರಾರ್ಥನೆ, ಧ್ಯಾನ, ಪ್ರಾಣಾಯಾಮ, ಯೋಗ, ವಾಚನ, ಬರವಣಿಗೆ, ಪರಿಸರದೃಷ್ಯಗಳ ಆಸ್ವಾದನೆ, ಸಾಕು ಪ್ರಾಣಿಗಳ ಜೊತೆ ಅಥವಾ ಪುಟ್ಟ ಮಕ್ಕಳ ಜೊತೆ ಸರಸದಾಟ ಮುಂತಾದುವು ನಮ್ಮ ಮನಸನ್ನು ಬಲಗೊಳಿಸುತ್ತವೆ. ಸಂತಸದಾಯಕ ಬದುಕಿನ ಒರತೆಗಳು ಮನದೊಳಗೆ ಚಿಮ್ಮಲಾರಂಭಿಸುತ್ತವೆ. ಸೋಲು ಸವಾಲೇ ಹೊರತು ನಿರಾಶಾದಾಯಕ ಸಂಗತಿಯಲ್ಲ ಎಂಬ ಅತ್ಮಜ್ಯೋತಿ ನಮ್ಮೊಳಗೆ ಜಾಗೃತವಾಗಿರಬೇಕು; ಅದು ಆದುದರಿಂದ ರಣಹೇಡಿಗಳಾಗಿ ಬದುಕಿನಿಂದ ಪಲಾಯನ ಮಾಡಲು ಆತ್ಮಹತ್ಯೆಗೆ ಶರಣು ಹೋಗಬಾರದು. ಅದಕ್ಕಾಗಿ ನಮ್ಮಲ್ಲಿ ಆತ್ಮ ಸಂಯಮವು ಬಲವಾಗಿ ಬೆಳೆಯಬೇಕು. ಕಿರಿಯರ ಆತ್ಮ ಶಕ್ತಿಯನ್ನು ಬಲಗೊಳಿಸುವ ಪ್ರಯತ್ನ ಎಲ್ಲೆಡೆ ಹಿರಿಯರಿಂದ ಜರಗಬೇಕು. ಆತ್ಮಹತ್ಯೆ ಮುಕ್ತ ಸಮಾಜಕ್ಕೆ ಹಿರಿಯರ ಆದರ್ಶವೇ ಮಾರ್ಗಸೂಚಿಯಾಗುವಂತಾಗಬೇಕು.

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....