Thursday, October 19, 2023

ನಿಸರ್ಗ ಬಿಂದು

Must read

ನನಗೆ ಆಶ್ಚರ್ಯವಾದದ್ದು ಯಾಕೆ ಗೊತ್ತಾ? ಮೀನುಗಳಿಗೂ ಆ ಗುಡ್ಡಬೆಟ್ಟಗಳಲ್ಲಿರುವ ಇರುವೆಗಳಿಗೂ ಏನು ಸಂಬಂಧ ಅನ್ನುವುದು. ಇರುವೆಗಳು ಮೀನುಗಳಿಗೆ ಆಹಾರ ಒದಗಿಸಿಕೊಡುತ್ತವಂತೆ. ಏನಾಶ್ಚರ್ಯ! ಹೌದು, ಲಡ್ಡಾಗಿ(ಲಡ್ಡು-ಕುಂಬು)ಹೋದ ಮರಗಿಡಗಳನ್ನು ಹಾಗೆಯೇ ಕ್ರಿಮಿಕೀಟಾದಿಗಳನ್ನು ಈ ಇರುವೆಗಳು ತಿಂದು ಅವುಗಳನ್ನು ಕರಗಿಸುತ್ತವೆ ಹಾಗೂ ಪುಡಿಗಟ್ಟುತ್ತವೆ. ಮಳೆಗಾಲದಲ್ಲಿ ಹರಿದುಹೋಗುವ ನೀರಿನಿಂದಾಗಿ ಇವೆಲ್ಲವೂ ಸಮುದ್ರ, ಹೊಳೆ, ನದಿ ಇತ್ಯಾದಿಗಳನ್ನು ಸೇರಿಕೊಳ್ಳುತ್ತದೆ. ಇದು ಇರುವೆಗಳಿಂದಾಗಿ ಮೀನುಗಳಿಗೆ ಆಹಾರವನ್ನು ಒದಗಿಸಿಕೊಟ್ಟಂತಾಗುತ್ತದೆ.
ನಮಗೆ ಹಳ್ಳಿಯಲ್ಲಿರುವಾಗ ದಾರೆಪೀರೆ, ಸೌತೆಕಾಯಿ, ಕುಂಬಳಕಾಯಿ, ಚೀನಿಕಾಯಿ ಮೊದಲಾದ ಬೀಳಲುಗಳಲ್ಲಾಗುವ ತರಕಾರಿಗಳನ್ನು ಬೆಳೆಸುವ ಹುಚ್ಚು. ಆದರೆ, ಆ ಹುಳಗಳ ಸಮಸ್ಯೆ ಯಾರಿಗಾದೀತು ಹೇಳಿ; ಎಲೆಗಳೆಲ್ಲ ಚುರುಟಿಕೊಂಡು ಮಿಡಿಗಳೆಲ್ಲಾ ಕೆಳಗೆ ಬೀಳುತ್ತಿದ್ದವು. ಆಗ ಕ್ರಿಮಿನಾಶಕಗಳು ಅಷ್ಟೊಂದು ಚಾಲ್ತಿಯಲ್ಲಿರಲಿಲ್ಲ, ಏನಿದ್ದರೂ ಎಲೆಗಳಿಗೆಲ್ಲಾ ಬೂದಿ ಹಾರಿಸಿಬಿಡುವುದು. ನಮ್ಮಮ್ಮ ಈ ಹುಳಗಳನ್ನು ನಾಶಮಾಡುವ ಇನ್ನೊಂದು ಉಪಾಯ ಹೇಳಿಕೊಟ್ಟಿದ್ದರು; ಚಗಳಿ(ಉರಿ) ಇರುವೆಗಳಿರುವ ಮರ ಹಾಗೂ ತರಕಾರಿ ಚಪ್ಪರಗಳಿಗೆ ನೇರವಾಗಿ ಜೋಡಿಸಿ ಹುರಿಹಗ್ಗವನ್ನು ಕಟ್ಟುವುದು. ಚಗಳಿ ಇರುವೆಗಳು ಆ ಹಗ್ಗದ ಮೂಲಕ ತರಕಾರಿ ಚಪ್ಪರಕ್ಕೆ ಬಂದು ಹುಳಗಳನ್ನೆಲ್ಲಾ ತಿನ್ನುತ್ತಿದ್ದವು; ಅಥವಾ ಆ ಇರುವೆಗಳ ಗೂಡು(ಉರಿತ್ತ ಮೂಡೆ-ತುಳು)ಗಳಿರುವ ಗೆಲ್ಲುಗಳನ್ನು ಚಪ್ಪರದ ಮೇಲಿಡುವ ಕ್ರಮವೂ ಇತ್ತು. ಎಂತಹ ಸುಲಭೋಪಾಯ ನೋಡಿ! ಚಪ್ಪರದಲ್ಲಿರುವ ಕ್ರಿಮಿಗಳೆಲ್ಲಾ ಚಗಳಿ ಇರುವೆಗಳಿಗೆ ಆಹಾರವಾಗಿಬಿಡುತ್ತದೆ! ಅಲ್ಲಿಗೆ ಸಮಸ್ಯೆ ಪರಿಹಾರ.

✍️ರಾಜಮಣಿ ರಾಮಕುಂಜ

More articles

Latest article