Wednesday, April 17, 2024

ಕೋವಿಡಾಯಣ-7

ಶೈಕ್ಷಣಿಕ ಕ್ಷೇತ್ರವು ಕೋವಿಡ್-19ರ ಮಹಾ ಹೊಡೆತದಿಂದ ಕಂಗೆಟ್ಟಿದೆ. ಶಿಕ್ಷಣ ಕ್ಷೇತ್ರವು ಮಕ್ಕಳ ದಾಖಲಾತಿ, ಬೋಧನಾ ಪ್ರಕ್ರಿಯೆ, ಪರೀಕ್ಷೆ, ಶಾಲಾರಂಭ ಈ ಎಲ್ಲ ವಲಯಗಳಲ್ಲೂ ಯಾವುದೇ ಹೆಜ್ಜೆಯನ್ನು ಧೈರ್ಯದಿಂದ ಮುಂದಿಡುವಂತಿಲ್ಲ. ಕೋವಿಡ್ ಈ ನೆಲದ ಮೇಲೆ ಎಷ್ಟು ಕಾಲ ಬಾಳುತ್ತದೆ ಎಂಬುದನ್ನು ಭಗವಂತನಷ್ಟೇ ಬಲ್ಲ. ಆದರೆ ಕೋವಿಡ್ ಶೂನ್ಯವಾಗದೆ ಹೋದರೆ ನಮ್ಮ ಭಾವೀ ಜನಾಂಗದ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಹೊಡೆತ ಖಂಡಿತ. ಕೋವಿಡ್ ಹೊಡೆತದಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಮಕ್ಕಳ ಶಿಖ್ಷಣದ ನಿರಂತರತೆಯನ್ನು ರಕ್ಷಿಸುವುದಕ್ಕಾಗಿ, ನಮ್ಮ ಶಾಲಾ ಕಾಲೇಜು ಶಿಕ್ಷಣದ ಕಲ್ಪನೆಗಳಿಂದ ಹೊರಬಂದು ನಮ್ಮ ಭಾವೀ ಪೀಳಿಗೆಯನ್ನು ರೂಪಿಸ ಬಲ್ಲ ಪರ್ಯಾಯ ಶೈಕ್ಷಣಿಕ ಯೋಚನೆಗಳನ್ನು ಹೆತ್ತವರು ಮತ್ತು ಸಮುದಾಯ ಯೋಚಿಸಲೇ ಬೇಕಾದ ಕಾಲಘಟ್ಟವೊಂದು ನಮ್ಮ ಮುಂದಿದೆ.

ಶಾಲಾ ಕಾಲೇಜುಗಳಿಲ್ಲದ ಆ ದಿನಗಳಲ್ಲಿ ನಮ್ಮಲ್ಲಿ ವೈದ್ಯರಿದ್ದರು, ಶಿಲ್ಪಿಗಳಿದ್ದರು, ಕಮ್ಮಾರರಿದ್ದರು, ಕೈಗಾರಿಕೆಗಳಿದ್ದುವು, ಆರ್ಥಿಕ ವ್ಯವಹಾರಗಳಿದ್ದುವು. ಇಂದಿನ ಎಲ್ಲ ಕೆಲಸಗಳು ಬೇರೆ ಬೆರೆ ಹೆಸರಿನಲ್ಲಿ ಅಂದೂ ನಡೆಯುತ್ತಿದ್ದುವು. ಇಂದಿನ ತಂತ್ರಜ್ಞಾನ ಅಂದು ಇರಲಿಲ್ಲ. ಅಂದು ಮಾಹಿತಿಗಳ ಆಕರಗಳ ಕೊರತೆಯೂ ಇತ್ತು. ಇಂದಿನ ಯುಗ, ಮಾಹಿತಿ ಯುಗ. ಇಂದು ಏನನ್ನು ಬೇಕಾದರೂ ಹೇಗೆ ಬೇಕಾದರೂ ಪಡೆದುಕೊಳ್ಳುವ, ವಿಷಯಗಳನ್ನು ಅರಿತುಕೊಳ್ಳುವ ವಿಪುಲ ಅವಕಾಶಗಳಿವೆ. ನಮ್ಮ ನಡುವೆ ಎಲ್ಲ ವಿಧದ ವೃತ್ತಿ ಪರರು ಹಳ್ಳಿ ಹಳ್ಳಿಗಳಲ್ಲೂ ಇದ್ದಾರೆ. ಇವರೆಲ್ಲರ ಪೂರ್ಣ ಪ್ರಮಾಣದ ನೆರವು ಪಡೆದು ನಮ್ಮ ಪೀಳಿಗೆಯನ್ನು ಮನೆಯಂಗಳದಲ್ಲಿಯೇ ಅಥವಾ ನಮ್ಮ ವಠಾರದಲ್ಲಿಯೇ ಶೈಕ್ಷಣಿಕವಾಗಿ ಬೆಳೆಸುವ ಚಿಂತನೆಗೆ ಇಂಬು ಕೊಡಬಹುದಾದ ಕಾಲವಿದು. ಕೋವಿಡ್ ನೆಪದಲ್ಲಿ ನಮ್ಮ ಮಕ್ಕಳನ್ನು ಮಹಾ ಕೋವಿದರನ್ನಾಗಿಸುವ, ಅತ್ಯಂತ ನಾವೀನ್ಯತೆಯ ಚಿಂತನೆಗಳನ್ನು ನಾವೇಕೆ ಮಾಡಬಾರದು? ನಮ್ಮ ಯೋಚನೆಗಳನ್ನು ಒಂದೆಡೆ ಸೇರಿ ಇತರರೊಂದಿಗೆ ಹಂಚುವ, ಯೋಚನೆಯನ್ನು ಯೋಜನೆಯನ್ನಾಗಿಸುವ ಪ್ರಯತ್ನಗಳನ್ನು ನಾವು ಏಕೆ ಮಾಡಬಾರದು?

ಹೆಚ್ಚಿನ ಗಳಿಕೆಯ ಉದ್ದೇಶದಿಂದ ನಗರ ವಲಸೆ, ವಿದೇಶ ವಲಸೆ ಒಂದು ಕಾಲದಲ್ಲಿ ಆರಂಭಗೊಂಡಿತು. ಇಂದು ಕೋವಿಡ್ ವಲಸೆ ಹೋದವರಲ್ಲಿ ಬಹುಭಾಗವನ್ನು ವಾಪಸ್ ಊರಿಗೆ ಕರೆಸಿಕೊಂಡಿದೆ. ಅವರಿಗೆ ಹಿರಿಯರ ಜೊತೆಯ ಬದುಕಿನ ಮರುಸ್ಮರಣೆಯನ್ನು ಕೋವಿಡ್ ಮಾಡುತ್ತಿದೆ. ಕೋವಿಡ್ ಎಲ್ಲವನ್ನೂ ವ್ಯವಸ್ಥಿತಗೊಳಿಸದೆ ನಮ್ಮೂರಿನಿಂದ ಹೊರಡುವಂತೆ ಕಾಣುವುದಿಲ್ಲ. ಶೈಕ್ಷಣಿಕ ವ್ಯವಸ್ಥೆಯನ್ನು ಮರು ರೂಪಿಸುವ ಮೂಲಕವೇ ಕೋವಿಡ್‍ನೊಂದಿಗೆ ನಮ್ಮ ಮಕ್ಕಳು ಬಾಳುವಂತೆ ಆಗಬೇಕು. ವ್ಯಾಪಾರೀಕರಣದಿಂದ ನಮ್ಮ ಶಿಕ್ಷಣವು ಮುಕ್ತಿಯನ್ನು ಪಡೆಯಬೇಕು. ಕಂಠಪಾಠದ ಕಲಿಕೆ ತೊಲಗಬೇಕು. ಅಂಕಗಳನ್ನೇ ಪುರಸ್ಕರಿಸುವ, ರ್ಯಾಂಕ್‍ವಿಜೇತರನ್ನಷ್ಟೇ ಗೌರವಿಸುವ ನಮ್ಮ ಮನೋಭಾವ ಕಳೆಯಬೇಕು. ಪರಿಸರ ಪ್ರೇಮ, ಹಿರಿತನಕ್ಕೆ ಗೌರವ, ಅನುಕಂಪ, ತಾಳ್ಮೆ, ಸ್ವಾವಲಂಬನೆ, ಸರಳತೆ, ಮಮಕಾರಗಳು ಪರಮ ಗುಣಗಳು. ಇಂತಹ ಪರಮ ಗುಣಗಳು ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಜೊತೆಗೆ ನಮ್ಮ ಮಕ್ಕಳು ತಮ್ಮ ಬದುಕು ಕಟ್ಟುವ, ಜೀವಿತವನ್ನು ಸಂತಸದಿಂದ ನಿರ್ವಹಿಸಲು ಅಗತ್ಯವಾದ ಆರ್ಥಿಕ ಶಕ್ತಿಯನ್ನು ಹೊಂದುವ ಕುಶಲಿಗಳೂ ಆಗಬೇಕು. ಈ ಎಲ್ಲ ತಳಹದಿಯ ಮೇಲೆ ನಾವೇಕೆ ಹೊಸ ಶೈಕ್ಷಣಿಕ ಸಿದ್ಧಾಂತವನ್ನು ರೂಪಿಸಬಾರದು?

ನಮ್ಮ ಮಕ್ಕಳಿಗೆ ಪೂರ್ವ, ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಿಕ್ಷಣವನ್ನು ಒದಗಿಸಲು ಬಹುತೇಕ ತಾಯಂದಿರು ಸಮರ್ಥರಿದ್ದಾರೆ. ಸಾಮಥ್ರ್ಯ ಕಡಿಮೆಯಿರುವಲ್ಲಿ ಸಾಮಥ್ರ್ಯವುಳ್ಳವರ ಬೆಂಬಲ ಜೋಡಬೇಕು. ನಾಲ್ಕಾರು ಮನೆಯ ಮಕ್ಕಳನ್ನು ಒಂದೆಡೆ ಸೇರಿ ಪ್ರೌಢ ಶಿಕ್ಷಣವನ್ನು ನೀಡಲು ಅಗತ್ಯವಿರುವ ಸಮರ್ಥರು ನಮ್ಮೂರಲ್ಲೇ ಇದ್ದಾರೆ. ಉನ್ನತ ವಿದ್ಯಾಭ್ಯಾಸಕ್ಕೆ ಗ್ರಂಥಾಲಯಗಳ ಸಬಲೀಕರಣ, ತಂತ್ರಜ್ಞಾನದ ನೆರವುಗಳು ಮತ್ತು ಪರಿಣತರ ಮಾರ್ಗದರ್ಶನಗಳನ್ನು ಜೋಡಿಸಿದರೆ ನಮ್ಮ ಮಕ್ಕಳು ವಿದ್ಯಾವಂತರಾಗಲು ಏನೇನೂ ಅಡಚಣೆಯಾಗದು. ಇದೆಲ್ಲವೂ ಬರೆಯಲು, ಓದಲು ಚಂದ ಅನಿಸಬಹುದು, ಯಾಕೆಂದರೆ ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು? ಎಂಬ ಯೋಚನೆಯೇ ನಮ್ಮನ್ನು ಇನ್ನೂ ಅವ್ಯವಸ್ಥೆಗಳ ಕೂಪದಲ್ಲೇ ಉಳಿಸಿದೆ.

— ಮುಂದುವರಿಯುವುದು

✍️ರಮೇಶ ಎಂ. ಬಾಯಾರು ಎಂ.ಎ., ಬಿಎಡ್,

ರಾಜ್ಯಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕರು

‘ನಂದನ’ ಕೇಪು- 574243; ಮೊ-9448626093

More from the blog

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಮತದಾನ ಪ್ರಕ್ರಿಯೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಬಾರಿಯಂತೆ ಸೆಕ್ಟರ್‌ ಅಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಮನೆ-ಮನೆಗೆ ತೆರಳಿ ಮತದಾನ ಮಾಡಿಸುತ್ತಿದೆ. ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85...

ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ : ಬಜರಂಗದಳ, ವಿ.ಹಿಂ.ಪರಿಷತ್ ಕಲ್ಲಡ್ಕ ಪ್ರಖಂಡದಿಂದ ಖಂಡನೆ

ಬಂಟ್ವಾಳ: ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ನಡೆಸಿದ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ...

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...