Wednesday, October 18, 2023

ಮಾಡರ್ನ್ ಕವನ : ಸಂಜಯ ಈಗೇನಾಯ್ತು

Must read

ಧೃತರಾಷ್ಟ್ರ ಕೇಳುತ್ತಿದ್ದಾನೆ..!?
“ಸಂಜಯ
ಈಗೇನಾಯ್ತು..
ಯುದ್ಧ ಭೂಮಿಯಲ್ಲಿ…!?”

“ಭೀಷ್ಮ,ದ್ರೋಣಾಚಾರ್ಯ
ಕರ್ಣ ಅರ್ಜುನನ ಬಿಲ್ಲಿಗೆ
ಪ್ರಾಣ ಬಿಟ್ಟರು,
ದುಶ್ಯಾಸನ,ದುರ್ಯೋಧನ
ಎಲ್ಲಾ ಕೌರವರು
ಭೀಮನ ಗದೆಗೆ
ಪ್ರಾಣ ಕಳೆದುಕೊಂಡರು..”
ಉಪ ಪಾಂಡವರು
ಅಭಿಮನ್ಯು
ಕೂಡಾ ಮಣ್ಣಾದರೂ..
ಪಾಂಡವರು ಗೆದ್ದರು
ಕೌರವರು ಸೋತರು…

“ಸಾಕು ನಿಲ್ಲಿಸೆಂದ”
ಧೃತರಾಷ್ಟ್ರ..

ಸಂಜಯನಿಗೆ
ಇನ್ನೂ ಹೇಳುವುದಿತ್ತು..

ಏನೂ…!?
ಈ ಯುದ್ಧದಲ್ಲಿ
ಲಕ್ಷಲಕ್ಷ ಸೈನಿಕರು
ಪ್ರಾಣ ಬಿಟ್ಟದ್ದು
ಕೆಲವೊಂದು ಆನೆ ,ಕುದುರೆ
ಮರಣ ಹೊಂದಿದ್ದು
ಮತ್ತೆ ಕೆಲವು ಗಾಯ ಗೊಂಡದ್ದು..
ಸತ್ತ ಗಂಡಿರ ಹೆಂಡತಿ ಮಕ್ಕಳ ಗೋಳು
ಎಲ್ಲಾ ಕುರುಡು ರಾಜನಿಗೆ
ಹೇಳ ಬೇಕಾಗಿತ್ತು..

ಎಲ್ಲಿ ಅವಕಾಶ ಕೊಟ್ಟ..
ಅವನ ನೂರು ಮಕ್ಕಳು
ಮಣ್ಣಾಗಿರುವಾಗ..!

ಧೃತರಾಷ್ಟ್ರ
ತನ್ನೆಲ್ಲ ತಪ್ಪುಗಳನ್ನು ಲೆಕ್ಕ
ಹಾಕತೊಡಗಿದ..
ಪಾಂಡವರಿಗೆ ಅಧಿಕಾರಕೊಡಬೇಕಿತ್ತು..
ಮಕ್ಕಳ ಮೇಲಿನ ಮೋಹ
ಬಿಡಬೇಕಿತ್ತು..
ದ್ರೌಪದಿಯ ವಸ್ತ್ರಾಪಹರಣಕ್ಕೆ
ಸಾಕ್ಷಿಯಾಗಬಾರದಿತ್ತು…

ಯೋಚನೆಗಳು
ಹಿಂದೆ ಸಾಗಬಹುದಷ್ಟೇ
ಕಳೆದು ಹೋದ ಪ್ರಾಣ…!?

“ಸಂಜಯ….”
ಅಂದಾಗ
“ಯುದ್ಧ ಮುಗಿದಿದೆ” ಅಂದ…

ಸಂಜಯನಿಗೆ ಸಿಕ್ಕ
ದಿವ್ಯದೃಷ್ಟಿಯಲ್ಲಿ
ಧೃತರಾಷ್ಟ್ರನ ಎದೆಯೊಳಗೆ
ನೋಡಲಾಗಲಿಲ್ಲ..
ಅಲ್ಲಿ ಯುದ್ಧ ನಡೆಯುತ್ತಲೇ ಇತ್ತು..!

ಯತೀಶ್ ಕಾಮಾಜೆ

More articles

Latest article