Wednesday, October 18, 2023

ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ: 5300 ವಿದ್ಯಾರ್ಥಿಗಳು,17 ಪರೀಕ್ಷಾ ಕೇಂದ್ರ

Must read

ಬಂಟ್ವಾಳ : ಜೂ. 25 ರಿಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ 5300 ವಿದ್ಯಾರ್ಥಿಗಳು17 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸುರಕ್ಷೆಯ ದೃಷ್ಟಿಯಿಂದ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆಯ ಜೊತೆಗೆ ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳು‌‌ ಕೂಡ ಸಾಥ್ ನೀಡಲಿದೆ ಎಂದ ಅವರು, ಕೋವಿಡ್ 19 ರ ಕಾರಣಕ್ಕೆ ತಾಲೂಕಿನ 33 ವಿದ್ಯಾರ್ಥಿಗಳು ಹೊರ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲಿದ್ದು, ಬೇರೆ ತಾಲೂಕು ಹಾಗೂ ಜಿಲ್ಲೆಗಳ 124 ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಕೇರಳ ರಾಜ್ಯದ 112 ವಿದ್ಯಾರ್ಥಿಗಳು ತಾಲೂಕಿನಲ್ಲಿ‌ ಪರೀಕ್ಷೆ ಬರೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ 18 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ, ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಮಂಚಿ ಹಾಗೂ ಬಂಟ್ವಾಳ ಎಸ್ ವಿಎಸ್ ನಲ್ಲಿ ಉಪಕೇಂದ್ರಗಳನ್ನು ತೆರೆಯಲಾಗಿದೆ. ಜ್ವರ, ಕೆಮ್ಮು ಹಾಗೂ ನೆಗಡಿಯ ಲಕ್ಷಣ ಕಂಡು ಬಂದಲ್ಲಿ ಪ್ರತೀ ಕೇಂದ್ರಗಳಲ್ಲಿ ಸಜ್ಜುಗೊಳಿಸಲಾಗಿರುವ ವಿಶ್ರಾಂತಿ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗುತ್ತದೆ.
ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿದಿನ ವಿದ್ಯಾರ್ಥಿ ಕುಳಿತುಕೊಳ್ಳುವ ಸ್ಥಳವನ್ನು ಸ್ಯಾನಿಟೈಸರ್ ಮಾಡಲಾಗುತ್ತದೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕಾಗಿ ಸ್ಕೌಟ್, ಗೈಡ್ಸ್ ಶಿಕ್ಷಕರ ತಂಡವನ್ನು ನಿಯೋಜಿಸಲಾಗಿದೆ. ಪ್ರತೀ ವಿದ್ಯಾರ್ಥಿಗೆ ಮಾಸ್ಕ್ , ಸ್ಯಾನಿಟೈಸರ್ ನೀಡುವುದು, ಥರ್ಮಲ್ ಗನ್ ಮೂಲಕ ಉಷ್ಣಾಂಶ ಪರೀಕ್ಷೆ ನಡೆಸುವ ಕಾರ್ಯ ಈ ತಂಡ ಮಾಡಲಿದೆ ಎಂದರು. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ವಿದ್ಯಾರ್ಥಿಗಳು ಅಗತ್ಯವಿರುವ ಬಿಸಿನೀರು ಹಾಗೂ ಟಿಫಿನ್ ತರಲು ಅನುಮತಿ‌ ನೀಡಲಾಗಿದೆ ಎಂದರು.

ಶಿಕ್ಷಣ ಇಲಾಖೆ ನೀಡಿರುವ ಅಂಕಿ ಅಂಶದಂತೆ 781 ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ, 1952 ವಿದ್ಯಾರ್ಥಿಗಳು ಪೋಷಕರ‌ ಜೊತೆಯಲ್ಲಿ 1415 ವಿದ್ಯಾರ್ಥಿಗಳು ಸಾರ್ವಜನಿಕ ಸಾರಿಗೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲಿದ್ದಾರೆ. ಇದರ ಜೊತೆಯಲ್ಲಿ ಸಾರಿಗೆ ವ್ಯವಸ್ಥೆ ವಂಚಿತ 438 ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯೇ 29 ವಾಹನಗಳ ಮೂಲಕ ಪ್ರತ್ಯೇಕ ವಾಹನದ ವ್ಯವಸ್ಥೆ ಕಲ್ಪಿಸಿದೆ. ಸಾರಿಗೆ ವ್ಯವಸ್ಥೆಗೆ ಮೂಡಬಿದ್ರೆ ಆಳ್ವಾಸ್ ವಿದ್ಯಾ ಸಂಸ್ಥೆ 10 ಬಸ್ಸು, ವೃಷಭ ಹಾಗೂ ಶುಭಲಕ್ಷ್ಮೀ ಸಂಸ್ಥೆ ತಲಾ 4 ಬಸ್ಸು, ಜನಹಿತ ವಿದ್ಯಾ ಸಂಸ್ಥೆ 4, ದಡ್ಡಲಕಾಡು ಸರ್ಕಾರಿ ಶಾಲೆ 3 , ಸೈಂಟ್ ರೀಟಾ ವಿಟ್ಲ ‌2 ಹಾಊ ಅಲ್‌ಮದೀನ ಹಾಗೂ ಸೂರಜ್ ವಿದ್ಯಾ ಸಂಸ್ಥೆಗಳು ತಲಾ ಒಂದೊಂದು ವಾಹನವನ್ನು ನೀಡಿದ್ದು, ಮಕ್ಕಳ ಸಾಗಾಟಕ್ಕೆ‌ ಅನುಕೂಲವಾಗಿದೆ ಎಂದರು. ಸಾರಿಗೆ ವ್ಯವಸ್ಥೆಯಲ್ಲಿ ಲೋಪ ಬಾರದಂತೆ ಮುತುವರ್ಜಿ‌ವಹಿಸಲು ರೂಟ್ ಆಫೀಸರ್ ಗಳನ್ನು‌ ನಿಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್ ತಿಳಿಸಿದ್ದಾರೆ.

More articles

Latest article