Tuesday, October 31, 2023

ಕೇಂದ್ರ ಸರಕಾರದಿಂದ ಜನ ವಿರೋಧಿ ಧೋರಣೆ ಆರೋಪ: ಸಿ.ಪಿ.ಐ.ಎಂ. ಪ್ರತಿಭಟನೆ

Must read

ಬಂಟ್ವಾಳ: ಕೇಂದ್ರ ಸರಕಾರದಿಂದ ಜನವಿರೋಧಿ ನೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಾರತ ಕಮ್ಯೂನಿಷ್ಟ್ ಪಕ್ಷ (ಸಿಪಿಐಎಂ) ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಸಿಪಿಐಎಂ ಜಿಲ್ಲಾ ಮುಖಂಡ ರಾಮಣ್ಣ ವಿಟ್ಲ ಅವರು ಮಾತನಾಡಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಆ.24 ರಿಂದ ಆ.29 ರ ತನಕ ದೇಶವ್ಯಾಪಿ ಮುಷ್ಕರ ನಡೆಯುತ್ತಿದೆ. ಪ್ರಸ್ತುತ ದೇಶದಲ್ಲಿ ಬ್ರಿಟಿಷರಿಂದಲೂ ದೊಡ್ಡ ಮಟ್ಟದ ದಬ್ಬಾಳಿಕೆ ನಡೆಯುತ್ತಿದೆ. ಬಡವರು, ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದು ಹೇಳಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಕೊರೋನಾ ನಡುವೆ ಜನರಿಗೆ ಭದ್ರತೆ ಮತ್ತು ಧೈರ್ಯ ತುಂಬುವಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಕೊರೋನಾ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಸಾವಿರಾರು ಕಾರ್ಮಿಕರು ಪ್ರಾಣ ಕಳೆದುಕೊಂಡರು. ಕೈಗಾರಿಕೆಗಳು ಬಂದ್ ಆಗಿದೆ. ನಿರುದ್ಯೋಗ, ಆಹಾರ ಕೊರತೆ, ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುವಂತಾಗಿದೆ. ಆದರೆ ಕೇಂದ್ರ ಸರ್ಕಾರವು ಈ ಬಗ್ಗೆ ಯಾವುದೇ ಜಿಂತೆಯಿಲ್ಲದಂತೆ ವರ್ತಿಸುತ್ತಿದೆ ಎಂದರು. ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರೀಯ ವೆಚ್ಚವನ್ನು ಕನಿಷ್ಟ ಜಿಡಿಪಿಯ ಶೇ. ೩ರಷ್ಟು ಹೆಚ್ಚಿಸಬೇಕು. ಅಗತ್ಯ ವಸ್ತುಗಳ ಕಾಯ್ದೆಯನ್ನು ತೆಗೆದು ಹಾಕುವ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆಯನ್ನು ರದ್ದುಗೊಳಿಸಬೇಕು. ಈಗಿರುವ ಕಾರ್ಮಿಕ ಕಾನೂನುಗಳನ್ನು ರದ್ದು ಅಥವಾ ತಿದ್ದುಪಡಿಗೊಳಿಸಿ ಅಮಾನತು ಮಾಡುವ ಎಲ್ಲಾ ಪ್ರಸ್ತಾಪಗಳನ್ನು ಹಿಂದೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಡಿವೈಎಫ್‌ಐ ಮುಖಂಡರಾದ ಇಕ್ಬಾಲ್ ಹಳೆಮನೆ, ಸುರೇಂದ್ರ ಕೋಟ್ಯಾನ್, ತುಳಸೀದಾಸ್ ವಿಟ್ಲ, ಸಿಐಟಿಯು ಮುಖಂಡರಾದ ಉದಯಕುಮಾರ್, ಲೋಲಾಕ್ಷಿ ಬಂಟ್ವಾಳ, ಲಿಯಾಕತ್ ಖಾನ್, ಬಿ.ನಾರಾಯಣ, ದಿನೇಶ್ ಆಚಾರಿ, ನಾರಾಯಣ ಅಂಗ್ರಿ, ಗಣೇಶ್ ಪ್ರಭು, ಹಮೀದ್ ಕುಕ್ಕಾಜೆ, ವಿನಯ ನಡುಮೊಗರು ,ಬೆನ್ನಿ ವೇಗಸ್ ಮತ್ತಿತರರು ಉಪಸ್ಥಿತರಿದ್ದರು.

More articles

Latest article