Friday, April 5, 2024

ಕೋವಿಡಾಯಣ-9

ಕೋವಿಡ್-19 ಅನ್ನುವ ವಜ್ರಾಯುಧದ ಧಾಳಿಗೆ ನಿಸ್ತೇಜಗೊಂಡ ಇನ್ನೋಂದು ದುಡಿಮೆಯು ವರ್ಗ ಎಂದರೆ ಚಾಲಕರು. ಚಾಲಕರಲ್ಲಿ ದೊಡ್ಡಚಾಲಕ ಮತ್ತು ಸಣ್ಣಚಾಲಕ ಎಂಬ ಪ್ರಭೇದಗಳಿಲ್ಲ. ರಿಕ್ಷಾ ಚಾಲಕನ ದಿನದ ಗಳಿಕೆ ಮತ್ತು ಘನ ವಾಹನದ ಚಾಲಕನ ದಿನದ ಗಳಿಕೆ ಸಮಾನವೇ ಆಗಿದೆ. ಇಂದಿನ ಊಟಕ್ಕೆ ಇಂದು ದುಡಿದೇ ಆಗಬೇಕಾದ, ದುಡಿಮೆಯಿಲ್ಲದೇ ತೊಂದರೆಗೊಳಗಾದರೆ ಉಪವಾಸ ಬೀಳ ಬೇಕಾದವರ ಸಾಲಿನಲ್ಲಿ ಚಾಲಕರೂ ಸೇರುತ್ತಾರೆ. ಲಾರಿಗಳಿಗೆ ಆಹಾರ ಮತ್ತು ಕೃಷಿ ಸಾಮಗ್ರಿ ಸಾಗಾಟಕ್ಕೆ ನಿರ್ದಿಷ್ಟ ರಸ್ತೆಗಳ ಮೂಲಕ ಸಂಚರಿಸಲು ಅವಕಾಶವಿತ್ತು. ಆದರೆ ಅಂತಹ ಲಾರಿಗಳ ಸಂಚಾರ ಒಂದೊಂದು ರಸ್ತೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರವೇ ಇರುತ್ತಿದ್ದು ಉಳಿದ ಲಕ್ಷಾಂತರ ಮಂದಿ ಲಾರಿ ಚಾಲಕರು ದುಡಿಮೆಯಿಂದ ವಂಚಿತರಾದರು. ಪಿಕ್ ಅಪ್, ಆಪೆ, ಲಾರಿಗಳು, ಟ್ರಕ್‌ಗಳು, ಬಸ್‌ಗಳು, ರಿಕ್ಷಾಗಳು ರಸ್ತೆಗಿಳಿಯದೆ ಲಾಕ್ ಡೌನ್ ಅವಧಿಯಲ್ಲಿ ಕಷ್ಟಗಳಿಗೊಳಗಾದರೆ, ಖಾಸಗಿ ಏರ್‌ಲಾಯಿನ್ಸ್‌ನ ಸಿಬ್ಬಂದಿಗಳಿಗೂ ಇದೇ ದುರ್ಗತಿ.
ಲಾಕ್‌ಡೌನ್ ನಂತರದಲ್ಲೂ ಡ್ರೈವರ್‌ಗಳ ಸಮಸ್ಯೆಗಳಿಗೆ ಪರಿಹಾರವಿಲ್ಲ. ಯಾಕೆಂದರೆ ಬಸ್ ಓಡಿದರೂ ಪ್ರಯಾಣಿಕರ ಕೊರತೆ ಮತ್ತು ಅಂತರ ಕಾಯುವ ಅಗತ್ಯತೆಗಳು, ಸುರಕ್ಷತಾ ಕ್ರಮಗಳು ಪ್ರಯಾಣಿಕರನ್ನು ಬಸ್‌ಗಳಿಂದ ದೂರವೇ ಇರಿಸಿತು. ಸಂಚಾರಿಗಳಿಲ್ಲದೇ ಬಸ್‌ಗಳನ್ನು ಓಡಿಸಿದರೆ, ಬಸ್ ಮಾಲಕರಿಗೆ ನಷ್ಟದಾಯಕವಾಗುವುದರಿಂದ ಅವರು ಬಸ್ ಓಡಾಟದಲ್ಲಿ ಆಸಕ್ತಿ ತೋರುವಂತಿಲ್ಲ. ವಿವಾಹ, ಮುಂಜಿ, ಉಪನಯನ, ಸೀಮಂತ ಹೀಗೆ ಬಳಕೆಗೆ ಬರುತ್ತಿದ್ದ ಟೂರಿಸ್ಟ್ ಗಾಡಿಗಳು ಪೂರ್ಣತಃ ಶೆಡ್ ಒಳಗಡೆಯೇ ಉಳಿದು ಅದರ ಚಾಲಕರೂ ಉಪವಾಸ ಆಗಲು ಕೋವಿಡ್ ಕಾರಣವಾಯಿತು. ಹಳ್ಳಿಯ ರಸ್ತೆಗಳಲ್ಲಿ ಓಡಾಡುವ ಸಣ್ಣ ಪುಟ್ಟ ವಾಹನಗಳಿಗೂ, ರಿಕ್ಷಾಗಳಿಗೂ ಬಾಡಿಗೆಯಿಲ್ಲದಂತಾಗಿ ಅದರ ಚಾಲಕರ ಸ್ಥಿತಿಯೂ ಶೋಚನೀಯವೇ ಆಯಿತು. ಕಾರ್ಯಕ್ರಮಗಳಿದ್ದರೆ ಜನರ ಓಡಾಟ ಹೆಚ್ಚು. ರಿಕ್ಷಾದಿಂದ ಹಿಡಿದು ಘನವಾಹನಗಳ ವರೆಗೆ ಎಲ್ಲದಕ್ಕೂ ಬೇಡಿಕೆ ಸಹಜ. ಆದರೆ ಕಾರ್ಯಕ್ರಮಗಳೇ ಇಲ್ಲ, ಇದ್ದರೂ ಸೀಮಿತಗೊಂಡ ಆಮಂತ್ರಿತರು ಮತ್ತು ಉಪಸ್ಥಿತರು. ಅವರು ಸ್ವಂತ ಗಾಡಿ ಹೊಂದಿರುವವರಾಗಿದ್ದರೆ ಚಾಲಕರಿಗೆ ಕರೆಯಿರುವುದಿಲ್ಲ. ಎಲ್ಲ ಕಾರಣಗಳು ವಾಹನಗಳ ಬಾಡಿಗೆಯ ಬೇಡಿಕೆಗೆ ಅಡ್ಡಿಯಾದುವು. ಸಂತೆಗಳಿದ್ದರೆ, ಜಾತ್ರೆಗಳಿದ್ದರೆ ರಿಕ್ಷಾಗಳಿಗೆ ಸ್ವಲ್ಪ ಮಟ್ಟಿನ ಬಾಡಿಗೆ. ಆದರೆ ಅವುಗಳೇ ಇಲ್ಲವಾದರೆ ರಿಕ್ಷಾ ಏಕೆ?. ರಿಕ್ಷಾ ಡ್ರೈವರ್‌ಗಳು ಲಾಕ್ ಡೌನ್ ನಂತರದಲ್ಲೂ ಸಂಪಾದನೆಯಲ್ಲಿ ಪಾತಾಳಕ್ಕೆ ಕುಸಿದರು. ಆಸ್ಪತ್ರೆಗಳಿಗೆ ಜನರ ಓಡಾಟ ಕಡಿಮೆಯಾಗಿರುವುದು, ಶಾಲೆಗಳ ಪುನರಾರಂಭವಾಗದೇ ಇರುವುದು, ಮಠ ಮಂದಿರಗಳಿಗೆ ಹೋಗುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖ, ಬಹುತೇಕ ಮನೆಗಳು ತಮಗೆ ಬೇಕಾದ ಸಾಮಾಗ್ರಿ ಔಷಧಿ ಇತ್ಯಾದಿಗಳನ್ನು ದೀರ್ಘಾವಧಿಗೆ ಬೇಕಾಗುವಷ್ಟನ್ನು ಒಮ್ಮಲೇ ಖರೀದಿಸಿ ಸಂಗ್ರಹಿಸುತ್ತಿರುವುದು ಇವೆಲ್ಲದರಿಂದಾಗಿ ರಿಕ್ಷಾ ಚಾಲಕರು ಕೆಲಸ ದೊರೆಯದೇ ಕಂಗಾಲಾಗಿದ್ದಾರೆ.
ಒಂದೆಡೆ ಬ್ಯಾಂಕ್ ಕಂತು, ಮತ್ತೊಂದೆಡೆ ತೆರಿಗೆ, ವಾಹನಗಳ ದುರಸ್ತಿ, ವಿಮೆ ಪಾವತಿ ಈ ಎಲ್ಲಾ ಹಂತUಳಲ್ಲೂ ವಾಹನ ಚಾಲಕರು ಅಥವಾ ಮಾಲಕರು ಆರ್ಥಿಕವಾಗಿ ಪರದಾಡುವಂತಾಯಿತು. ಶಾಲಾ ವಾಹನಗಳನ್ನಿರಿಸಿಕೊಂಡೇ ಜೀವನ ನಿರ್ವಹಿಸುತ್ತಿದ್ದ ಅಸಂಖ್ಯ ಚಾಲಕರ ಕಥೆಯೂ ಬೇರೆಯೇ ಆಗಿ ಉಳಿಯಲಿಲ್ಲ. ಎಲ್ಲ ಚಾಲಕರೂ ಸಮಾನ ದು:ಖಿಗಳೇ ಆದರು.
ಬದಿಯಡ್ಕದಲ್ಲಿ ಓರ್ವ ಉದಾರಹೃದಯಿ ವಾಹನ ಮಾಲಕರು ತಮ್ಮ ವಾಹನಗಳ ಓಡಾಟ ನಿಂತಿದ್ದರೂ, ತಮ್ಮ ಎಲ್ಲ ಚಾಲಕರಿಗೂ ಬದುಕಿಗೆ ನೆರವಾದರು. ನಿರ್ದಿಷ್ಠ ಮೊಬಲಗಿನ ವೇತನ ಮತ್ತು ಆಹಾರದ ಕಿಟ್ ವಿತರಿಸಿ ತಮ್ಮ ಔದಾರ್ಯವನ್ನು ಮೆರೆದರು. ಹೀಗೆ ಔದಾರ್ಯ ಮೆರೆದವರು ಬಹಳಷ್ಟಿರಬಹುದಾದರೂ ಚಾಲಕರು ತಮ್ಮ ಸಹಜ ಬದುಕಿನಲ್ಲಿ ಜೀವನ ನಿರ್ವಹಣೆಗಿಂತ ಹೊರತಾದುದೇನನ್ನೂ ಸಾಧಿಸುವಂತಿರಲಿಲ್ಲ ಎನ್ನುವುದು ವಾಸ್ತವ ಸಂಗತಿ. ಹಾಗೆಂದು ಎಲ್ಲ ಚಾಲಕರಿಗೂ ಔದಾರ್ಯದ ಕೊಡುಗೆ ಅವರ ಮಾಲಕರಿಂದ ಒದಗಿ ಬಂದಿದೆ ಎನ್ನುವಂತೆಯೂ ಇಲ್ಲ. ಮಾಲಕರೇ ಸಂಕಷ್ಟದ ಹಡಗಿನಲ್ಲಿ ತೇಲುತ್ತಿರುವಾಗ, ಇತರರ ಸಂಕಷ್ಟಗಳಗೆ ಅವರು ತಮ್ಮ ಭುಜವನ್ನು ಚಾಚಲು ಹೇಗೆ ಸಾಧ್ಯ? ಇಂತಹ ಸಂದರ್ಭಗಳಿದ್ದಾಗ ಚಾಲಕರಿಗೆ ರೋದನೀಯ ದಿನಗಳೇ ಅಧಿಕ.

— ಮುಂದುವರಿಯುವುದು

ರಮೇಶ ಎಂ ಬಾಯಾರು ಎಂ.ಎ, ಬಿಎಡ್,
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....