Wednesday, April 10, 2024

ನಮ್ಮ ವಂದನೀಯ ಮಾಸ್ಟ್ರು

ಲೇ: ರಮೇಶ ಎಂ. ಬಾಯಾರು ಎಂ.ಎ, ಬಿ.ಇಡಿ

ಒಂದನೆಯ ಮೇಸ್ಟ್ರು- ನಾವು ಕರೆಯುವುದು ಹಾಗೆಯೇ. ಅವರು ವೈಯಕ್ತಿಕವಾಗಿ ನನ್ನಪ್ಪನ ತಮ್ಮನಾಗಿ ನನಗೆ ರಕ್ತ ಸಂಬಂಧಿಯಾಗಿದ್ದರೂ ನಾನೂ ಕರೆಯುತ್ತಿದ್ದುದು ಒಂದನೇ ಮಾಸ್ಟ್ರು ಎಂದೇ. ಓರ್ವ ಅಧ್ಯಾಪಕನಾಗಿ ಅವರು ನನ್ನ ಮನದಾಳದಲ್ಲಿ ಮಾತ್ರವಲ್ಲ; ಸಹಸ್ರಾರು ವಿದ್ಯಾರ್ಥಿಗಳ ಮನಃಪಟಲದೊಳಗೂ ಅಚ್ಚಾಗಿರುವ ಒಂದನೇ ಮೇಸ್ಟ್ರು. ಅವರು ಕಲಿಸಿಸಿದ ಶಾಲೆಗಳ ಸಂಖ್ಯೆಯೂ ಒಂದೇ. ಆ ಶಾಲೆಯೇ ನಾನು ಓದಿದ ಬಾಯಾರು ಗ್ರಾಮದ ಸಜಂಕಿಲದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಐಡೆಡ್ ಹಿರಿಯ ಪ್ರಾಥಮಿಕ ಶಾಲೆ. ಅವರು ಕಲಿಸಿದ ತರಗತಿಯೂ ಒಂದನೇ ಮಾತ್ರವೇ. ಅಂಬೆಗಾಲಿಟ್ಟು ಕೊಂಡು ತೊದಲು ನುಡಿಗಳೊಂದಿಗೆ ಮೊತ್ತಮೊದಲಾಗಿ ಶಾಲೆಗೆ ಬರುವ ಕಂದಮ್ಮಗಳಿಗೆ ಕಲಿಸುವುದರಲ್ಲೂ ಅವರು ನಂಬರ್ ಒಂದೇ. ಈ ಅಕ್ಷರ ಮಾಂತ್ರಿಕ, ಮಕ್ಕಳ ಮನಸ್ಸುಗಳನ್ನಾಕರ್ಷಿಸುತ್ತಿದ್ದ ಪರಿಪೂರ್ಣ ಗುರು; ಶಿಕ್ಷಕ ಪರಂಪರೆಗೆ ಆದರಣೀಯರು ಮತ್ತು ಆದರ್ಶರು. ಎಂ. ರಾಮಕೃಷ್ಣ ಭಟ್ಟ ಎಂಬುದು ಅವರ ನಾಮಧೇಯವಾಗಿದ್ದರೂ ಅವರನ್ನು ಗುರುತಿಸಲು ಹೆಚ್ಚು ಸೂಕ್ತ ಪದ ಒಂದನೇ ಮಾಸ್ಟ್ರು. ಅವರು ಬಾಯಾರು ಗ್ರಾಮದ ಆವಳ ಮಠ ಕುಟುಂಬದಲ್ಲಿ ದಿನಾಂಕ 02.06.1934ರಂದು ಜನಿಸಿದರು.
ರಾಮಕೃಷ್ಣ ಭಟ್ಟರು ಒಂದನೇ ಮಾಸ್ಟ್ರು ಮಾತ್ರ ಅಲ್ಲ. ಅವರು ವಂದನೀಯ ಮಾಸ್ಟ್ರೂ ಹೌದು. ಅವರ ಕೈಯಲ್ಲಿ ಉದ್ದನೆಯ ಕೋಲಿರುತಿತ್ತು. ಕರಿಹಲಗೆಯ ಓದಿಗೆ ಮಾತ್ರ ಅದರ ಬಳಕೆ. ಒಂದನೆಯ ತರಗತಿ ಓದುವಾಗ ನನಗೀಗಲೂ ನೆನಪಿದೆ; ಮಕ್ಕಳು ಅವರ ಹೆಗಲಿಗೆ ಹತ್ತಿ ನೇತಾಡುತ್ತಿದ್ದರು. ಆಗ ಅವರು ಮುಗುಳು ನಗುತ್ತಿದ್ದರು ಆದರೆ ಗದರಿಸುತ್ತಿರಲಿಲ್ಲ. ಅವರು ಮಕ್ಕಳಿಗೆ ಹೊಡೆದುದನ್ನು ನಾನು ನೋಡಿಯೇ ಇಲ್ಲ. ಪಾದರಸದಂತೆ ತರಗತಿಯಲ್ಲಿ ಓಡಾಡುತ್ತಿದ್ದ ಅವರ ದೇಹ ಸ್ವಲ್ಪ ಕುಳ್ಳು. ಅವರು ತರಗತಿಯ ಕರಿಹಲಗೆಯಲ್ಲಿ ಬರೆದ ಅಕ್ಷರಗಳು, ಅಂಕಿಗಳು ಮತ್ತು ಚಿತ್ರಗಳು ಮುದ್ರಿತವೋ ಎಂಬಂತೆ ಸ್ಪಷ್ಟ ಹಾಗೂ ಆಕರ್ಷಕ. ಅಕ್ಟೋಬರದ ನಂತರ ಮಕ್ಕಳಿಗೆ ಬಳಪದಲ್ಲಿ ಮೂರು ಗೆರೆಯ ಕೋಪಿ ಬರೆಸುತ್ತಿದ್ದರು. ಬಳಪಕ್ಕೆ ಎಲ್ಲ ಮಕ್ಕಳಿಗೂ ಅವರೇ ಮೂರು ಮೂರು ಗೆರೆ ಹಾಕಿ ಕೊಡುತ್ತಿದ್ದರು. ಅದಕ್ಕೆ ಅವರಿಗೆ ಅಡಿಕೋಲು, ರೂಲರ್ ಯಾವುದೂ ಬೇಡ. ಗೆರೆಯೆಳೆಯುತ್ತಿದ್ದುದು ಬರಿಗೈಯಲ್ಲೇ. ಆ ಗೆರೆಗಳು ಅಷ್ಟೂ ನೇರ ಮತ್ತು ಅಷ್ಟೂ ಸಮಾನಾಂತರವಾಗಿದ್ದುವು. ಕೆಲವು ಪೋಕರಿಗಳು ಗೆರೆಗಳನ್ನು ಒರೆಸಿ ಪುನಹ ಗೆರೆ ಹಾಕಿಸಲು ಬಂದರೆ ಈ ಮೇಸ್ಟ್ರಿಗೆ ತಕ್ಷಣವೇ ಗೊತ್ತಾಗುತ್ತಿತು. ಪುನಹ ಗೆರೆ ಹಾಕಿ ಕೊಟ್ಟು ಹೇಳುತ್ತಿದ್ದರು … ನೀನು ಒಳ್ಳೆಯವನು . . . ಇನ್ನು ಬರೆದು ತೋರಿಸದೇ ಉಜ್ಜ ಬೇಡ … ತಿಳಿಯಿತಾ? ಅಷ್ಟೂ ಸರಳ ಮತ್ತು ಸೌಮ್ಯ ಅವರು.
ಬೆಳಗ್ಗೆ ಎರಡವಧಿ ಕನ್ನಡ; ಮಧ್ಯಾಹ್ನ ಮೇಲೆ ಎರಡವಧಿ ಲೆಕ್ಕ ಇದು ಅವರ ದೈನಂದಿನ ಪಾಠದ ವೈಖರಿ. ಮದ್ಯಾಹ್ನಕ್ಕೆ ಮೊದಲಿನ ಎರಡು ಅವಧಿಗಳು ಕಥೆ, ಹಾಡು ಮತ್ತು ಅಭಿನಯಗಳಿಗೆ ಮೀಸಲು. ಲೆಕ್ಕದ ಪಾಠದಲ್ಲಿ ಅಂಕಿಗಳನ್ನು ಒಂದರಿಂದ ನೂರರ ತನಕ ಕಂಠಪಾಠ ಹೇಳಬೇಕು ಮತ್ತು ಬರೆಯಬೇಕು. ಬರೆಯಲು ಬಳಪದಲ್ಲಿ ನೂರು ಕೋಣೆಗಳು ಬೇಕು. ಆ ಕೋಣೆ ಹಾಕಿ ಕೊಡುತ್ತಿದ್ದವರು ನಮ್ಮ ಒಂದನೆಯ ಮಾಸ್ಟ್ರು. ಬಳಪ ದೊಡ್ಡದಿರಲಿ ಚಿಕ್ಕದಿರಲಿ, ಅದರಲ್ಲಿ ನೂರು ಕೋಣೆ ಈ ಮಾಸ್ಟ್ರ ಕೈಯಿಂದ ರೂಲರ್ ನೆರವಿಲ್ಲದೇ ಕರಾರುವಾಕ್ಕಾಗಿ ಬೀಳುತ್ತಿತ್ತು. ಮೂವತ್ತಕ್ಕೂ ಅಧಿಕ ಮಕ್ಕಳಿಗೆ ಒಂದು ನೂರರಂತೆ ಬಳಪದಲ್ಲಿ ಚೌಕ ಕೋಣೆ ಹಾಕಿ ಕೊಡಲು ಅವರಿಗೆ ಕೆಲವೇ ನಿಮಿಷ ಸಾಕಾಗುತ್ತಿನ್ನುವುದೇ ಅವರ ಕೈಚಳಕದ ಕರಾಮತ್ತು.
ಮಕ್ಕಳನ್ನು ಕೋಟೆಯಾಕಾರದಲ್ಲಿ ತನ್ನ ಸುತ್ತ ನಿಲ್ಲಿಸಿ ಓದಿಸುತ್ತಿದ್ದರು, ಅಂಕಿ ಹೇಳಿಸುತ್ತಿದ್ದರು. ಅಭಿನಯ ಗೀತೆಯೊಂದಿಗೆ ಕುಣಿಸುತ್ತಿದ್ದರು, ಕಥಾಭಿನಯ ಮಾಡಿಸುತ್ತಿದ್ದರು. ಚಿತ್ರಕಥೆ ಓದಿಸುತ್ತಿದ್ದರು, ಶಿಶು ಗೀತೆ ಹೇಳಿಸುತ್ತಿದ್ದರು. ಸಂಜೆಯ ಹೊತ್ತು ಅಂಗಳದಲ್ಲಿ ಚೆಂಡಾಟ ಆಡಿಸುತ್ತಿದ್ದರು, ಕಳ್ಳ ಪೋಲಿಸ್ ಆಡಿಸುತ್ತಿದ್ದರು, ಅವರು ಆಡಿಸುತ್ತಿದ್ದ ಹುಲಿದನ ಆಟ ಇಂದೂ ನೆನಪಿದೆ.
ನನ್ನ ಒಂದನೇ ತರಗತಿಯ ಕಲಿಕೆಯ ಅನುಭವ ಸುಮಾರು ಐವತ್ತೈದು ವರ್ಷಕ್ಕಿಂತಲೂ ಹಿಂದಿನದು. ಹಳ್ಳಿ ಶಾಲೆ! ಹಳ್ಳಿಯ ಸಾಮಾಜಿಕ ಮತ್ತು ಧಾರ್ಮಿಕ ಸಂಪ್ರದಾಯಗಳು ಒಂದೆಡೆ. ಆರೋಗ್ಯವಿಲ್ಲದ ಮಕ್ಕಳು, ಮೂಗಿನಿಂದ ಸಿಂಬಳ ಸುರಿಸುವ ಮಕ್ಕಳು, ಹೊಟ್ಟೆ ಹಳಸಿ ವಾಕರಿಕೆ ಬರಿಸುವಂತಹ ಆಪಾನ ವಾಯು ಪಸರಿಸುವ ಮಕ್ಕಳು, ಸ್ನಾನ ಮಾಡದವರು, ಚೀಲ ಉಡುಪು ತೊಳೆಯದವರು ಹೀಗೆ ನಾನಾ ಸಮಸ್ಯೆಗಳ ಮಕ್ಕಳಿಂನ್ನೊಂದೆಡೆ. ಆಗಿನ ಅಂಧ ಕಾಲದಲ್ಲೂ ಎಲ್ಲರೂ ಸಮಾನ ಅವರಿಗೆ; ಎಲ್ಲರನ್ನೂ ಆದರ ಮತ್ತು ಪ್ರೀತಿಯಿಂದ ಕಾಣುತ್ತಿದ್ದರು ಅವರು; ಅದಕ್ಕೇ ವಂದನೀಯರು ಅವರು.
ಅವರೊಂದಿಗೆ ನನ್ನ ಕಲಿಕೆಯ ಅನುಭವವನ್ನು ಮಾತ್ರವೇ ವಿವರಿಸಿದರೆ ಸಣ್ಣ ಲೋಪವಾಗಬಹುದು. ಅವರ ಬಗೆಗಿನ ನನ್ನ ಇನ್ನೊಂದು ಅನುಭವವೂ ಇಲ್ಲಿ ಅತ್ಯಂತ ಪ್ರಸ್ತುತ. ಅವರು ನನ್ನ ಉದ್ದೇಶಕ್ಕಾಗಿ ತೊಭತ್ತು ದಿನಗಳ ದೀರ್ಘ ರಜೆಯನ್ನು ೧೯೭೬ರಲ್ಲಿ ಪಡೆದಿದ್ದರು. ಇದರಿಂದಾಗಿ ಆ ತೊಂಭತ್ತು ದಿನ ನಾನೋದಿದ ಶಾಲೆಯ ಒಂದನೇ ತರಗತಿಗೆ ಕಲಿಸುವ ಮಹಾ ಸೌಭಾಗ್ಯವೊಂದು ನನಗೆ ದೊರೆಯಿತು. ಶಾಲಾ ವರ್ಷದ ಮಧ್ಯಂತರದ ದಿನಗಳವು. ಶಾಲಾ ತಪಾಸಣೆಗೆ ಸಂಜೀವ ಐಲ್ ಎಂಬ ಹೆಸರಿನ ತಪಾಸಣಾಧಿಕಾರಿಗಳು ಬಂದಿದ್ದರು. ನನಗೆ ಬೋಧನೆ ಮತ್ತು ತಪಾಸಣೆಗಳ ಚೊಚ್ಚಲ ಅನುಭವ. ನನ್ನ ಅಂದಿನ ಪ್ರಾಯವೂ ಹತ್ತೊಂಭತ್ತು. ತಪಾಸಣೆಯೆನ್ನುವಾಗ ಅನನುಭವಿಗಳು ಅನುಭವಿಸುವ ಸಹಜವಾದ ನಡುಕ ನನ್ನನ್ನೂ ಆವರಿಸಿತ್ತು. ಹೇಳಿ ಕೇಳಿ ಆ ತಪಾಸಣಾಧಿಕಾರಿಗಳು ಸ್ವಲ್ಪ ಗಂಭೀರ ಮತ್ತು ನಿಯತ್ತಿನ ವ್ಯಕ್ತಿ. ಆ ದಿನದ ಮೊದಲ ಶೈಕ್ಷಣಿಕ ಪರಿಶೀಲನೆಗೆ ಒಂದನೇ ತರಗತಿಗೇ ತಪಾಸಣಾಧಿಕಾರಿಗಳು ಬಂದರು. ಅವರು ಮಕ್ಕಳಲ್ಲಿ ಹಾಡಿಸಿದರು, ಕಥೆ ಹೇಳಿಸಿದರು, ಓದಿಸಿದರು, ಬರೆಸಿದರು, ಪರಿಸರ ಅಧ್ಯಯನದಲ್ಲಿ ಬಣ್ಣಗಳ ಬಗ್ಗೆ ಕೇಳಿದರು. ಎಲೆಯ ಬಣ್ಣ ಹಳದಿಯಾವಾಗ ಆಗುತ್ತದೆ ಎಂದು ಕೇಳಿದಾಗಲೂ ಮಕ್ಕಳು ನಿರ್ದಿಷ್ಟವಾದ ಉತ್ತರವನ್ನೇ ನೀಡಿದರು.
ಮಕ್ಕಳಲ್ಲಿರುವ ಅಂಕಿಗಳ ಜ್ಞಾನದ ಶೋಧನೆ ಮಾಡಿದರು. ಮಕ್ಕಳ ಪ್ರತಿಕ್ರಿಯೆ ನೋಡಿ ಆನಂದಿಸುತ್ತಲೇ ಇದ್ದರು. ನನಗೆ ನಡುಕ ಇಳಿಯ ತೊಡಗಿತು. ಗಣಿತದಲ್ಲಿ ಕೊನೆಯ ಪ್ರಶ್ನೆ ಕೇಳುತ್ತೇನೆ ಎನ್ನುತ್ತಾ ಕೈಯಲ್ಲಿ ಕರಿಹಲಗೆಯಲ್ಲಿ ಬರೆಯಲು ಬಳಸುವ ಐದು ಸೀಮೆ ಸುಣ್ಣ (ಚೋಕ್)ಗಳನ್ನು ಹಿಡಿದುಕೊಂಡರು. ಒಂದೊಂದೇ ಸೀಮೆ ಸುಣ್ಣವನ್ನು ಕೆಳಗಿಡುತ್ತಾ ಕೈಯಲ್ಲಿ ಎಷ್ಟು ಉಳಿಯಿತು ಎಂದು ಪ್ರಶ್ನಿಸುತ್ತಿದ್ದರು. ಮಕ್ಕಳು ನಾಲ್ಕು, ಮೂರು, ಎರಡು ಎಂದು ಸರಿಯಾದ ಉತ್ತರವನ್ನೇ ಕೊಡುತ್ತಿದ್ದರು. ಕೊನೆಯ ಒಂದನ್ನು ಕೆಳಗಿಟ್ಟು ಮಕ್ಕಳಲ್ಲಿ ಕೈಯಲ್ಲಿ ಎಷ್ಟಿದೆ ಎಂದು ಪ್ರಶ್ನಿಸಿದರು. ಫಕ್ಕನೇ ನನ್ನ ಕೈಕಾಲು ಅದುರಿತು. ಮಕ್ಕಳು ಕೈಯಲ್ಲಿ ಇಲ್ಲಎಂದರೆ ಗಣಿತ ಸೋಲುತ್ತದೆ ಎನ್ನುವುದೇ ನನಗೆ ಆಗ ಆದ ಆತಂಕ. ಆ ತರಗತಿಯಲ್ಲಿ ದುರ್ಗಾಪರಮೇಶ್ವರಿ ಎಂಬ ಪುಟ್ಟ ಚೂಟಿಯಿದ್ದಳು. ಅವಳು ಫಕ್ಕನೆ ನಿಂತು ಕೈಮೇಲೆ ಮಾಡಿದಳು. ಸಂಜೀವ ಐಲ್, ಎಷ್ಟು ಹೇಳಮ್ಮ ಎಂದರು. ಆ ಮಗು ತಕ್ಷಣ ಸೊನ್ನೆ ಎಂದು ವೃತ್ತಾಕೃತಿಯಲ್ಲಿ ತೋರುಬೆರಳನ್ನು ತಿರುಗಿಸಿತು. ನನಗೆ ಹೋದ ಜೀವ ಮರಳಿದಂತಾಯಿತು. ಯಾಕೆಂದರೆ ಗಣಿತ ಗೆದ್ದಿತ್ತು. ಇನಸ್ಪೆಕ್ಟ್ರು ನನ್ನನ್ನು ನೋಡಿ ಶಹಬ್ಬಾಸ್ ಎಂದರು. ನಾನು ಕಲಿಸ ತೊಡಗಿ ಒಂದು ವಾರ ಮಾತ್ರವೇ ಆಗಿತ್ತು. ತರಗತಿಯ ಚಿತ್ರಣವನ್ನು ಕರಗತ ಮಾಡುವುದಕ್ಕೂ ಈ ಅವಧಿ ಸಾಲದು.. ಮಕ್ಕಳ ಅಂದಿನ ಕಲಿಕಾ ಪ್ರದರ್ಶನದಲ್ಲಿ ನನ್ನ ದುಡಿಮೆ ಇನ್ನೂ ಆರಂಭಗೊಂಡಿರಲಿಲ್ಲ. ರಜೆಯ ಮೇಲೇ ಹೋಗುವ ಮೊದಲೇ ನಮ್ಮ ಒಂದನೇಯ ಮೇಸ್ಟ್ರು ಮಕ್ಕಳಿಗೆ ಗಣಿತದ ಭದ್ರ ಬುನಾದಿ ಹಾಕಿದ್ದರು. ತಾನು ಕಲಿಸಿದ ಪ್ರತೀ ಅಂಕಿಯ ಕಲ್ಪನೆಯನ್ನೂ ದೃಢವಾಗಿ ಮಕ್ಕಳ ಮಿದುಳಿನಲ್ಲಿ ಸ್ಥಿರಗೊಳಿಸಿದ್ದರು. ಬೇರೆ ಬೇರೆ ಮನೆ ಭಾಷೆಗಳ ಮಕ್ಕಳು, ಆಟ ಆಡುವ ವಯೋಮಾನ, ತುಂಟಾಟಿಕೆಯನ್ನೇ ಇಚ್ಛಿಸುವ ಮನಸ್ಥಿತಿಯ ಪುಟ್ಟ ಕಂದಮ್ಮಗಳು ಶಾಲೆಗೆ ಸೇರಿದ ಕೆಲವೇ ತಿಂಗಳಲ್ಲಿ ಪ್ರಭುತ್ವ ಹಂತದ ಕಲಿಕೆ ಪಡೆಯುತ್ತಿದ್ದರೆಂದರೆ ಈ ನಮ್ಮ ಒಂದನೇ ಮಾಸ್ಟ್ರು ವಂದನೀಯರೆಂದರೂ ಅದು ಕಡಿಮೆಯೆಂದೇ ಅನಿಸುತ್ತದೆ.

ಅವರು ತರಗತಿಗೆ ಬೆಳಗ್ಗೆ ಬರುವಾಗ ಚಿತ್ರಪಟ, ವರ್ಣಮಾಲೆ, ಅಕ್ಷರ ಕಾರ್ಡು, ಪದ ಕಾರ್ಡುಗಳನ್ನು ತರುತ್ತಿದ್ದರು. ಜತೆಗೆ ನಾಲ್ಕೈದು ಕರಡಿಗೆಗಳೂ ಇರುತಿದ್ದುವು. ಒಂದು ಚಿಕ್ಕ ಪೆಟ್ಟಿಗೆಯೂ ಇರುತಿತ್ತು. ಆ ಪೆಟ್ಟಿಗೆಯಲ್ಲಿ ಬಳಪದಲ್ಲಿ ಬರೆಯುವ ಕಡ್ಡಿಯ ತುಂಡುಗಳು. ಅದು ಕಡ್ಡಿಯಿಲ್ಲದವರಿಗೆ ಬರೆಯಲು ಕೊಡಲು ಬಳಕೆಯಾಗುತ್ತಿತ್ತು. ಕೋಪಿಯನ್ನು ಪುಸ್ತಕದಲ್ಲಿಯೂ ಬರೆಸುತ್ತಿದ್ದರು. ಪುಸ್ತಕ ಇಲ್ಲದವರಿಗೆ ಅವರೇ ಪುಸ್ತಕ ಕೊಡುತ್ತಿದ್ದರು. ಆಗಿನ ಚಿಕ್ಕ ಸಂಬಳದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಬಳಪ, ಕಡ್ಡಿಯ ತುಂಡು, ಆ ತುಂಡನ್ನು ಸಿಕ್ಕಿಸಿ ಉದ್ದಮಾಡಲು ಡಬ್ಬಿ ಕೊಳವೆ (ವಾಟೆ), ಪುಸ್ತಕ, ಪೆನ್ಸಿಲು ಮೊದಲಾದುವನ್ನು ನೀಡುತ್ತಿದ್ದರು. ಅವರು ಶಾಲೆಯಲ್ಲೇ ಪುಟ್ಟ ಸ್ಟೇಷನರಿಯೊಂದನ್ನು ಮಾಡಿದ್ದರು. ಅದರಿಂದ ಬಂದ ಲಾಭ ಬಡ ಮಕ್ಕಳಿಗೆ ಸಾಮಗ್ರಿ ಒದಗಿಸಲು ಖಂಡಿತವಾಗಿಯೂ ಸಾಕಾಗದು.
ಕರಡಿಗೆಗಳಲ್ಲಿ ಅವರು ತರುತ್ತಿದ್ದುದು ಗೇರು, ರೆಂಜೆ, ಹೊಂಗೆ ಮತ್ತು ಗುಲಗುಂಜಿಯ ಬೀಜಗಳು, ವರ್ಣಮಯವಾದ ಮಣಿಗಳು, ಹಾಗೂ ತೆಂಗಿನ ಮರದ ಸೋಗೆಯಿಂದ ತಯಾರಿಸಿದ ಆರು ಇಂಚು ಉದ್ದದ ಕಡ್ಡಿಗಳ ಕಟ್ಟುಗಳು. ಅವುಗಳಲ್ಲಿ ಬಿಡಿಗಡ್ಡಿಗಳು, ಹತ್ತು ಮತ್ತು ನೂರರ ಕಡ್ಡಿಗಳ ಕಟ್ಟುಗಳೂ ಇರುತ್ತಿದ್ದವು. ಸಹಸ್ರಾರು ಬೀಜ ಮತ್ತು ಮಣಿಗಳನ್ನು ಮಕ್ಕಳು ಅಕ್ಷರ ಮತ್ತು ಅಂಕಿಗಳ ಮೇಲೆ ಇಟ್ಟು ಆಡ ಬೇಕು. ಒಬ್ಬನದು ಹೊಂಗೆಯ ಕಾಯಿಯಿಂದ ಮಾಡಿದ ಅಕ್ಷರವಾದರೆ ಇನ್ನೊಬ್ಬನದು ಗುಲಗುಂಜಿ ಅಕ್ಷರ. ಮಗದೊಬ್ಬನದು ಬಣ್ಣ ಬಣ್ದದ ಮಣಿಯದು. ಯಾರದ್ದು ಚಂದ ಮತ್ತು ಸರಿ ಎಂಬ ಸ್ಪರ್ಧೆ ಬೇರೆ. ಕಡ್ಡಿಗಳು ಕೂಡುವ ಮತ್ತು ಕಳೆಯವ ಲೆಕ್ಕ ಮಾಡಲು ಬಳಕೆಯಾಗುತ್ತಿತ್ತು. ಮಕ್ಕಳು ಖುಷಿಯಿಂದ ಆಡ ಬೇಕು; ಕಲಿಕೆಯು ಆಟಗಳೊಂದಿಗೆ ಸಮ್ಮಿಳಿತವಾಗ ಬೇಕು ಇದು ಅವರ ಧೋರಣೆ. ಅವರ ನಲಿ ಕಲಿ ಬೋಧನಾ ತಂತ್ರದ ನೆರವಿನಿಂದ ಕಲಿತ ಪ್ರತಿಯೊಬ್ಬರಿಗೂ ಓದು ಸಲೀಸು, ಬರವಣಿಗೆ ಖಾತ್ರಿ ಮತ್ತು ಲೆಕ್ಕದಲ್ಲಿ ದುಃಖವಿರಲಿಲ್ಲ.

ಅವರು 2012ನೇ ವರ್ಷದ ಜನವರಿ 14ರ ಮಕರಸಂಕ್ರಾತಿಯ ಪುಣ್ಯದಿನದಂದು ಸ್ವರ್ಗಸ್ಥರಾದರು. ನಾನೂ ಮಾಸ್ಟ್ರು. ಅವರದು ಪರ್ವತದಷ್ಟು ಎತ್ತರದ ವ್ಯಕ್ತಿತ್ವ. ಅವರೆದುರಿಗೆ ನಾನಾದರೋ ಪ್ರಪಾತದಷ್ಟು ಕುಬ್ಜ.. ಅವರ ಮರಣದ ಸುದ್ದಿ ಇಪ್ಪತ್ತೈದು ಕಿಲೋ ಮೀಟರ್ ದೂರದಲ್ಲಿರುವ ನನಗೆ ಬಂತು. ಮೃತ ದೇಹವನ್ನು ಮಸಣಕ್ಕೆ ಸಾಗಿಸುವ ಮುನ್ನ ಆ ವಂದನೀಯ ಒಂದನೇ ಮಾಸ್ಟ್ರ ಅಂತಿಮ ದರುಷನ ಪಡೆಯಲು ನಾನೂ ಹೋದೆ. ಅಂತಿಮ ನಮನ ಮಾಡಿದೆ. ಉತ್ತರ ಕ್ರಿಯೆಗೂ ಹೋದೆ. ವೈಕುಂಠ ಸಮಾರಾಧನೆಯ ಮಂತ್ರಾಕ್ಷತೆಯೊಂದಿಗೆ ಅವರ ಆಶೀರ್ವಾದವನ್ನೂ ಪಡೆದೆ.
ಆ ಮೇಸ್ಟ್ರು ಗಾಂಧೀಜಿಯ ಪರಮ ಶಿಷ್ಯ. ರಜಾ ದಿನಗಳಲ್ಲಿ ತಕಲಿ ಹಿಡಿದು ಮನೆಯಲ್ಲಿ ನೂಲುತ್ತಿದ್ದರು. ಈ ನೂಲಿನಿಂದ ಯಜ್ಞೋಪವೀತ ತಯಾರಿಸಿ ಅಗತ್ಯವುಳ್ಳವರಿಗೆ ನೀಡುತ್ತಿದ್ದರು. ಅತೀ ಸರಳರಾಗಿ ಬದುಕಿದ ಅವರು ಹತ್ತರೊಂದಿಗಿನ ಹನ್ನೊಂದು ಆಗಿರದೆ ತನ್ನದೇ ಆದ ವೈಶಿಷ್ಠ್ಯತೆಗಳೊಂದಿಗೆ, ತನ್ನ ವಿದ್ಯಾರ್ಥಿಗಳಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿದ ಆ ಕರ್ಮಯೋಗಿ ಮೇಸ್ಟ್ರು ಶಿಕ್ಷಣ ಸಮಾಜಕ್ಕೆ ಅತ್ಯಂತ ಮೇಲ್ಪಂಕ್ತಿಯವರಾದರು ಎಂಬುದೇ ಅವರ ಹೆಗ್ಗಳಿಕೆ.

More from the blog

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....

ಬಂಟ್ವಾಳದ ಕುದ್ಕೋಳಿ: ಹೊತ್ತಿ ಉರಿದ ಡಸ್ಟರ್ ಕಾರು

ಬಂಟ್ವಾಳ: ಬಂಟ್ವಾಳ- ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಡಸ್ಟರ್ ಕಾರೊಂದು ಏಕಾಏಕಿ ಬೆಂಕಿ ಹತ್ತಿ ಉರಿದ ಘಟನೆ ಇಂದು ಬೆಳಗ್ಗೆ (ಸೋಮವಾರ) ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಬಳಿಕ ಸ್ಥಳೀಯರು ಹಾಗೂ ಬಂಟ್ವಾಳ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...