ಮಂಗಳೂರು : ಕರಾವಳಿ ಭಾಗದ ಜನರ ಧಾರ್ಮಿಕ ನಂಬಿಕೆಯಲ್ಲೊಂದಾಗಿರುವ ನವರಾತ್ರಿ ಸಂದರ್ಭದ ಹುಲಿವೇಷ ಕುಣಿತಕ್ಕೆ ಸಂಪ್ರದಾಯ ಪ್ರಕಾರ ಜಿಲ್ಲಾಡಳಿತ ಅವಕಾಶ ಕಲ್ಪಿಸುವ ಭರವಸೆ ಇದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ. ದಸರಾ ಅಚರಣೆಯ ವೇಳೆ ದೇವಸ್ಥಾನದ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳುವ ಹಿನ್ನೆಲೆ, ಸಂಪ್ರದಾಯ ಪ್ರಕಾರ ಹುಲಿ ವೇಷ ಕುಣಿತಕ್ಕೆ ಈ ಬಾರಿ ಅವಕಾಶ ನೀಡಲು ದ.ಕ ಜಿಲ್ಲಾಡಳಿತ ನಿರ್ಧರಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಕೊರೊನಾ ಕಾರಣದಿಂದಾಗಿ ದಸರಾ ಸಂದರ್ಭದ ಕರಾವಳಿಯಲ್ಲಿ ಪ್ರಸಿದ್ಧವಾಗಿರುವ ಹಾಗೂ ಧಾರ್ಮಿಕ ಭಾವನೆಗಳನ್ನೊಳಗೊಂಡಿರುವ ಹುಲಿ ವೇಷ ಕುಣಿತಕ್ಕೆ ದ.ಕ. ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೆ, ವಿವಿಧ ದೇವಸ್ಥಾನ ಹಾಗೂ ಶಾರದೋತ್ಸವ ಸಮಿತಿಯ ಪ್ರಮುಖರು ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ ಎಂದರು.
ಕರಾವಳಿಯ ಮಣ್ಣಿನ ಸಂಸ್ಕೃತಿ ಸಂಸ್ಕಾರ ಹಾಗೂ ಸಂಪ್ರದಾಯಕ್ಕೆ ಯಾವುದೇ ಧಕ್ಕೆ ಎದುರಾಗಬಾರದು ಎಂಬ ಕಾರಣದಿಂದ ಈಗಾಗಲೇ ಜಿಲ್ಲಾಧಿಕಾರಿಯವರಲ್ಲಿ ಈ ವಿಷಯ ಪ್ರಸ್ತಾವಿಸಿದ್ದೇನೆ. ಸಂಪ್ರದಾಯ ಪ್ರಕಾರವಾಗಿ ಹುಲಿ ವೇಷ ಕುಣಿತಕ್ಕೆ ಅವಕಾಶ ನೀಡುವಂತೆ ಕೋರಲಾಗಿದೆ. ಹೀಗಾಗಿ ಸಂಪ್ರದಾಯದಂತೆ ಹುಲಿವೇಷ ಕುಣಿತಕ್ಕೆ ಜಿಲ್ಲಾಡಳಿತ ಅವಕಾಶ ನೀಡಲಿದ್ದು, ಯಾರೂ ಕೂಡ ಆತಂಕ ಪಡುವ ಆವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.