Wednesday, April 10, 2024

ತುಷ್ಟೀಕರಣದ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ: ಉಪ ಮುಖ್ಯಮಂತ್ರಿ ಡಾ| ಅಶ್ವಥ್ ನಾರಾಯಣ್

ಬಂಟ್ವಾಳ: ತುಷ್ಟೀಕರಣದ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿಯಾಗಿದ್ದು, ಅಭಿವೃದ್ಧಿಯಲ್ಲೂ ಸೋತು ಮೂಲೆಗುಂಪಾಗಿದೆ, ಮುಂದಿನ ಚುನಾವಣೆಯಲ್ಲಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಪ್ರತೀ ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಕಾರ್ಯಕರ್ತರ ಗೆಲುವಿಗಾಗಿ ತಕ್ಷಣದಿಂದಲೇ ಶ್ರಮಿಸಬೇಕಾಗಿದೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಾ| ಅಶ್ವಥ್ ನಾರಾಯಣ್ ಹೇಳಿದರು.
ಬಿ.ಸಿ.ರೋಡಿನ ಸ್ಪರ್ಶ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಬಿಜೆಪಿ ವತಿಯಿ‌ಂದ ಆಯೋಜಿಸಲಾದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಅವರು ಭಾಗವಹಿಸಿ ಮಾತನಾಡಿದರು.


ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಅಭಿಮಾನ, ಉತ್ಸಾಹ ರಾಜ್ಯಕ್ಕೆ ಮಾದರಿಯಾಗಿದೆ.
ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ನಾಶ ಮಾಡುವುದು ಕಾಂಗ್ರೆಸ್ ನ ಕೆಲಸವಾಗಿದ್ದರೆ, ಸಂಸ್ಕೃತಿ ಧರ್ಮವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಬಿಜೆಪಿಯ ಕಾರ್ಯಕರ್ತರ ಶ್ರಮ‌ ಶ್ಲಾಘನೀಯ ಎಂದರು. ಬಿಜೆಪಿ ಪ್ರಜಾಪ್ರಭುತ್ವವಾದಿ ಪಕ್ಷವಾಗಿದ್ದು, ಕಾರ್ಯಕರ್ತರ ಅಭಿಪ್ರಾಯಗಳಿಗೂ ನಮ್ಮಲ್ಲಿ ಮನ್ನಣೆ ಇದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೈಮರೆಯದೆ ಪಕ್ಷದ ಹಿತಕ್ಕಾಗಿ ದುಡಿಯುವಂತೆ ತಿಳಿಸಿದರು.


ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಪಂಚಾಯತ್ ಚುನಾವಣೆ ಬಿಜೆಪಿ ಕಾರ್ಯಕರ್ತರ ಪಾಲಿಗೆ ಲೋಕಸಭಾ ಚುನಾವಣೆಯಷ್ಟೇ ಪ್ರಾಮುಖ್ಯತೆ ಪಡೆದಿದೆ. ಕಾಂಗ್ರೆಸ್ ತನ್ನ ವಿಚಾರ, ದಾರಿ, ಕಾರ್ಯಕರ್ತರನ್ನು ಮರೆತದ್ದರಿಂದ ಸೋಲಿನ ದಾರಿ ಹಿಡಿದಿದ್ದು, ಬಿಜೆಪಿ ತನ್ನ ಕಾರ್ಯಕರ್ತರ ಶ್ರಮದಿಂದ ಜಗತ್ತಿನ ಅತ್ಯಂತ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದರು.
ಗಾಂಧಿ ಹೆಸರಲ್ಲಿ ರಾಜಕಾರಣವನ್ನು ನಡೆಸಿದ ಕಾಂಗ್ರೇಸ್ ಗಾಂಧಿ ವಿಚಾರಧಾರೆಯನ್ನು ಮರೆತು, ಕೇವಲ ಗಾಂಧಿ ಟೋಪಿಯನ್ನು ಧರಿಸಿ ಜನರನ್ನು ಮಂಗಗಳನ್ನಾಗಿ ಮಾಡಿದರು. ಆದರೆ ಪ್ರಧಾನಿ‌ಮೋದಿ ಗಾಂಧೀಜಿಯರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಂತೆಯೇ ಮುನ್ನಡೆದಿದ್ದಾರೆ ಎಂದ ಅವರು, ವಿದ್ಯುತ್, ಅಡುಗೆ ಅನಿಲ, ಶೌಚಾಲಯ, ನರೇಗಾ ಯೋಜನೆಗಳಿಗೆ ಸರ್ಕಾರ ನೀಡಿದ ಅನುದಾನಗಳ ಬಗ್ಗೆ ಸ್ಮರಿಸಿಕೊಂಡರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಹಾಗೂ ನೈತಿಕ ಬೆಂಬಲದಿಂದ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರಧಾನಿಯಷ್ಟೇ ಪವರ್ ಫುಲ್ ಆಗಲಿದ್ದಾರೆ ಎಂದರು.


ಕುಮ್ಕಿ ಹಕ್ಕು ರೈತನಿಗೇ ಇರಲಿ, ಕರಾವಳಿಗೊಂದು ಮರಳು ನೀತಿ, ಬಡವರಿಗೆ ವಸತಿ, ಹಕ್ಕು ಪತ್ರದ ಸಮಸ್ಯೆಗಳ ನಿವಾರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಗೋಹತ್ಯೆ ನಿಷೇಧ ಕಾಯ್ದೆ ನಮ್ಮ ಸರ್ಕಾರ ತಂದೇ ತರುತ್ತದೆ. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ನಿಯಂತ್ರಣಕ್ಕೂ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ. ದೇಶ ವಿರೋಧಿ ಕೃತ್ಯಗಳನ್ನು ಬಿಜೆಪಿ ಸಹಿಸುವುದಿಲ್ಲ. ಮಂಗಳೂರಿನಲ್ಲಿ ಕಿಡಿಗೇಡಿಗಳು ಬರೆದ ದೇಶದ್ರೋಹಿ ಗೋಡೆಬರಹಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಂತೆ ಗೃಹಸಚಿವರು ಸೂಚನೆ ನೀಡಿದ್ದಾರೆ ಎಂದರು. ಪಂಚರತ್ನ, ಪಂಚಸೂತ್ರಗಳ ಅಡಿಯಲ್ಲಿ ಎಲ್ಲಾ ಪಂಚಾಯತ್ ಗಳನ್ನು ಗೆಲ್ಲಿಸಿಕೊಡುವಂತೆ ಅವರು ಮನವಿ ಮಾಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಬಿಜೆಪಿ ಎಲ್ಲಾ‌ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂಬುವುದಕ್ಕೆ ಇಂದಿನ ಗ್ರಾಮಸ್ವರಾಜ್ಯ ಸಮಾವೇಶವೂ ಸಾಕ್ಷಿಯಾಗಿದೆ ಎಂದರು. ಮುಂದಿನ ಗ್ರಾಮಪಂಚಾಯತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 225 ಗ್ರಾಮಪಂಚಾಯತ್ ಗಳಲ್ಲಿ ಬಿಜೆಪಿ ಪ್ರಭುತ್ವ ಸಾಧಿಸಬೇಕು ಎಂದವರು ಕರೆ ನೀಡಿದರು. ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಹೆಮ್ಮೆಪಡುವಂತ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದು, ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವೊಂದು ಯೋಜನೆಯನ್ನೂ ಜಾರಿಗೊಳಿಸಿಲ್ಲ. ಅಟಲ್ ಜೀ ಹಾಗೂ ನರೇಂದ್ರ ಮೋದಿಗೆ ಹೋಲಿಸಿದರೆ ಕಾಂಗ್ರೆಸ್ ಶೂನ್ಯ ಎಂದವರು ಹೇಳಿದರು.


ಬಿಜೆಪಿ ಈಗ ಗೆಲ್ಲುವ ಪಾರ್ಟಿ ಆಗಿದೆ, ಆದರೆ ಒಂದು ಕಾಲದಲ್ಲಿ ಪಕ್ಷದ ಸಂಘಟನೆಯನ್ನು ಮಾಡಿರುವ ಹಿರಿಯರ ಶ್ರಮವನ್ನೂ ನೆನಪಿಸಬೇಕು ಎಂದ ಅವರು, ಪಕ್ಷ ಗಟ್ಟಿಯಾಗಬೇಕಾದರೆ ಹೊಸಬರು ಬರಬೇಕು, ನಮ್ಮ ವಿಚಾರಧಾರೆಯನ್ನು ಒಪ್ಪಿ ಹೊಸ ನೀರು ಬಂದ ಕಾರಣದಿಂದಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಕೇಂದ್ರದಲ್ಲೂ ಶಕ್ತಿಯುತವಾಗಿದೆ. ಗ್ರಾಮ ಮಟ್ಟದಲ್ಲೂ ಇಂತಹ ಕ್ರಾಂತಿಯಾಗಬೇಕಿದೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಸಂಘಟನೆ ಎಂದರೆ ಹೇಗಿರಬೇಕು ಎಂಬುವುದನ್ನು ದೇಶಕ್ಕೆ ಮಾದರಿಯಾಗಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ತೋರಿಸಿಕೊಟ್ಟಿದ್ದು, ಇಲ್ಲಿನ ಜನಪ್ರತಿನಿಧಿಗಳ ಸರಳಸಜ್ಜನಿಕೆ ಕೂಡ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕೋಲಾರ ಸಂಸದ ಮುನಿಸ್ವಾಮಿ ಮಾತನಾಡಿ, ಕೆಟ್ಟ ಹುಳುವನ್ನು ಕಿತ್ತೊಗೆಯಿರಿ, ಮುಂದಿನ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಎಲ್ಲಾ 248 ಗ್ರಾಮ ಪಂಚಾಯತ್ ಗಳಲ್ಲಿಯೂ ಬಿಜೆಪಿ ಬೆಂಬಲಿತರು ಅಧಿಕಾರ ಬರುವಂತಾ ರೀತಿಯಲ್ಲಿ ಶ್ರಮಿಸುವಂತೆ ಕರೆ ನೀಡಿದರು.ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ದೇಶದ ಮೂಲೆಮೂಲೆಗಳ ಹಳ್ಳಿಹಳ್ಳಿಯಲ್ಲಿಯೂ ಕ್ರಾಂತಿಕಾರಿ ಅಭಿವೃದ್ಧಿ ನಡೆಸಿದ್ದು, ಬಿಜೆಪಿ ಬೆಂಬಲಿತ ಸಕ್ರೀಯ ಕಾರ್ಯಕರ್ತರು ಪಂಚಾಯತ್ ಸದಸ್ಯರಾದಾಗ ಮಾತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧ್ಯವಿದೆ ಎಂದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರವ್ಯಾಪ್ತಿಯ 39 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ನಡೆಸಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ 400 ಸ್ಥಾನಗಳನ್ನು ಗೆಲ್ಲಿಸಲು ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು.


ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮುಲ್ಕಿ ಮೂಡಬಿದ್ರೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.

ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಂತೆಯೇ ಗ್ರಾಮಪಂಚಾಯತ್ ಮಟ್ಟದಲ್ಲಿಯೂ ಬಿಜೆಪಿ ಗೆಲ್ಲುವ ನಿರೀಕ್ಷೆ ಜನತೆಯಲ್ಲಿದ್ದು, ಇದು ಶೀಘ್ರ ಸಾಕಾರಗೊಳ್ಳಲಿದೆ ಎಂದರು.

ಮಂಗಳೂರು ನಗರ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಪ್ರಧಾನಮಂತ್ರಿಗಳ ಗ್ರಾಮ ಸ್ವಾರಜ್ಯದ ಪರಿಕಲ್ಪನೆಯ ಯೋಜನೆಗಳ ಬಗ್ಗೆ ಗ್ರಾಮಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಸುವಂತೆ ಅವರು ಮನವಿ ಮಾಡಿದರು.


ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಮಹಿಳಾ ಮೋರ್ಛಾದ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಗೋಪಾಲಕೃಷ್ಣ ಹೇರಳೆ, ಉದಯ ಕುಮಾರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಹರಿಕೃಷ್ಣ ಬಂಟ್ವಾಳ್, ಸಂತೋಷ್ ಕುಮಾರ್ ಬೋಳಿಯಾರು, ಭರತೇಶ್, ರಾಜೇಶ್ ಕಾವೇರಿ, ಸುನಿಲ್ ಆಳ್ವಾ, ತಿಲಕ್ ರಾಜ್, ಚಂದ್ರ ಹಾಸ್ ಪಂಡಿತ್ ಹೌಸ್, ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ದೇವಪ್ಪ ಪೂಜಾರಿ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ. ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಸುನಿಲ್ ಆಳ್ವಾ ವಂದಿಸಿದರು.

ಇದೇ ಸಂದರ್ಭ ಕೋವಿಡ್ ಹಿನ್ನೆಲೆಯಲ್ಲಿ ಮೃತರಾದ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ್ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

More from the blog

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ವಿಟ್ಲ ಕೇಂದ್ರ ಜುಮಾ ಮಸೀದಿ, ಈದುಲ್ ಫಿತರ್

ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಫಿತರ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಉಸ್ತಾದ್ ರವರು ಖುತುಬಾ ಹಾಗೂ ಈದ್ ನಮಾಝ್ ನಿರ್ವಹಿಸಿದರು. ಈದ್ ಸಂಸೇಶ ನೀಡಿದ ಖತೀಬರು "...

ನೋಟ ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ತಾ.ಪಂ.ಸದಸ್ಯ ಪ್ರಭಾಕರ್ ಪ್ರಭು ಒತ್ತಾಯ…

ನೋಟ (NOTA) ಮತದಾನ ಅಭಿಯಾನ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ತಾ.ಪಂ‌.ಸದಸ್ಯ ಪ್ರಭಾಕರ್ ಪ್ರಭು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲವೊಂದು ವ್ಯಕ್ತಿಗಳು ಮತ್ತು ಸಂಘಟನೆಗಳು...

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...