Wednesday, October 18, 2023

ಕೊರೊನಾ ರಜೆ ಮುಕ್ತಾಯ: ಅಕ್ಟೋಬರ್ 1 ರಿಂದ ಪದವಿ ಕಾಲೇಜುಗಳು ಆರಂಭ..!

Must read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಕಾರಣದಿಂದ ಶಾಲಾ – ಕಾಲೇಜುಗಳು ಮುಚ್ಚಲಾಗಿದ್ದು ಅಕ್ಟೋಬರ್‌ 1 ರಿಂದ ರಾಜ್ಯದಲ್ಲಿ ಪದವಿ ಕಾಲೇಜು ಆರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಅಧಿಕೃತ ಸುತ್ತೋಲೆ ಇನ್ನೂ ಕೂಡಾ ಹೊರಡಿಸಿಲ್ಲ.
ಅನ್ಲಾಕ್ 4.0ನಲ್ಲಿ ಹಂತ ಹಂತವಾಗಿ ಶಾಲೆ-ಕಾಲೇಜು ತೆರೆಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 1ರಿಂದ ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ಆರಂಭವಾಗಲಿದೆ. ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳು ತೆರೆಯಲಿವೆ. ಇದರಂತೆ ಪದವಿ, ಪಿಯು, ಹೈಸ್ಕೂಲ್ ಬಳಿಕ ಪ್ರಾಥಮಿಕ ಶಾಲೆ ತೆರೆಯುವ ಚಿಂತನೆ ಮಾಡಲಾಗಿದೆ.

ಸಾಮಾನ್ಯ ವರ್ಷಗಳಲ್ಲಿ ಈ ವೇಳೆಗೆ ಶಾಲೆಗಳು ವರ್ಷದ ಅರ್ಧ ಅವಧಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಈ ಬಾರಿ ಕಡಿಮೆ ಅವಯ ಶೈಕ್ಷಣಿಕ ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಯೋಜನೆಯನ್ನು ಸಿದ್ಧಪಡಿಸಿದೆ. ಈಗಾಗಲೇ 4-5 ತಿಂಗಳು ಶಾಲೆ ಆರಂಭ ತಡವಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಪಠ್ಯ ಬೋಧನೆ ಅಸಾಧ್ಯವಾಗಿದೆ.

ಈ ವರ್ಷದ ಪಠ್ಯದಲ್ಲಿ ಶೇ.30ರಷ್ಟು ಕಡಿತ ಮಾಡಿ ಮಕ್ಕಳಿಗೆ ಅತ್ಯಗತ್ಯವಾದ ಪಠ್ಯ ಮಾತ್ರ ಉಳಿಸಿಕೊಳ್ಳಲು ಚಿಂತನೆ ಮಾಡಲಾಗಿದೆ. ಪಠ್ಯ ಕಡಿತ ಸಮಿತಿ ವರದಿ ಬಳಿಕ ಅಂತಿಮ ರೂಪುರೇಷೆ ಲಭಿಸಲಿದೆ. ಈಗಾಗಲೇ ರಾಜ್ಯದಲ್ಲಿ ಶುರುವಾಗಬೇಕಿದ್ದ ಶೈಕ್ಷಣಿಕ ತರಗತಿಗಳು ಕೋವಿಡ್ ಭೀತಿಯಿಂದ ಸ್ಥಗಿತವಾಗಿವೆ. ಈ ನಡುವೆ ಜುಲೈನಲ್ಲಿ ಆರಂಭ ಮಾಡಲು ಚಿಂತನೆ ನಡೆಸಲಾಗಿತ್ತು. ಆದರೆ, ಜೂನ್‍ನಲ್ಲಿ ಎಸ್‍ಎಸ್‍ಎಲ್ಸಿ ಪರೀಕ್ಷೆ, ದ್ವಿತೀಯ ಪಿಯುಸಿಯ ಕೊನೆಯ ಪರೀಕ್ಷೆ ನಡೆಸಬೇಕಾಗಿತ್ತು. ಹೀಗಾಗಿ ಜುಲೈ ಮೊದಲ ವಾರದಲ್ಲಿ ಶಾಲೆಗಳನ್ನ ಆರಂಭಿಸಲು ಯೋಜನೆ ರೂಪಿಸಲಾಗಿತ್ತು. ಈಗಾಗಲೇ ಶಾಲಾ-ಕಾಲೇಜುಗಳು ಆನ್ ಲೈನ್ ಪಾಠ ಪ್ರವಚನ ಆರಂಭಿಸಿವೆ. ಇದೀಗ ಶಾಲಾ-ಕಾಲೇಜು ಆರಂಭವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಸೆಪ್ಟೆಂಬರ್ ಅನ್‍ಲಾಕ್-3 ಮುಗಿಯಲಿದ್ದು, ಅನ್‍ಲಾಕ್- 4 ಶುರುವಾಗಲಿದೆ. ಹೀಗಾಗಿ ಎಲ್ಲರ ಚಿತ್ತ ಕೇಂದ್ರ ಸರ್ಕಾರದ ನಿರ್ಧಾರದತ್ತ ನೆಟ್ಟಿದೆ. ದೇಶದಲ್ಲಿ ಮೂರನೇ ಹಂತದ ಅನ್ಲಾಕ್ ನಿಯಮಗಳು ಅಂತ್ಯದಲ್ಲಿದ್ದು, ಸೆಪ್ಟೆಂಬರ್ 1 ರಿಂದ 4ನೇ ಹಂತದ ಅನ್ಲಾಕ್ ಮಾರ್ಗಸೂಚಿಗಳು ಜಾರಿಯಾಗಲಿದೆ. ಕೇಂದ್ರ ಸರ್ಕಾರ ಈ ಬಾರಿ ಯಾವುದಕ್ಕೆಲ್ಲ ವಿನಾಯಿತಿ ನೀಡಲಿದೆ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ಇದರ ನಡುವೆಯೇ ಶಾಲೆ ಆರಂಭಿಸಲು ಶೈಕ್ಷಣಿಕ ವರ್ಷದ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ.

ಶೈಕ್ಷಣಿಕ ವರ್ಷದ ಅವಧಿ ಕಡಿತವಾದ ಹಿನ್ನೆಲೆಯಲ್ಲಿ ಕಳೆದು ಹೋದ ಅವಧಿ ಸರಿದೂಗಿಸಲು ಶನಿವಾರ ಪೂರ್ಣ ಪ್ರಮಾಣದ ತರಗತಿಗಳನ್ನು ನಡೆಸುವ ಚಿಂತನೆ ಇದೆ. ಈ ಹೆಚ್ಚುವರಿ ಅವಧಿಯಲ್ಲಿ ನಿಗದಿತ ಪಠ್ಯ ಮುಗಿಸುವ ಯೋಜನೆ ಮಾಡಲಾಗಿದೆ. ಇದರೊಂದಿಗೆ ಅನೇಕ ಮಹಾ ಪುರುಷರ ಜಯಂತಿಗೆ ನೀಡಲಾಗುವ ರಜೆ ರದ್ದು ಮಾಡಿ ಈ ಸಮಯವನ್ನು ಬೋಧನೆಗೆ ಬಳಸಲು ಚಿಂತನೆ ನಡೆದಿದೆ.

ಶಾಲೆಗಳು ನಿಗದಿಯಂತೆ ನಡೆದಿದ್ದರೆ ಅನೇಕ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಈ ಎಲ್ಲಾ ಪರೀಕ್ಷೆ ಬದಲು ಮಿತವಾದ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ. ಕಿರುಪರೀಕ್ಷೆ, ಮಧ್ಯ ವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಕೈಬಿಟ್ಟು ಮಿತವಾದ ಪರೀಕ್ಷಾ ಪದ್ಧತಿ ಆಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ ಲಭಿಸಿದೆ.

ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಅಕ್ಟೋಬರ್‌ 1 ರಿಂದ ಪದವಿ ಕಾಲೇಜು ಆರಂಭವಾಗಲಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಇನ್ನು ಸ್ನಾತಕ, ಸ್ನಾತಕೋತ್ತರ ತರಗತಿಗಳು ಕೂಡಾ ಆರಂಭವಾಗಲಿದ್ದು ಸೆ. 1 ರಿಂದ ಆನ್ ಲೈನ್ ತರಗತಿ ಆರಂಭವಾಗಲಿದೆ ಎಂದು ಹೇಳಲಾಗಿದೆ. ಹಾಗೆಯೇ ಸದ್ಯಕ್ಕೆ ಶಾಲೆ ಹಾಗೂ ಪಿಯುಸಿ ತರಗತಿಗಳು ತೆರೆಯುವುದಿಲ್ಲ ಎನ್ನಲಾಗಿದೆ.

More articles

Latest article