Wednesday, October 18, 2023

ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೆ ಮಾಸ್ಕ್ ಧರಿಸಬೇಕಾಗಿಲ್ಲ : ಕೇಂದ್ರ ಆರೋಗ್ಯ ಸಚಿವಾಲಯ

Must read

ನವದೆಹಲಿ: ಒಬ್ಬ ವ್ಯಕ್ತಿ ಒಬ್ಬಂಟಿಯಾಗಿ ತನ್ನ ಕಾರಿನಲ್ಲಿ ಚಾಲನೆ ಮಾಡುತ್ತಿದ್ದರೆ, ಮಾಸ್ಕ್ ಧರಿಸಬೇಕಿಲ್ಲ. ಮಾಸ್ಕ್‌ ಧರಿಸಿಲ್ಲ ಎಂದು ಅವರಿಗೆ ದಂಡ ವಿಧಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. ಬೇರೆ ಯಾವುದೇ ವ್ಯಕ್ತಿಯೊಂದಿಗೆ ಇಲ್ಲದ ಜನರು ಜಾಗಿಂಗ್ ಅಥವಾ ಸೈಕ್ಲಿಂಗ್ ಮಾಡುವಾಗ ಕೂಡ ಮಾಸ್ಕ್ ಧರಿಸಬೇಕಾಗಿಲ್ಲ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಕಾರಿನಲ್ಲಿ ಒಬ್ಬರೇ ಪ್ರಯಾಣ ಮಾಡುವ ಸಂದರ್ಭ ಪೊಲೀಸರು ದಂಡದ ಚಲನ್‌ ನೀಡುವ ಅಥವಾ ದಂಡ ಪಾವತಿಸಲು ಹೇಳುವ ಕೆಲವು ನಿದರ್ಶನಗಳು ವರದಿಯಾಗಿರುವ ಹಿನ್ನೆಲೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯ ಈ ಸ್ಪಷ್ಟೀಕರಣ ನೀಡಿದ್ದಾರೆ.

ವ್ಯಾಯಾಮ ಮಾಡುವಾಗ, ಒಬ್ಬಂಟಿಯಾಗಿರುವ ಜನರು ಮಾಸ್ಕ್ ಧರಿಸಬೇಕಾಗಿಲ್ಲ. ಆದರೆ ನಾಗರಿಕರು ಇನ್ನೊಬ್ಬರ ಜೊತೆ ಇದ್ದರೆ ಅಥವಾ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದರೆ, ಅವರು ಮಾಸ್ಕ್’ಗಳನ್ನು ಧರಿಸಿ ದೈಹಿಕ ದೂರವನ್ನು ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಜನರು ದೈಹಿಕ ಚಟುವಟಿಕೆಗಳ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ಈಗ ಜಾಗಿಂಗ್ ಮತ್ತು ಎರಡು ಮೂರು ಜನರ ಗುಂಪುಗಳಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಮಾಸ್ಕ್’ಗಳು ಕಡ್ಡಾಯವಾಗಿರುತ್ತವೆ.‌ ಏಕೆಂದರೆ ಅವರು ಸೋಂಕಿಗೆ ಒಳಗಾಗುವ ಸಂಭವವಿರುತ್ತದೆ. ನೀವು ಏಕಾಂಗಿಯಾಗಿ ಸೈಕ್ಲಿಂಗ್ ಮಾಡುತ್ತಿದ್ದರೆ, ಮಾಸ್ಕ್’ಗಳನ್ನು ಧರಿಸಲು ಕಡ್ಡಾಯ ನಿಯಮವಿಲ್ಲ ಎಂದು ಅವರು ಹೇಳಿದರು.

ಕೊರೊನಾ ನಿರ್ವಹಣೆ ಕುರಿತ ಪ್ರತಿಕಾಗೋಷ್ಟಿ ಸಂದರ್ಭದಲ್ಲಿ ಮಾಧ್ಯಮದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ”ಒಂದು ಗುಂಪಿನಲ್ಲಿ ಇರುವಾಗ ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್‌ ಧರಿಸಬೇಕು. ಆದರೆ ಒಬ್ಬರೇ ಇರುವಾಗ ಮಾಸ್ಕ್‌ ಕಡ್ಡಾಯ, ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಯಾವುದೇ ಮಾರ್ಗಸೂಚಿಯಲ್ಲಿ ತಿಳಿಸಿಲ್ಲ. ವಾಹನದಲ್ಲಿ ಒಬ್ಬರೇ ಸಂಚಾರ ಮಾಡುವಾಗ ಮಾಸ್ಕ್‌ ಧರಿಸುಬೇಕಾಗಿಲ್ಲ” ಎಂದು ಹೇಳಿದ್ದಾರೆ.

More articles

Latest article