ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿರುವ 1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ವಿಶೇಷ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದ್ದು, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳು ನಿರ್ದೋಷಿಗಳು ಎಂದು ಮಹತ್ವದ ತೀರ್ಪು ನೀಡಿದೆ.
ಲಕ್ನೋದ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶ ಎಸ್.ಕೆ. ಯಾದವ್ ನೇತೃತ್ವದ ನ್ಯಾಯಾಪೀಠವು ತೀರ್ಪು ಪ್ರಕಟಿಸಿದ್ದು, ಬಾಬ್ರಿ ಮಸೀದಿ ಧ್ವಂಸ ಘಟನೆ ಪೂರ್ವ ನಿಯೋಜಿತ ಕೃತ್ಯ ಅಲ್ಲ, ಆಕಸ್ಮಿಕವಾಗಿ ನಡೆದಿರುವಂತದ್ದು, ಆರೋಪ ಸಾಬೀತು ಪಡಿಸಲು ಪ್ರಬಲ ಸಾಕ್ಷ್ಯಗಳು ಇಲ್ಲ. ಎಲ್ಲಾ 32 ಆರೋಪಿಗಳು ನಿರ್ದೋಷಿಗಳು ಎಂದು ಆದೇಶ ಪ್ರಕಟಿಸಿದ್ದಾರೆ.
ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳು ನಿರ್ದೋಷಿಗಳು ಎಂದು ಲಕ್ನೋದ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ :
ಮೊಘಲರ ಕಾಲದಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕಟ್ಟಲಾಗಿತ್ತು. ನಂತರ ಅಲ್ಲಿ ರಾಮ ಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಹಿಂದುಗಳು ಆರೋಪಿಸಿದ್ದರು. 1984ರಲ್ಲಿ ವಿಶ್ವ ಹಿಂದು ಪರಿಷತ್ ಆಂದೋಲನ ಶುರುಮಾಡಿತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ 1992ರ ಡಿಸೆಂಬರ್ 6ರಂದು ಕರಸೇವಕರು ಬಾಬ್ರಿ ಮಸೀದಿಯನ್ನು ಕೆಡವಿದರು.
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತಿತರ 48 ಮಂದಿ ಸೇರಿ ಸಂಚುರೂಪಿಸಿ ಭೂವಿವಾದ ವಿಚಾರಣೆಯ ಹಂತದಲ್ಲಿರುವಾಗಲೇ 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿಯನ್ನು ಕೆಡವಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here