Wednesday, April 17, 2024

ಕನಸಿನ ಕೊನೆ

ಬೇಗುದಿಯ ಬೆಂಗೊಡದ
ಕರಿಕಾಯದೀ ಕಥೆಗೆ
ನೂರೆಂಟು ಕನಸು…
ಅವಳ ಮುಡಿಗೆ ಚಿನ್ನದ ಹೂ
ಕೊರಳಿಗೆ ಮುತ್ತಿನ ಹಾರ
ಮೈಗೆ ಅಂದದ ರೇಷ್ಮೆ ಸೀರೆ
ಬತ್ತಿದೆದೆಗೊಂದು ಚೆಂದದ ರವಿಕೆ!

ಮಕ್ಕಳಾಟಕೆ ಬುಗುರಿ ಪೀಪಿ
ತೂಗುಕುದುರೆ ಓಡಲೊಂದು
ಕಬ್ಬಿಣದ ಗಾಲಿ
ಪಡೆವಾತುರಕೋ ಒಡಲ ತುಂಬ
ಆಸೆಗಳ ನೂರು ಕಟ್ಟು!
ಅಂದವಾದ ಈ ಮೈಕಟ್ಟಿ
ನೊಡೆಯನ ತುಡಿತಕೆ
ಯಾವಾಗಲೂ ಚಿಗುರು!

ಧಣಿಯ ದಪ್ಪ ಚರ್ಮದ
ಮೇಲೂ ಅದೆಂಥದೋ ಮಮತೆ
ಬಿಡಿಗಾಸು ನೀಡದವನ
ಅಡಿದಾಸನಾಗಿ ಹರೆಯ
ಸವೆಸುವ ಅಪೂರ್ವ ಸಂತಸ
ಅವಳಿತ್ತ ಬೇಡಿಕೆಯ
ಅಕ್ಷಯಾಂಬರಕೆ ಬೆನ್ನು ತಿರುಗಿಸಿ
ದುಡಿಯುವ ನಗ್ನ ಸತ್ಯ!

ಸಂಜೆ ಮನೆಯ ದಾರಿಯಲಿ
ಕಸುವು ಕಳೆದುಕೊಂಡ ದೇಹದ
ಜೊತೆಗೆ ಅದೇ ಖಾಲಿ ಕೈ
ಜೋಮುಗೊಂಡ ಕಾಲಿಗೆ ಬುದ್ಧಿ
ಹೇಳಿ ಹೊಡೆಯುತ್ತಾನೆ ಜೋಲಿ
ಓಣಿಯ ತುಂಬಾ ಕೊಳೆತು
ಸೀತು ಹೋದ ಚರ್ಮದ ದುರ್ನಾತ
ತಿಪ್ಪೆಗುಂಡಿಯ ಸಂಗ ಮಾಡಿದ
ನೀರು ನಿಂತು ಮಲೆತ ಕೆಸರ ಕುಂಡ!

ಎಲುಬೆಣಿಸುವ ತನ್ನ ಪ್ರೀತಿ ನಾಯಿಯ
ಮೈತುಂಬಾ ಕಜ್ಜಿ ಗಾಯ ಕೀವು
ಅರಿಷಿಣ ಸವರಲು ಬಿಡದ ಅದರ
ರೋಷಕೆ ಇವನು ತಬ್ಬಿಬ್ಬು
ಮಕ್ಕಳ ರೆಪ್ಪೆ ತುಂಬಾ ಪಿಚ್ಚು
ಸೋರುತಿಹ ಕಟಬಾಯಿ ಜೊಲ್ಲು
ಗುಂಡು ಹಾಕಲು ಅಂಗಡಿಯವನ
ಜೊತೆ ಮಾಡಿದ ಗಿಲೀಟು ಠುಸ್!

ಝಗಮಗಿಸುವ ಈ ಕಾಲದಲೂ
ಮನೆ ಕತ್ತಲೆಯ ಕೂಪ
ಎಣ್ಣೆಯನ್ನು ಬಿಡದೆ ಬಾಟಲಿಯ
ಚಿಮಣಿಯನ್ನೂ ನುಂಗಿದ ಬೆಂಕಿ ಬತ್ತಿ
ಇಲ್ಲಗಳನೆಲ್ಲ ಎದೆಯ ಮೇಲೇ
ಹೇರಿಕೊಂಡು ನಡೆದವನ ಹಿಂದೆ
ಹೊರಟರು ಕೇರಿಯ ಜನ

ಅನ್ನುತ್ತಿದ್ದರು
ಏನೋ ಮಣಮಣ!
ಉಳಿದ ಅವಳೆದೆ ಮಾತ್ರ
ಈಗಲೂ ಭಣಭಣ!!

ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – ೫೮೭೩೦೧

More from the blog

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಮತದಾನ ಪ್ರಕ್ರಿಯೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಬಾರಿಯಂತೆ ಸೆಕ್ಟರ್‌ ಅಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಮನೆ-ಮನೆಗೆ ತೆರಳಿ ಮತದಾನ ಮಾಡಿಸುತ್ತಿದೆ. ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85...

ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ : ಬಜರಂಗದಳ, ವಿ.ಹಿಂ.ಪರಿಷತ್ ಕಲ್ಲಡ್ಕ ಪ್ರಖಂಡದಿಂದ ಖಂಡನೆ

ಬಂಟ್ವಾಳ: ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ನಡೆಸಿದ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ...

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...