Sunday, April 14, 2024

ಸಿಳ್ಳಿನ ಮಹಾತ್ಮ್ಯೆ

ತನ್ನ ಮನರಂಜನೆಗೆ ಮನುಷ್ಯನು ವಿವಿಧ ಆಯಾಮಗಳ ಮೊರೆಹೋಗುತ್ತಾನೆ. ಅವು ವಿವಿಧ ಕರ ಕುಶಲ ಚಟುವಟಿಕೆಗಳಿರಬಹುದು. ಸಂಗೀತ, ನಾಟಕ, ಹಾಸ್ಯ, ನೃತ್ಯ, ಹಾಡು, ವಾಚನ, ವೀಕ್ಷಣೆ ಹೀಗೆ ನಾನಾ ಮನರಂಜಕ ಕಲಾ ವಿಷಯಗಳಿರಬಹುದು. ನಮ್ಮ ಆಸಕ್ತಿಯ ಕ್ಷೇತ್ರವು ನಮಗೆ ಮನೋಲ್ಲಾಸವನ್ನು ನೀಡುವುದು ಖಂಡಿತ. ಸಿಳ್ಳು ಕೂಡಾ ಮುದ ನೀಡುವ ಮಹಾತ್ಮ್ಯೆಯುಳ್ಳ ವಾಯು ವಾದನ ವಿಧಾನವಾಗಿದೆ.
ಲೇಖನದ ಶಿರ್ಷಿಕೆ ನೋಡಿದಾಗ, ಸಿಳ್ಳು! ಅದೇನು ಮಹಾ? ಸಿಳ್ಳಿಗೂ ಮಹಾತ್ಮ್ಯೆ ಇದೆಯಾ? ಎಂದು ಆಶ್ಚರ್ಯವಾಗುತ್ತಿದೆಯಾ? ಹೌದು. ಸಿಳ್ಳು ನಮ್ಮನ್ನು ಬೆಳೆಸುವ ಮತ್ತು ಅಳಿಸುವ ಮಹಿಮಾ ಮಹಿ. ಅಡುಗೆ ಮನೆಯಲ್ಲಿ ಹಬೆ ಪಾತ್ರೆ (Pressure cooker) ಯಿಂದ ಚಿಮ್ಮುವ ಸಿಳ್ಳಿನ ಶ್ರವಣ ನಮಗೆ ನಿತ್ಯಾನುಭವ. ಉಗಿ ಬಂಡಿಯು ಹೊಡೆಯುವ ಸಿಳ್ಳು ಎಲ್ಲರಿಗೂ ಚಿರಪರಿಚಿತ. ಗಾಳಿ ಬೀಸುವಾಗಲೂ, ಮರಗಳ ಸಂದಿನಿಂದ ಸಿಳ್ಳಿನಂತಹ ಧ್ವನಿ ನಮ್ಮ ಕಿವಿಗೆ ಅಪ್ಪಳಿಸುವುದಿದೆ. ಯಾವುದೇ ಉಪಕರಣಗಳಿಲ್ಲದೆ ತುಟಿಗಳ ಸಹಾಯದಿಂದ ಸಿಳ್ಳು ಹೊಡೆಯುವುದು ಒಂದು ಕೌಶಲ್ಯ. ಸಿಳ್ಳು ಹಾಕುವುದೆಂದರೆ ಮಕ್ಕಳಿಗೆ ಬಹಳ ಖುಷಿ. ಕೆಲವು ಪುಟಾಣಿಗಳು ನಾನಾ ಶೈಲಿ ಮತ್ತು ಭಂಗಿಗಳಲ್ಲಿ ಸಿಳ್ಳು ಹೊಡೆಯುವುದನ್ನು ಬಹಳ ಇಷ್ಟದಿಂದ ಕಷ್ಟ ಪಟ್ಟು ಅಭ್ಯಸಿಸುತ್ತಾರೆ. ಮಾಮೂಲು ಸಿಳ್ಳು ಹೊಡೆಯಲು ಗುರುವಿನ ಕೃಪೆ ಅನಗತ್ಯ. ಸಿಳ್ಳಿನ ಅಭ್ಯಾಸಕ್ಕೆ ಸಮಯದ ವೆಚ್ಚ ಮಾತ್ರವೇ ಸಾಕು. ಹಣದ ವೆಚ್ಚವಂತೂ ಇಲ್ಲವೇ ಇಲ್ಲ.
ಸಿಳ್ಳು ಹಾಕುತ್ತಾ, ಸಿಳ್ಳಿನ ತಾಳಕ್ಕೆ ತಲೆಯನ್ನು ತಿರುವುತ್ತಾ ನಡೆದಾಡುವವರನ್ನು, ದಾರಿ ಹೋಕರನ್ನು ನೋಡುತ್ತೇವೆ. ಸಿಳ್ಳು ಅವರ ಮನಸನ್ನು ಒತ್ತಡಮುಕ್ತವಾಗಿಡುತ್ತದೆ. ಅವರ ಮನಸ್ಸು ಪ್ರಫುಲ್ಲವಾಗಿರುವುದರ, ಪ್ರಸನ್ನವಾಗಿರುವುದರ ಸಂಕೇತವೇ ಸಿಳ್ಳು. ಸಿಳ್ಳಿನ ಲಯಕ್ಕೆ ಹೆಜ್ಜೆ ಹಾಕುವ, ಕೈ ತಿರುಗಿಸುವ ಆನಂದ ಮನಸ್ಕರೂ ಇದ್ದಾರೆ. ಬಂಡೆಯ ಮೇಲೆ ಕುಳಿತು, ಸಿಳ್ಳು ಹೊಡೆಯುವುದೆಂದರೆ ಗಂಡಸರಿಗೆ ಮಜಾವಂತೆ. ಸಿಳ್ಳೆನ್ನುವುದು ಮನೋಲ್ಲಾಸ ವರ್ಧಕ ಟಾನಿಕ್ ಖಂಡಿತ. ಕೆಲವೊಮ್ಮೆ ಸಿಳ್ಳು ನಮ್ಮ ಅವಿನಾಭಾವ ಸಂಬಂಧಿಯಿರಬಹುದೇನೋ ಎಂದೆನಿಸುವುದೂ ಇದೆ.
ತುಟಿಗಳು ಮತ್ತು ಬೆರಳುಗಳ ಸಂಯೋಜನೆಯಿಂದ ಹೊರಡಿಸುವ ಸಿಳ್ಳಿನ ಪರಿಣಾಮಗಳು ಅನ್ಯಾನ್ಯ. ಯಾವುದೇ ವೆಚ್ಚ ಇಲ್ಲದ ಅತೀ ಸುಲಭ ಗ್ರಹ್ಯವಾದ ಸಿಳ್ಳು ಅನೇಕರಿಗೆ ಬಾತ್ ರೂಂ ಮ್ಯೂಸಿಕ್. ಬಾಗಿಲಿರದ ಶೌಚಾಲಯದಲ್ಲಿ ಸಿಳ್ಳು ಹಾಕುತಾ, ಕಕ್ಕ ಕಕ್ಕುವವರಿದ್ದಾರೆಂದರೆ ನಮಗೆ ನಗು ಬರುತ್ತದೆಯಲ್ಲವೇ? ಹೌದು, ಅಂತಹ ಸಂದರ್ಭದಲ್ಲಿ ಮಾನ ಉಳಿಸುವ ರಕ್ಷಕನಾಗಿ, ಬಾಗಿಲಿನ ಪಾತ್ರವನ್ನು ಸಿಳ್ಳು ನಿರ್ವಹಿಸುತ್ತದೆ. ಸಿಳ್ಳಿನ ಮೂಲಕವೇ ಸಂಗೀತದ ರಸದೌತಣ ನೀಡುವ ಕಲಾವಿದರು ಇಂದು ಹೆಚ್ಚುತ್ತಿದ್ದಾರೆ. ಸಿಳ್ಳು ಇತರರನ್ನು ರಂಜಿಸುತ ಮೋಹಕ ಸಂಗೀತವಾಗಬೇಕಾದರೆ, ಸಂಗೀತ ಜ್ಞಾನವೂ ಬೇಕು ಜೊತೆಗೆ ಗುರುವಿನ ಮಾರ್ಗದರ್ಶನವೂ ಬೇಕು. ಸಿಳ್ಳು ಒಂದು ರೀತಿಯ ವಾಯು ವಾದ್ಯವೆಂದರೆ ಅತಿಶಯವಲ್ಲ.
ಚುನಾವಣಾ ಭಾಷಣದ ಸಂದರ್ಭದಲ್ಲಿ ಸಿಳ್ಳಿಗೆ ಮತ್ತು ದೀರ್ಘ ಸಿಳ್ಳು ಹಾಕುವ ಚತುರರಿಗೆ ಬೇಡಿಕೆ ಜಾಸ್ತಿ. ಮಾತನಾಡಲಿರುವ ರಾಜಕೀಯ ನಾಯಕರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಸಿಳ್ಳುಗಳು ಮೊಳಗಲೇ ಬೇಕು. ಭಾಷಣಕ್ಕಾಗಿ ಮೈಕ್ ಹತ್ತಿರ ಆ ಮುಂದಾಳು ಬರುತ್ತಿದ್ದಾಗ ಸಭಾಸದರ ಸಿಳ್ಳು ಕಾರ್ಮುಗಿಲನ್ನು ಭೇದಿಸಿದರೆ, ಆಗಲೇ ಭಾಷಣ ಮಾಡ ಹೊರಟವರಿಗೆ ರೋಮಾಂಚನವಾಗುತ್ತದೆ ಮತ್ತು ಮಾತು ಆರಂಭಿಸಲು ಸ್ಫೂರ್ತಿ ಬಂದಂತಾಗುತ್ತದೆ. ಭಾಷಣದ ಮೊದಲ ಪದ, ಬಂಧುಗಳೇ ಎಂದೊಡನೆ ಜೋರಾದ ಸಿಳ್ಳುಗಳು ಬಿದ್ದರೆ ಅವರ ಭಾಷಣಕ್ಕೆ ಏರುಗತಿ ದೊರೆಯುತ್ತದೆ. ವಿರೋಧೀ ಗುಂಪಿನ ಅಥವಾ ವಿರೋಧ ಪಕ್ಷದ ನಾಯಕರನ್ನು ಜರೆದು ಮಾತನಾಡಿದಾಗಲಂತೂ ಭಾರೀ ಸದ್ದಿನ ಸಿಳ್ಳುಗಳ ಸುರಿಮಳೆ ಮಾಲಾ ಪಟಾಕಿಗಳೋಪಾದಿಯಲ್ಲಿ ಸಿಡಿಯುತ್ತಿರಲೇ ಬೇಕು. ನಾಯಕರ ಮಾತುಗಳು ವಿರೋಧೀ ಗುಂಪಿನವರಿಗೆ ಕೇಳಿಸದಿರಲಿ ಎಂಬ ಜಾಣತನದಿಂದ ಈ ಸಿಳ್ಳುಗಳು ಬರುತ್ತವೆಯೋ, ಅಥವಾ ಬೈಗುಳಗಳಿಂದ ಪ್ರೇಕ್ಷಕರಿಗೆ ಖುಷಿಯೇರಿ ಸಿಳ್ಳು ಚಿಮ್ಮುವುದೋ ಎಂಬುದು ಯಕ್ಷಪ್ರಶ್ನೆ. ಅಂತು ರಾಜಕೀಯ ಪಕ್ಷಗಳ ಭಾಷಣ ಎಂದರೆ ಸಿಳ್ಳುಗಳ ಮಹಾ ಮಳೆಯೇ ಸುರಿಯುತ್ತದೆ.
ಬಸ್ ನಿರ್ವಾಹಕರು ಹಾಕುವ ಸಿಳ್ಳು ಅನಿವಾರ್ಯತೆಯ ಸಿಳ್ಳು. ಬಸ್ ಕಂಡಕ್ಟರ್ ಸಿಳ್ಳು ಹೊಡೆಯಲು ಅರಿತವನಾದರೆ ಅವನ ಕೆಲಸ ಬಹಳ ಸುಲಭ. ಕಂಡಕ್ಟರ್‌ನ ಸಿಳ್ಳು ಸುರಕ್ಷಿತ ಪ್ರಯಾಣಕ್ಕೆ ಕಾರಣವಾಗುತ್ತದೆ. ವಾಹನ ನಿಯಂತ್ರಕರ ಸಿಳ್ಳುಗಳು ರಸ್ತೆಯಲ್ಲಿ ಸಂಭವಿಸುವ ಅಪಘಾತಗಳ ಮುಕ್ತಿಗೆ ಪೋಷಕವಾಗುತ್ತದೆ.
ಕೆಲವೆಡೆ ಸಿಳ್ಳು ಹಾಕಲೇ ಬೇಕಾದ ಅನಿವಾರ್ಯತೆ ಇರಲೂಬಹುದು. ಎಲ್ಲ ಕಡೆ ಸಿಳ್ಳು ಹಾಕುವುದೂ ಅಸಂಜಸ ಮತ್ತು ಅನಗತ್ಯ. ಮಹಾಶಯರೆನಿಸಿಕೊಂಡವರು ಭಾಷಣ ಮಾಡುತ್ತಾ ಇದ್ದಂತೆ ಸಭಾಸದರ ಕೊನೇಯ ಸಾಲುಗಳಿಂದ ಸಿಳ್ಳು ಬೀಳುವುದೂ ಇದೆ. ಹರಿದಾಸರ ಪ್ರವಚನದಲ್ಲೂ ಸಿಳ್ಳುಗಳು ಹಾರುವುದಿದೆ. ಉತ್ತಮ ಹಾಸ್ಯಕ್ಕೆ, ಅಭಿನಯಕ್ಕೆ, ನೃತ್ಯಕ್ಕೆ, ಕ್ರೀಡಾಕೂಟಕ್ಕೆ ಹಾಕುವ ಸಿಳ್ಳು, ಅದು ಕಿಡಿಗೇಡಿತನದ ಸಿಳ್ಳು. ವಿಕೃತ ಮನೋಲಕ್ಷಣದ ಪ್ರತೀಕ. ಸಿಳ್ಳುಹಾಕಿದ ವ್ಯಕ್ತಿ ಆ ಕಾರ್ಯಕ್ರಮದ ಯಶಸ್ಸಿಗೆ ಪೂರಕನಾಗಲಾರ. ಕಾರ್ಯಕ್ರಮದಲ್ಲಿ ಯಾವುದೋ ಭಿನ್ನ ಸ್ವರೂಪದ ಮನರಂಜನೆ ಹೊಂದುವ ಉದ್ದೇಶದಿಂದ ಆಗಮಿಸಿದವರು ಸಭಾ ಶಿಸ್ತನ್ನು ಪಾಲಿಸುವುದಿಲ್ಲ. ವೇದಿಕೆಯ ಕಾರ್ಯಕ್ರಮವನ್ನು ಗೌರವಿಸುವುದಿಲ್ಲ. ಆ ಎಲ್ಲ ಸಿಳ್ಳುಗಳೂ, ವೇದಿಕೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ನಿಲ್ಲಿಸಲು ಸೂಚ್ಯ ಸಂದೇಶವೇ ಹೊರತು ಪ್ರೋತ್ಸಾಹಿಸುವ ಸಂದೇಶಗಳಾಗುವುದಿಲ್ಲ. ವೇದಿಕೆಯಲ್ಲಿ ಜರಗುವ ಕಾರ್ಯಕ್ರಮದಿಂದ ಮನಸ್ಸಿಗೆ ಹಿತವಾದರೆ, ಸಂತಸವಾದರೆ, ಮೆಚ್ಚುಗೆಯಾದರೆ ಚಪ್ಪಾಳೆ ತಟ್ಟುವುದು ಶ್ರೇಯಸ್ಕರ. ಚಪ್ಪಾಳೆ ಗೌರವದ ಸಂಸ್ಕಾರವೂ ಹೌದು. ಸಭಾ ಮರ್ಯಾದೆಯ ಪ್ರಸ್ತುತಿ ಮತ್ತು ಪಾಲನೆಯೂ ಹೌದು.

ಬೀದಿ ಕಾಮಣ್ಣರಿಗೆ ರಸ್ತೆಯಂಚಿನಲ್ಲಿ ಹುಡುಗಿಯರು ಹೋಗುತ್ತಿರುವಾಗ ಸಿಳ್ಳುಹಾಕುವುದೆಂದರೆ ಪಂಚಪ್ರಾಣ. ಹುಡುಗಿಯರು ತಿರುಗಿ ನೋಡಿದೊಡನೆ ಅವರ ಸಿಳ್ಳು ಕೆಲವೊಮ್ಮೆ ನಿಲ್ಲುವುದೂ ಇದೆ, ಕೆಲವೊಮ್ಮೆ ಆ ಸಿಳ್ಳು ಏರುವುದೂ ಇದೆ. ಹುಡುಗಿಯರು ಎಲ್ಲಾದರೂ ಧೈರ್ಯ ತೋರಿದರೆ, ಕಣ್ಣು ಅರಳಿಸಿ, ಕಣ್ಣು ಕೆರಳಿಸಿ, ಕಣ್ಣು ಕೆಕ್ಕರಿಸಿ ನೋಡಿದರೆ ಬೀದಿ ಕಾಮಣ್ಣರ ಭಂಡತನ ಬಯಲಾಗುವುದೂ ಇದೆ. ಹುಡುಗಿಯರ ಕೈಗಳು ಕಾಲಿನತ್ತ ಚಾಚಲ್ಪಟ್ಟರೆ ಕಾಮಣ್ಣರು ಕಾಲ್ಕಿತ್ತೇ ಬಿಡುತ್ತಾರೆ. ಸಿಳ್ಳು ಹೊಡೆಯುವುದನ್ನು ನಿಲ್ಲಿಸದ ಭಂಡರಿಗೆ ಅವರ ಸಿಳ್ಳಿನ ಪರಿಣಾಮದಿಂದ ಕಪಾಳ ಮೋಕ್ಷಗಳಾದ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ ಓದುತ್ತೇವೆ.
ಭಾರತ ಗೌರವ, ಘನತೆಗಳಿಗೆ ಹೆಸರಾದ ದೇಶ. ಇಲ್ಲಿ ಸಜ್ಜನಿಕೆಗೆ ಸಿಗುವ ಮಾನ್ಯತೆ ದುರ್ಜನಿಕೆಗೆ ಸಿಗದು. ಮನಸ್ಸಿಗೆ ಮುದವೇರಿದರೆ ಚಪ್ಪಾಳೆಯೊಂದಿಗೆ ಪುರಸ್ಕರಿಸುವ ಘನವಂತರು ನಾವು. ಆದರೂ ಕೆಲವರು ಮದವೇರಿದವರಂತೆ ಸಿಳ್ಳು, ಕೇಕೆ ಹಾಕುವುದನ್ನು, ಕುತ್ಸಿತವಾಗಿ ವರ್ತಿಸುವುದನ್ನು ಕಾಣುತ್ತಿದ್ದೇವೆ. ಇದು ದೇಶಕ್ಕೆ, ಸಜ್ಜನಿಕೆಗೆ ಮಾಡುವ ಅಪಚಾರವಾಗಿದೆ. ಸಿಳ್ಳನ್ನು ಒಳ್ಳೆಯ ಉದ್ದೇಶಗಳಿಗೆ ಬಳಸುವುದು ಶ್ರೇಯಸ್ಕರ. ಮನರಂಜನೆಗಾಗಿ ಹಾಡನ್ನು ಸಿಳ್ಳಿಗೆ ಹೊಸೆಯುವುದು, ವಾದ್ಯಗಳಮೂಲಕ ಸಂಗೀತನುಡಿಸುವಂತೆ ಸಿಳ್ಳಿನ ಮೂಲಕವೂ ಸಂಗೀತದ ರಸವನ್ನು ಚಿಮ್ಮಿಸುವುದು, ಬೇಕಾದರೆ ಆ ಸಂಗೀತಕ್ಕೆ ಅನುಗುಣವಾದ ಅಭಿನಯವನ್ನು ಆಥವಾ ನೃತ್ಯವನ್ನು ಮಾಡುವುದು, ಸಿಳ್ಳುಗಳ ಮೂಲಕವೇ ಮಾತುಕತೆ ಬೆಳೆಸುವುದು ಇವೆಲ್ಲವೂ ನಮ್ಮ ಗೌರವವನ್ನು ನೂರ್ಮಡಿಸುತ್ತದೆ. ಆದರೆ ಅಪಹಾಸ್ಯಕ್ಕಾಗಿ, ಗೇಲಿಗಾಗಿ, ಕುಹಕಕ್ಕಾಗಿ, ಅಪಮಾನಿಸುವುದಕ್ಕಾಗಿ ಯಾಕೆ ಸಿಳ್ಳು ಹಾಕಬೇಕು? ಕೀಳು ಮಟ್ಟದ ಸಿಳ್ಳುಗಳ ಮೂಲಕ ನಾವು ಯಾರಿಗೂ ಮುಳ್ಳಾಗದಿರೋಣ ಎಂಬುದೇ ಆಶಯ.

ಲೇ: ರಮೇಶ ಎಂ ಬಾಯಾರು ಎಂ.ಎ, ಬಿ.ಎಡ್
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು,
ಲೇಖಕರು, ಅಂಕಣಕಾರು

More from the blog

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...

ಯುವಮೋರ್ಚಾ ಬಂಟ್ವಾಳ ವತಿಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಬಿ. ಸಿ ರೋಡಿನ ರಕ್ತೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

ಯುವಮೋರ್ಚಾ ಬಂಟ್ವಾಳ ವತಿಯಿಂದ ನರೇಂದ್ರ ಮೋದಿ ಮತೊಮ್ಮೆ ಪ್ರಧಾನಿಯಾಗಲೆಂದು ರಕ್ತೇಶ್ವರಿ ದೇವಸ್ಥಾನ ಬಿ. ಸಿ ರೋಡಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಆಯತಪ್ಪಿ ಬಾವಿಗೆ‌ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಗುರುವಾರ ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ. ಸಂಜೆ 5 ಗಂಟೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...