Wednesday, October 18, 2023

ವಿದ್ಯಾರ್ಥಿ ವೇತನ, ಫೆಲೋಶಿಪ್ ಕಡತವನ್ನು ವಿರೋಧಿಸಿ ಸಿ.ಎಫ್.ಐ.ಯಿಂದ ‘ಸ್ಕಾಲರ್ಶಿಪ್ ಕೊಡಿ’ ಆಂದೋಲನ: ಮುಹಮ್ಮದ್ ಸಾದಿಕ್

Must read

ಬಂಟ್ವಾಳ : ವಿದ್ಯಾರ್ಥಿ ವೇತನ ಮಂಜೂರಾತಿಯಲ್ಲಿ ವಿಳಂಬ ಮತ್ತು ಅವ್ಯವಸ್ಥೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ಫೆಲೋಶಿಪ್ ಕಡಿತಗೊಳಿಸಿರುವ ಸರಕಾರ ಮತ್ತು ಅಲ್ಪಸಂಖ್ಯಾತ ಇಲಾಖೆಯ ವಿರುದ್ಧ ರಾಜ್ಯಾದ್ಯಂತ ‘ಸ್ಕಾಲರ್ಶಿಪ್ ಕೊಡಿ ವಿದ್ಯಾರ್ಥಿ ಆಂದೋಲನ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿ.ಎಫ್.ಐ.) ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಸಾದಿಕ್ ತಿಳಿಸಿದರು.

ಶುಕ್ರವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂದೋಲನದ ಈಗಾಗಲೇ ಅರಂಭಗೊಂಡಿದ್ದು ಇದರ ಅಂಗವಾಗಿ ರಾಜ್ಯದ ಪ್ರತೀ ತಾಲೂಕು ಕೇಂದ್ರಗಳಲ್ಲಿ ಮನವಿ ಸಲ್ಲಿಕೆ, ಪ್ರತಿಭಟನೆ ಸಹಿತ ವಿವಿಧ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಲ್ಪಸಂಖ್ಯಾತ ಇಲಾಖೆಯಿಂದ ಪ್ರಿ.ಮೆಟ್ರಿಕ್, ಪೋಸ್ಟ್ ಮೆಟ್ರಿಕ್, ವಿದ್ಯಾಸಿರಿ, ಅರಿವು ಸಾಲ ಮೊದಲಾದ ವಿದ್ಯಾರ್ಥಿ ವೇತನಗಳು ಇವೆ. ಆದರೆ ಎರಡು, ಮೂರು ವರ್ಷಗಳಿಂದ ವಿದ್ಯಾರ್ಥಿ ವೇತನಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಕ್ಷುಲ್ಲಕ ಕಾರಣ ಹೇಳಿ ವಿಲೇವಾರಿ ಮಾಡದೆ ಬಾಕಿಯಿಟ್ಟಿದೆ. ಕೆಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರಾದರೂ ಅವರ ಖಾತೆಗೆ ಹಣ ಜಮೆ ಮಾಡಿಲ್ಲ ಎಂದು ಅವರು ದೂರಿದರು.

ವಿದ್ಯಾರ್ಥಿ ವೇತನವನ್ನೇ ನಂಬಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಗಳು ಕಳೆದ ಸಾಲಿನ ಕಾಲೇಜು ಶುಲ್ಕ ಪಾವತಿಸದೆ ಪ್ರಸಕ್ತ ಸಾಲಿನ 2020-21ರ ದಾಖಲಾತಿ ಮಾಡುತ್ತಿಲ್ಲ. ಲಾಕ್ ಡೌನ್ ಸಂಕಷ್ಟದಿಂದಾಗಿ ಹೆಚ್ಚಿನ ವಿದ್ಯಾರ್ಥಿಗಳ ಪೋಷಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ಕೂಡ ಒಂದೇ ಕಂತಿನಲ್ಲಿ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿವೆ.‌ ಇದರಿಂದಾಗಿ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಾ ಸರಿ ಮಾಡಲು ಸರಕಾರ ಇದುವರೆಗೂ ಮುಂದಾಗಿಲ್ಲ. ಇದರಿಂದಾಗಿ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಿದ್ದಾರೆ. ಸರಕಾರದ ಈ ಎಲ್ಲಾ ಧೋರಣೆಯನ್ನು ಸಿ.ಎಫ್.ಐ. ಖಂಡಿಸುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೆ ಹೋರಟ ನಡೆಸಲಿದೆ ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ಸಮುದಾಯದ ಪಿ.ಎಚ್.ಡಿ. ಮತ್ತು ಎಮ್.ಫಿಲ್. ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಮಾಸಿಕ 25,000 ರೂ. ಪ್ರೋತ್ಸಾಹ ಧನ ಮತ್ತು ವಾರ್ಷಿಕ 10,000 ರೂ. ನಿರ್ವಹಣ ವೆಚ್ಚವನ್ನು ನೀಡಲಾಗುತ್ತಿತ್ತು. ಆದರೆ ಸರಕಾರ ದಿಢೀರ್ ಆದೇಶ ಹೊರಡಿಸಿ ಮಾಸಿಕ ನೀಡುವ ಪ್ರೊತ್ಸಾಹ ಧನವನ್ನು 10,000 ರೂ.ಗೆ ಇಳಿಸಿದೆ. ವಾರ್ಷಿಕ ನಿರ್ವಹಣಾ ವೆಚ್ಚವನ್ನು ರದ್ದು ಮಾಡಿದೆ. ಈ ಆದೇಶವು ವಿದ್ಯಾರ್ಥಿಗಳಿಗೆ ಮಾಡಿರುವ ಅನ್ಯಾಯವಾಗಿದೆ. ಸರಕಾರ ಕೂಡಲೇ ಈ ಆದೇಶವನ್ನು ಹಿಂಪಡೆದು ಮೊದಲಿನಂತೆ ಫೆಲೋಶಿಪ್ ಅನ್ನು ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು.

ವಿದ್ಯಾರ್ಥಿ ವೇತನವನ್ನು ವ್ಯವಸ್ಥೆಯನ್ನು ಸರಳೀಕೃತಗೊಳಿಸಬೇಕು. ಬಾಕಿ ಇರುವ ವಿದ್ಯಾರ್ಥಿ ವೇತನದ ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಬೇಕು. ಮಂಜೂರಾಗದೆ ಬಾಕಿಯಿರುವ ಎಲ್ಲಾ ಮಾದರಿಯ ವಿದ್ಯಾರ್ಥಿ ವೇತನವನ್ನು ಶೀಘ್ರ ಬಿಡುಗಡೆಗೊಳಿಸಬೇಕು. ಕಡಿತಗೊಳಿಸಿರುವ ಪಿ.ಎಚ್.ಡಿ. ಫೆಲೋಶಿಪ್ ಆದೇಶವನ್ನು ಹಿಂಪಡೆಯಬೇಕು. ವಿದ್ಯಾರ್ಥಿ ವೇತನದ ಹಣವನ್ನು ಬೇರೆ ಯೋಜನೆಗಳಿಗೆ ಬಳಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷ ಫಹದ್ ಅನ್ವರ್, ಜಿಲ್ಲಾ ಸಮಿತಿ ಸದಸ್ಯರಾದ ಮುಹಮ್ಮದ್ ಅಶ್ಪಾಕ್, ಐಮಾನ್, ಮಾಧ್ಯಮ ಸಂಯೋಜಕ ಮುಹಮ್ಮದ್ ಸಜ್ಜಾದ್ ಉಪಸ್ಥಿತರಿದ್ದರು.

More articles

Latest article