


ಬಂಟ್ವಾಳ: ಯಾವುದೇ ಕಾರಣಕ್ಕೂ ಹಳೆಯ ಪಿಂಚಣಿ ಯೋಜನೆ ಜಾರಿಯಾಗುವವರೆಗೂ ನಾವು ಹೋರಾಟದಿಂದ ವಿರಮಿಸುವುದಿಲ್ಲ. ಸರಕಾರವು ಈಗಾಗಲೇ ವಿಶೇಷ ಪ್ರಕರಣದಡಿಯಲ್ಲಿ 2006ರ ಪೂರ್ವದಲ್ಲಿ ನೇಮಕಾತಿ ಹೊಂದಿ ಅನುದಾನಕ್ಕೊಳಪಟ್ಟ ಶಿಕ್ಷಣಸಂಸ್ಥೆಗಳ ಸರ್ವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದಿದೆ ಎಂಬುದಾಗಿ ರಾಜ್ಯ ಅನುದಾನಿತ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಕೆ.ವೈ. ಹಡಗಲಿ ಹೇಳಿದರು.
ಅವರು ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ಕೊಡಗು, ಉಡುಪಿ ಮತ್ತು ದ.ಕ. ಜಿಲ್ಲಾ ಪಿಂಚಣಿ ವಂಚಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದವರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾವೇಶದಲ್ಲಿ ಉಪಸ್ಥಿತರಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರಪ್ಪ ಮಾತನಾಡಿ, ಸಂಘದ ವತಿಯಿಂದ ನಡೆದು ಬಂದ ಹೋರಾಟದ ಹಾದಿಯನ್ನು ವಿವರಿಸಿ ನಾವು ಒಪ್ಪಿಗೆ ಪಡೆಯುವ ಅಂತಿಮ ಹಂತದಲ್ಲಿದೇವೆ ಎಂದರು.
ಉಡುಪಿ, ದ.ಕ. ಹಾಗೂ ಕೊಡಗು ಜಿಲ್ಲೆಗಳ ಶಾಖಾ ಸಂಘಗಳ ಪ್ರಮುಖರು ರಾಜ್ಯ ಪ್ರಾಂಶುಪಾಲರ ಸಂಘದ ಪ್ರತಿನಿಧಿ ವಿಠಲ ಮುಂತಾದವರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಸಂಘದ ಅಧ್ಯಕ್ಷ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿ, ಪ್ರಸ್ತಾಪಿಸಿದರು. ದಿನೇಶ್ ಶೆಟ್ಟಿ ಅಳಿಕೆ ವಂದಿಸಿದರು. ವಿ. ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.


