Tuesday, April 9, 2024

ದೇಶದೊಳಗಿನ ಸೈನಿಕರೇ ಗೃಹರಕ್ಷಕರು

ಗೃಹರಕ್ಷಕರು ಎಂದರೆ ಯಾರು?
ಗೃಹರಕ್ಷಕದಳ ಎನ್ನುವುದು ಸರ್ಕಾರದ ಅಧೀನದಲ್ಲಿರುವ ಸ್ವತಂತ್ರವಾದ, ಶಿಸ್ತುಬದ್ಧವಾದ ಸಮವಸ್ತ್ರದಾರಿ ಸ್ವಯಂ ಸೇವಕರನ್ನು ಒಳಗೊಂಡ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮಾಜಕ್ಕೆ ತುರ್ತು ಅಗತ್ಯದ ಸಂದರ್ಭಗಳಲ್ಲಿ ಸೇವೆ ಸಲ್ಲಿಸುವ ಸಂಸ್ಥೆಯಾಗಿರುತ್ತದೆ. ನಿಷ್ಕಾಮಸೇವೆ ಎಂಬ ಮೂಲಮಂತ್ರದೊಂದಿಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ರಕ್ಷಣೆ ನೀಡುವ ದ್ಯೇಯವನ್ನು ಹೊಂದಿರುತ್ತದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರನ ’ನಾಜಿ’ ಸೈನ್ಯ ಪಡೆಯನ್ನು ಹಿಮ್ಮೆಟ್ಟಿಸಲು ಪೋಲಿಸ್ ಮತ್ತು ಮಿಲಿಟರಿ ಪಡೆಗೆ ಪರ್ಯಾಯವಾಗಿ ದೇಶದ ಜನರೇ ಪ್ರಾಣ ತ್ಯಾಗ ಮಾಡಿ ದೇಶವನ್ನು ರಕ್ಷಿಸಲು ಉದ್ಭವಿಸಿದ ನಾಗರೀಕ ಪಡೆ ಮೊದಲು ಐಆಗಿ ಅಂದರೆ ಐಔಅಂಐ ಆಇಈಇಓಅಇ ಗಿಔಐUಓಖಿಇಇಖ (ಸ್ಥಳೀಯ ರಕ್ಷಣಾ ಕಾರ್ಯಕರ್ತ) ಎಂದು ಕರೆಯಲಾಗುತ್ತಿತ್ತು. ೧೯೪೬ರಲ್ಲಿ ಭಾರತದ ಬಾಂಬೆ ರಾಜ್ಯದಲ್ಲಿ ಗೃಹ ರಕ್ಷಕ ದಳದ ಮೂಲ ಅಸ್ಥಿತ್ವಕ್ಕೆ ಬಂದಿತು. ನೌಕಾದಳ, ವಾಯುದಳ, ಭೂ ಸೇವಾದಳದ ಜೊತೆಗೆ ಜನರಿಗೆ ಮತ್ತು ದೇಶಕ್ಕೆ ತುರ್ತು ಸಂದರ್ಭಗಳಲ್ಲಿ ರಕ್ಷಣೆ ನೀಡುವ ಉದ್ದೇಶದಿಂದ ಪೌರ ರಕ್ಷಣೆ ಮತ್ತು ಗೃಹರಕ್ಷಕದಳ ಎಂಬುದಾಗಿ ಡಿಸೆಂಬರ್ ೬ರಂದು ಅಸ್ಥಿತ್ವಕ್ಕೆ ಬಂದಿತು. ದಿವಂಗತ ಮೋರಾರ್ಜಿ ದೇಸಾಯಿಯವರು ಪ್ರಧಾನಿಯಾಗಿದ್ದ ಕಾಲದಲ್ಲಿ ಗೃಹರಕ್ಷಕದಳದ ಕಾಯಿದೆ ಮತ್ತು ಕಾನೂನುಗಳನ್ನು ಗೃಹ ಸಚಿವಾಲಯದ ಅಡಿಯಲ್ಲಿ ತರಲಾಯಿತು. ಸಾಮಾನ್ಯ ಜನರಿಗೆ ಮತೀಯ ಗಲಭೆ ಹಿಂಸಾವಾದಗಳ ಸಂದರ್ಭದಲ್ಲಿ ರಕ್ಷಣೆ ಒದಗಿಸಲು ಈ ರೀತಿಯ ಸ್ವಯಂ ಸೇವಕರ ಪಡೆ ನಿಯೋಜಿಸಲಾಗಿತ್ತು. ಸಾಮಾನ್ಯ ದಿರಿಸಿನಲ್ಲಿ ಪೋಲಿಸ್‌ರಿಗೆ ಸಹಾಯ ನೀಡುವ ಸದುದ್ದೇಶದಿಂದ ಈ ಅಂಗಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಬಾಂಬೆ ರಾಜ್ಯದಿಂದ ಆರಂಭವಾದ ಈ ಸ್ವಯಂ ಸೇವಕರ ಪಡೆಯನ್ನು ಬೇರೆ ರಾಜ್ಯಗಳಲ್ಲೂ ಆರಂಭಿಸಲಾಯಿತು. ಕ್ರಮೇಣ ೧೯೬೨ರಲ್ಲಿ ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಈ ಸ್ವಯಂ ಸೇವಕರ ಸೇವೆಯನ್ನು ರಕ್ಷಣಾ ಕಾರ್ಯಕ್ಕೆ ಬಳಸುವ ಉದ್ದೇಶದಿಂದ ಕೇಂದ್ರ ಸರಕಾರ ಎಲ್ಲಾ ರಾಜ್ಯ ಸರಕಾರ ಮತ್ತು ಕೇಂದ್ರಾಡಳಿತ ರಾಜ್ಯಗಳ ಸ್ವಯಂಸೇವಕರ ತಂಡಗಳನ್ನು ಗೃಹರಕ್ಷಕ ದಳ ಎಂಬುದಾಗಿ ಖಾಕಿ ಸಮವಸ್ತ್ರ ನೀಡಿ ಮನ್ನಣೆಯನ್ನು ನೀಡಿತು.

ಗೃಹರಕ್ಷಕದಳದ ಪ್ರಾಥಮಿಕ ದ್ಯೇಯಗಳು
ಗೃಹರಕ್ಷಕದಳ ಎನ್ನುವುದು ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೋಲಿಸ್ ಇಲಾಖೆಗೆ ಪೂರಕ ಪಡೆಯಾಗಿ ಕೆಲಸ ಮಾಡುತ್ತದೆ. ಪ್ರಾಕೃತಿಕ ಮತ್ತು ಮಾನವ ನಿರ್ಮಿತ ಎಲ್ಲಾ ಬಗೆಯ ವಿಪತ್ತುಗಳ ವಿಷಮ ಪರಿಸ್ಥಿತಿಗಳಲ್ಲಿ ಜೀವ ಮತ್ತು ಆಸ್ತಿ ಸಂರಕ್ಷಣೆ ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಸಮುದಾಯಕ್ಕೆ ಅಗತ್ಯ ನೆರವು ನೀಡುತ್ತದೆ. ಅದೇ ರೀತಿ ಬೆಂಕಿ ಅವಗಡ, ವೈಮಾನಿಕ ದಾಳಿ, ಸುನಾಮಿ, ಪ್ರಳಯ, ಭೂಕಂಪ ಅಥವಾ ಇನ್ನಾವುದೇ ಸಾಂಕ್ರಾಮಿಕ ರೋಗಗಳು ಉಲ್ಬಣವಾದಾಗ, ಸಾಮಾಜಿಕ ಶಾಂತಿ, ಸುವ್ಯವಸ್ಥೆ ಮತ್ತು ನೆಮ್ಮದಿಯನ್ನು ಪುನರ್‌ಸ್ಥಾಪಿಸಲು ಪೋಲಿಸ್ ಪಡೆಗೆ ಮತ್ತು ಸರಕಾರಕ್ಕೆ ಪೂರಕವಾಗಿ ಕೆಲಸ ನಿರ್ವಹಿಸಿರುತ್ತದೆ. ದೇಶದ್ಯಾದ್ಯಂತ ಸುಮಾರು ೬ ಲಕ್ಷ ಗೃಹರಕ್ಷಕ ಸಿಬ್ಬಂದಿಗಳಿದ್ದು ದೇಶದ ಎಲ್ಲಾ ರಾಜ್ಯಗಳಲ್ಲಿ (ಕೇರಳ ಮತ್ತು ಅರುಣಾಚಲ ಪ್ರದೇಶ ಹೊರತು ಪಡಿಸಿ) ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತವೆ. ಗೃಹರಕ್ಷಕರಲ್ಲಿ ನಗರ ಮತ್ತು ಗ್ರಾಮೀಣ ಗೃಹರಕ್ಷಕ ಪಡೆ ಎಂಬುದಾಗಿ ಎರಡು ಬಗೆಗಳಿವೆ. ಅದಲ್ಲದೆ ಗಡಿ ರಕ್ಷಣ ಗೃಹರಕ್ಷಕ ಪಡೆ (Border wing) ಎಂಬುದಾಗಿ BSF ಅಂದರೆ ಗಡಿ ರಕ್ಷಣ ಪಡೆಗೆ ಪೂರಕವಾಗಿ ಕೆಲಸ ಮಾಡುವ ಪಡೆಯನ್ನು ಹೊಂದಿದೆ. ಈ ಗಡಿರಕ್ಷಣಾ ಗೃಹರಕ್ಷಕ ಪಡೆ ಗಡಿ ಪ್ರದೇಶಗಳು ಹೆಚ್ಚಿರುವ ಪಂಜಾಬ್, ರಾಜಸ್ಥಾನ, ಗುಜರಾತ್, ಅಸ್ಸಾಮ್, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ತ್ರೀಪುರಗಳಲ್ಲಿ ಹೆಚ್ಚು ಕ್ರಿಯಾತ್ಮಕವಾಗಿದೆ. ಈ ಪಡೆಯು ಹೆಚ್ಚು ತರಬೇತಿ ಪಡೆದ ಮತ್ತು ಶಸ್ತ್ರ ಪ್ರಯೋಗದಲ್ಲಿ ಹೆಚ್ಚಿನ ಪರಿಣಿತಿ ಪಡೆದ ಗೃಹರಕ್ಷಕರನ್ನು ಹೊಂದಿದ್ದು ಗಡಿ ರಕ್ಷಣೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡುತ್ತದೆ.

ಯಾರು ಗೃಹರಕ್ಷಕ ದಳವನ್ನು ಸೇರಬಹುದು?
ಗೃಹರಕ್ಷಕ ದಳಕ್ಕೆ ಸೇರಲು ಮುಖ್ಯವಾಗಿ ಸಮಾಜದ ಸೇವೆ ಮಾಡಬೇಕು ಎನ್ನುವ ತುಡಿತ ಇರಬೇಕು. ಸ್ವಯಂ ಸೇವಾ ಮನೋಭಾವವುಳ್ಳ ಸಮಾಜದ ಎಲ್ಲಾ ಸ್ತರದ ವ್ಯಕ್ತಿಗಳು ಈ ಸಂಂಸ್ಥೆಯನ್ನು ಸೇರಬಹುದು. ದೈಹಿಕವಾಗಿ ಆರೋಗ್ಯವಾಗಿದ್ದು ಸಮಾಜದ ಉನ್ನತಿಗೆ ಯಾವುದೇ ಲಾಭ ನಷ್ಟದ ಲೆಕ್ಕಾಚಾರವಿಲ್ಲದೆ ’ನಿಷ್ಕಾಮ ಸೇವೆ’ ಸಲ್ಲಿಸುವ ಮನೋಧರ್ಮವನ್ನು ಹೊಂದಿರಬೇಕು. ಕನಿಷ್ಠ ವಿದ್ಯಾರ್ಹನೆ 10ನೇ ತರಗತಿ (ಯಾವುದೇ ಭಾಷಾ ಮಾಧ್ಯಮದಲ್ಲಿ) ಮತ್ತು ವಯೋಮಿತಿ 19 ರಿಂದ 50 ವರ್ಷದ ಒಳಗಾಗಿರಬೇಕು. ಸಾಮಾನ್ಯವಾಗಿ ಒಮ್ಮೆ ದಾಖಲಾತಿ ಮಾಡಿದ ಬಳಿಕ 3 ವರ್ಷಗಳಿಗೊಮ್ಮೆ ಪುನಃ ಮರು ದಾಖಲಾತಿ ಮಾಡಿಕೊಳ್ಳಬೇಕು. ಗೃಹರಕ್ಷಕರ ನಿವೃತ್ತಿ ವಯಸ್ಸು 60 ಆಗಿರುತ್ತದೆ. ಸರ್ಕಾರವೇ ನಿಗದಿಪಡಿಸಿದ ಅರ್ಜಿ ನಮೂನೆಗಳು ಗೃಹರಕ್ಷಕದಳದ ಜಿಲ್ಲಾ ಕಛೇರಿಗಳಲ್ಲಿ ಉಚಿತವಾಗಿ ದೊರಕುತ್ತದೆ. ಅದನ್ನು ಭರ್ತಿ ಮಾಡಿ ನಿಗದಿತ ದಿನಾಂಕದಲ್ಲಿ ಅರ್ಜಿಯ ಜೊತೆಗೆ ವಿದ್ಯಾರ್ಹತೆ, ವಯಸ್ಸಿನ ದಾಖಲೆ ಮತ್ತು ವಾಸ ಸ್ಥಳಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳ ನಕಲು ಪ್ರತಿ ಲಗತ್ತಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ವ್ಯಕ್ತಿಯ ಮೇಲೆ ಯಾವುದೇ ರೀತಿಯ ಪೋಲಿಸ್ ದೂರು ಅಥವಾ ಕ್ತ್ರಿಮಿನಲ್ ದಾಖಲೆ ಇಲ್ಲವೆಂದು ಸಾಬೀತಾದ ಬಳಿಕ ಅಭ್ಯರ್ಥಿಯ ಅಯ್ಕೆಗೆ ಸಂದರ್ಶನ ನಡೆಯುತ್ತದೆ. ಈ ಆಯ್ಕೆ ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠರು, ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಗೃಹರಕ್ಷಕ ಸಮಾದೇಷ್ಠರು ಇರುತ್ತಾರೆ. ಈ ರೀತಿ ಆಯ್ಕೆಯಾದ ವ್ಯಕ್ತಿಗಳಿಗೆ ಆರು ತಿಂಗಳ ಕಾಲ ಮೂಲ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಶಿಬಿರದಲ್ಲಿ ಕರ್ತವ್ಯಗಳನ್ನು ಶಿಸ್ತುಬದ್ಧವಾಗಿ ಪರಿಣಾಮಕಾರಿಯಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಸದಸ್ಯರುಗಳಿಗೆ ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಅಗ್ನಿಶಮನ, ಸಂಚಾರ ನಿಯಂತ್ರಣ, ನಿಶಸ್ತ್ರ ಹಾಗೂ ಶಸ್ತ್ರ ತರಬೇತಿ ಮೊದಲಾದ ವಿಷಯಗಳಲ್ಲಿ ಜಿಲ್ಲಾ ಮಟ್ಟದಲ್ಲೂ ಹಾಗೂ ಉನ್ನತ ತರಬೇತಿಗಳನ್ನು ಬೆಂಗಳೂರಿನ ಗೃಹರಕ್ಷ ಮತ್ತು ಪೌರ ತರಬೇತಿ ರಕ್ಷಣಾ ಅಕಾಡಮಿಯಲ್ಲಿ ನೀಡಿ ಸಜ್ಜುಗೊಳಿಸುತ್ತದೆ. ಸಾಮಾನ್ಯವಾಗಿ ಗೃಹರಕ್ಷಕರಾಗಿ ಸಮಾಜದ ಎಲ್ಲಾ ಸ್ತರದ ಅಂದರೆ ವಿದ್ಯಾರ್ಥಿ, ಕೃಷಿಕರು, ವೈದ್ಯರು, ಅಭಿಯಂತರರು, ವಕೀಲರು, ಶಿಕ್ಷಕರು ಕೂಲಿಕಾರ್ಮಿಕರು ಹೀಗೆ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಳ್ಳಲಾಗುತ್ತದೆ. ಒಟ್ಟಿನಲ್ಲಿ ಗೃಹರಕ್ಷಕರು ಅಂದರೆ ನಾವು, ನೀವು ಮತ್ತು ನಮ್ಮ ನಿಮ್ಮಂತಹ ಸಾಮಾನ್ಯ ಸ್ತ್ರೀ ಪುರುಷರು ಆಗಿದ್ದು, ನಮ್ಮ ದಿನನಿತ್ಯದ ಕೆಲಸದ ವೇಳೆಯಿಂದಾಚೆಗೆ ವಿಶಿಷ್ಠ ತರಬೇತಿ ಪಡೆಯಲು ಮುಂದಾಗುದಲ್ಲದೇ ಅವಶ್ಯಕ ಮತ್ತು ತುರ್ತು ಅಗತ್ಯದ ಸಂದರ್ಭಗಳಲ್ಲಿ ತಮ್ಮ ಸೇವೆಯನ್ನು ಜಿಲ್ಲೆಗೆ, ರಾಜ್ಯಕ್ಕೆ, ದೇಶಕ್ಕೆ ಮುಡಿಪಾಗಿರುವ ನಿಸ್ವಾರ್ಥ ಸ್ವಯಂ ಸೇವಕರು ಎಂದರೂ ತಪ್ಪಲ್ಲ. ಸಮಾಜದ ಎಲ್ಲಾ ಜಾತಿಯ, ಧರ್ಮದ, ಸ್ತರದ ಯಾವುದೇ ಮೇಲು ಕೀಳು ಎಂಬ ಬೇಧವಿಲ್ಲದೇ ಪ್ರತಿಯೊಬ್ಬರು ಒಟ್ಟಾಗಿ ಭಾಗವಹಿಸುವ ಸಂಸ್ಥೆಯಾಗಿರುತ್ತದೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರೂ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಮುಕ್ತ ಅವಕಾಶವಿರುತ್ತದೆ.
ಗೃಹರಕ್ಷಕರ ಕರ್ತವ್ಯಗಳು ಏನು?
1. ದೇಶದ ಆಂತರಿಕ ಭದ್ರತೆಯನ್ನು ಕಾಪಾಡಲು ಪೋಲಿಸ್ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುವುದು.
2. ನೈಸರ್ಗಿಕ ವಿಕೋಪಗಳಾದ ನೆರೆಹಾವಳಿ, ಭೂಕಂಪ, ಸೈಕ್ಲೋನ್, ಸುನಾಮಿ, ಭೂಕುಸಿತ ಇತ್ಯಾದಿಗಳ ಸಂಬಂಧದಲ್ಲಿ ರಕ್ಷಣಾ ಕಾರ್ಯ ಮಾಡುವುದು.
3. ಯುದ್ಧದ ಅಥವಾ ತುರ್ತು ಪರಿಸ್ಥಿತಿಯ ಸಂದಂರ್ಭಗಳಲ್ಲಿ ವೈಮಾನಿಕ ದಾಳಿಗಳ ಸಂದರ್ಭಗಳಲ್ಲಿ ಸಮುದಾಯವನ್ನು ಎಚ್ಚರಿಸುವುದು ಮತ್ತು ರಕ್ಷಿಸುವುದು.
4. ಮಾನವ ನಿರ್ಮಿತ ಕೃತಕ ವಿಕೋಪಗಳಾದ ಕಟ್ಟಡ ಕುಸಿತ, ಅನಿಲ ದುರಂತ, ಗ್ಯಾಸ್‌ಸ್ಪೋಟ ಅಥವಾ ಇನ್ಯಾವುದೇ ವಿಷಮ ಪರಿಸ್ಥಿತಿಗಳಲ್ಲಿ ಜನರ ಆಸ್ತಿ ಪಾಸ್ತಿ ಪ್ರಾಣ ರಕ್ಷಣೆಯ ಕೆಲಸ ನಿರ್ವಹಿಸುವುದು.
5. ಜಾತ್ರೆ, ಉತ್ಸವ, ರಾಷ್ಟ್ರೀಯ ಹಬ್ಬಗಳ ಆಚರಣೆ, ಮುಷ್ಕರ ಪ್ರತಿಭಟನೆ, ಸಾರ್ವಜನಿಕ ಸಭೆ ಸಮಾರಂಭಗಳ ಸಮಯದಲ್ಲಿ ಬಂದೋಬಸ್ತ್ ಕರ್ತವ್ಯಗಳಿಗೆ ಕೆಲಸಮಾಡುವುದು.
6. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆ, ಸಾರ್ವಜನಿಕ ಕಟ್ಟಡಗಳ ಪಹರೆ ಕರ್ತವ್ಯಗಳಿಗೂ ಗೃಹರಕ್ಷಕರನ್ನು ಬಳಸಿಕೊಳ್ಳಲಾಗುವುದು.
7. ಪೋಲಿಸ್ ಆಂತರಿಕ ಭದ್ರತೆ, ರಾಜ್ಯಗುಪ್ತಚಾರ ವಾರ್ತೆ, ಕಾರಗೃಹ, ಭಾರತೀಯ ಆಹಾರ ನಿಗಮ, ಆಕಾಶವಾಣಿ, ಸಾರಿಗೆ, ಅಬಕಾರಿ, ಪ್ರವಾಸೋದ್ಯಮ, ಸರಕಾತಿ ಅಸ್ಪತ್ರೆಗಳು, ಪ್ರಾಚ್ಯ ವಸ್ತು ಸಂಗ್ರಹಾಲಯ, ಗಣಿ ಮತ್ತು ಭೂ ವಿಜ್ಞಾನ ಇತ್ಯಾದಿಗಳಲ್ಲಿ ಪಹರೆ ಕರ್ತವ್ಯ ಮತ್ತು ಸಾಮಾಜಿಕ ಸೊತ್ತು ರಕ್ಷಣಾ ಕಾರ್ಯಗಳಿಗೆ ಗೃಹರಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ.
8. ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಗಳಲ್ಲಿರುವ ಗೃಹರಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ಭೂಕುಸಿತ, ಕಟ್ಟಡ ಕುಸಿತ, ಅಗ್ನಿ ಅಕಸ್ಮಿಕ ವಿಕೋಪಗಳಲ್ಲಿ ಸಿಲುಕಿದವರ ಪ್ರಾಣ ರಕ್ಷಣೆ, ಗಾಯಾಳುಗಳ, ಮೃತದೇಹಗಳ ಶೋಧನಾಕಾರ್ಯ ಮತ್ತು ಸ್ಥಳಾಂತರಕ್ಕೆ ಗೃಹರಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ನೀರು, ವಿದ್ಯುತ್ ಸರಬರಾಜು ಸಂರಕ್ಷಣೆ, ಪರಿಹಾರ ಮೊದಲಾದ ಕ್ಲಿಷ್ಟಕರ ಕರ್ತವ್ಯ ನಿರ್ವಹಣೆಗಾಗಿ ಗೃಹರಕ್ಷಕರ ಸೇವೆಯನ್ನು ಬಳಸಲಾಗುತ್ತದೆ.
9. ಚುನಾವಣೆ ಸಂದರ್ಭಗಳಲ್ಲಿ ಜಿಲ್ಲಾಡಳಿತಕ್ಕೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಪಡೆಯ ಜೊತೆಗೆ ಗೃಹರಕ್ಷಕರನ್ನು ಬಳಸಿಕೊಳ್ಳಲಾಗುತ್ತದೆ.
10. ಗೃಹರಕ್ಷಕ ದಳದ ಗಡಿರಕ್ಷಣಾ ಪಂಗಡ ದೇಶದ ಗಡಿಯನ್ನು ಕಾಯುವಲ್ಲಿ ಗಡಿರಕ್ಷಣಾ ಪಡೆ (BSF) ಗೆ ಸಹಾಯ ನೀಡುತ್ತದೆ.
11. ಅಬಕಾರಿ ಇಲಾಖೆಗೆ ಕಳ್ಳ ಬಟ್ಟಿಸಾರಾಯಿ ಮತ್ತು ಅನಧಿಕೃತ ಮದ್ಯ ಮಾರಾಟದ ನಿಯಂತ್ರಣಕ್ಕಾಗಿ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತದೆ.
ಕೊನೆಮಾತು
ಗೃಹರಕ್ಷಕ ದಳ ಎನ್ನುವುದು ಸರ್ಕಾರಿ ಪ್ರಾಯೋಜಿತ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಸಮಾಜದ ಎಲ್ಲಾ ಧರ್ಮದ ಜಾತಿಯ ಮತ್ತು ವರ್ಗದ ಜನರಿಗೆ ಮುಕ್ತವಾಗಿ ತೆರೆದಿರುತ್ತದೆ. ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ತುಡಿತ ಇರುವ ವ್ಯಕ್ತಿಗಳು, ಯಾವುದೇ ಫಲಾಪೇಕ್ಷೆ ಇಲ್ಲದೆ ಸಮುದಾಯದ ಸೇವೆ ಮಾಡುವ ಆಶಯ ಹೊಂದಿದ್ದಲ್ಲಿ ಗೃಹರಕ್ಷಕದಳ ಒಂದು ಒಳ್ಳೆಯ ವೇದಿಕೆ ಎಂದರೂ ತಪ್ಪಲ್ಲ. ನಿಷ್ಕಾಮ ಸೇವೆ ಎಂಬ ಉದಾತ್ತ ದ್ಯೇಯವನ್ನು ಇಟ್ಟುಕೊಂಡು ಸಮಾಜದ ಶಾಂತಿ, ನೆಮ್ಮದಿ, ಸ್ವಾಸ್ಥ್ಯ ವೃದ್ಧಿಸುವ ಏಕೈಕ ಸದುದ್ದೇಶವನ್ನು ಹೊಂದಿರುವ ಗೃಹರಕ್ಷಕ ದಳ ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಗೃಹ ರಕ್ಷಕರು ಕೆಲಸ ಮಾಡುತ್ತಿದ್ದರೂ ಹೆಚ್ಚು ಹೆಚ್ಚು ಜನರು ಸೇರಲಿ ಎನ್ನುವ ಸದುದ್ದೇಶದಿಂದ ಮತ್ತು ಜನರ ಸೇವೆಯನ್ನು ಗುರುತಿಸುವ ಸಲುವಾಗಿ ಸರಕಾರ ದಿನವೊಂದಕ್ಕೆ ರೂ. 380/- (ಗ್ರಾಮೀಣ ಪ್ರದೇಶಗಳಲ್ಲಿ) ರೂ.500/- (ನಗರ ಪ್ರದೇಶಗಳಲ್ಲಿ ಬೆಂಗಳೂರು) ಗೌರವ ಧನ ನೀಡಿ ಪ್ರೋತ್ಸಾಹಿಸುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ 750/- ರೂ. ಭತ್ಯೆ ನೀಡಲಾಗುತ್ತದೆ. ಇದು ದಿನಭತ್ಯೆಯಾಗಿರದೆ ಗೌರವ ಧನವಾಗಿದ್ದು, ಜನರ ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವವನ್ನು ಗುರುತಿಸುವ ನಿಟ್ಟಿನಲ್ಲಿ ನೀಡುವ ಪ್ರೋತ್ಸಾಹ ಧನ ಎಂದರೂ ತಪ್ಪಲ್ಲ. ಒಟ್ಟಿನಲ್ಲಿ ಒಂದು ದೇಶದ ಆರ್ಥಿಕ ಸಾಮಾಜಿಕ, ನೈತಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಮತ್ತು ಭದ್ರತೆಗೆ ಹಾಗೂ ದೇಶದ ಸರ್ವತೋಮುಖ ಬೆಳವಣಿಗೆಗೆ ಗೃಹರಕ್ಷಕ ದಳ ತನ್ನದೇ ಆದ ಕಿರುಕಾಣಿಕೆ ನೀಡಿದೆ ಮತ್ತು ನೀಡುತ್ತಿದೆ ಎಂದರೂ ಅತಿಶಯೋಕ್ತಿಯಲ್ಲ. ಡಿಸೆಂಬರ್ 6 ರ ಈ ಗೃಹರಕ್ಷಕರ ದಿನದಂದು ಎಲ್ಲಾ ನಿಸ್ವಾರ್ಥಿ ಮತ್ತು ನಿಷ್ಕಾಮ ಸೇವೆಗೈಯುವ ಗೃಹರಕ್ಷಕ ಬಂಧುಗಳಿಗೆ ಒಂದು ಪುಟ್ಟ ಧನ್ಯವಾದ ಸಮರ್ಪಿಸೋಣ.

ಡಾ| ಮುರಲೀ ಮೋಹನ್ ಚೂಂತಾರು
ಸಮಾದೇಷ್ಠರು, ಜಿಲ್ಲಾ ಗೃಹರಕ್ಷಕ ದಳ ಮತ್ತು
ಮುಖ್ಯಪಾಲಕರು ಪೌರರಕ್ಷಣಾ ಪಡೆ
ದ.ಕ. ಜಿಲ್ಲೆ, ಮಂಗಳೂರು

More from the blog

ಮನೆಯೊಳಗೆ ‌ನುಗ್ಗಿ ವ್ಯಕ್ತಿಗೆ ಚೂರಿ ಇರಿತ : ಆರೋಪಿ ಪರಾರಿ

ಬಂಟ್ವಾಳ: ಮನೆಯೊಳಗೆ ‌ನುಗ್ಗಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪುದು ಎಂಬಲ್ಲಿ ನಡೆದಿದೆ. ಪುದು ಗ್ರಾಮದ 10 ನೇ ಮೈಲಿಕಲ್ಲು ನಿವಾಸಿ...

ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಪದ್ಮನಾಭ ಸೇವಂತ ಅವರದು, ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಶಂಕೆ: ಪ್ರಕಾಶ್ ಶೆಟ್ಟಿ ತನಿಖೆಗೆ ಒತ್ತಾಯ

ಬಂಟ್ವಾಳ: ದ.ಕ.ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಪದ್ಮನಾಭ‌ ಸೇವಂತ ಎಂಬವರ ಸಾವಿನ ಸುತ್ತ ಅನುಮಾನಗಳು ವ್ಯಕ್ಯವಾಗಿದ್ದು, ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಕಂಡು ಬಂದರೂ ಇದನ್ನು ವಿಮರ್ಶೆ ಮಾಡಿದರೆ ಇದೊಂದು ಕೊಲೆ...

ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸಾವು ಸ್ಕೂಟರ್ ನಲ್ಲಿದ್ದ ಯುವತಿ ಗಂಭೀರ

ಬೆಳ್ತಂಗಡಿ : ದ್ವಿಚಕ್ರ ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ನಗರದ ಸಂತೆಕಟ್ಟೆ ಬಸ್ ನಿಲ್ದಾಣದ ಮುಂಭಾಗದಲ್ಲಿ...

ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿ: ಕಾರಿನಲ್ಲಿದ್ದವರು ಗಂಭೀರ

ವಿಟ್ಲ: ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರಿಯಲ್ಲಿ ಗುರುವಾರ ರಾತ್ರಿ ಮರ ಸಾಗಾಟ ಲಾರಿಗೆ ಕಾರು ಡಿಕ್ಕಿಯಾಗಿದೆ. ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿಯಾದ ರಬ್ಬಸಕ್ಕೆ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದವರು...