Tuesday, October 31, 2023

ಪುತ್ತೂರಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಿಂದ ತರಬೇತಿ ಕಾರ್ಯಾಗಾರ

Must read

ಪುತ್ತೂರು: ಯಾವುದೇ ಪ್ರಕೃತಿ ವಿಕೋಪಗಳು ನಮಗೆ ಮುನ್ಸೂಚನೆ ಕೊಟ್ಟು ಉಂಟಾಗುವುದಿಲ್ಲ ಮತ್ತು ಇವುಗಳನ್ನು ಸಂಪೂರ್ಣ ತಡೆಯಲು ಸಾಧ್ಯವಿಲ್ಲ, ಆದರೆ ನಮಗೆ ಸರಿಯಾದ ಮಾಹಿತಿ ತರಬೇತಿಗಳಿದ್ದರೆ ಅದರಿಂದಾಗುವ ತೊಂದರೆಗಳನ್ನು ಕಡಿಮೆಮಾಡಬಹುದು. ಅದಕ್ಕಾಗಿ ನಾವು ಯಾವುದೇ ಸಮಯದಲ್ಲಿ ಸರಿಯಾದ ತರಬೇತಿ ಪಡೆದು ಸಿದ್ಧರಾಗಿರುವುದು ತುಂಬಾ ಅಗತ್ಯ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡೆಂಟ್ ಗೋಪಾಲ್ ಮೀನಾ ಗುಂಟೂರು ಹೇಳಿದ್ದಾರೆ.

ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ಪೌರ ರಕ್ಷಣಾ ಪಡೆ ಪುತ್ತೂರು ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಹಾಗೂ ರೋಟರಿ ಪುತ್ತೂರು ಸೆಂಟ್ರಲ್ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್, ಪುತ್ತೂರು ಇದರ ಸಹಯೋಗದೊಂದಿಗೆ ಜೂ.26ರಂದು ನಡೆದ ಪೌರ ರಕ್ಷಣಾ ದಳದ ಸದಸ್ಯರ ವಿಪತ್ತು ನಿರ್ವಹಣಾ ತರಬೇತಿಯನ್ನು ಉದ್ಘಾಟಿಸಿ ಮಾತ‌ನಾಡಿದರು.
ಜನರ ರಕ್ಷಣೆ ಮಾಡುವುದು ಒಂದು ಪುಣ್ಯದ ಕೆಲಸ. ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತಾ ಇತರರ ರಕ್ಷಣೆ ಮಾಡಬೇಕಾದುದು ತುಂಬಾ ಅಗತ್ಯ, ಈ ಹಂತದಲ್ಲಿ ಇಂತಹಾ ತರಬೇತಿಗಳು ನಮ್ಮನ್ನು ಮಾನಸಿಕವಾಗಿಯೂ ಗಟ್ಟಿಗೊಳಿಸುತ್ತದೆ ಎಂದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡದ ಪೌರ ರಕ್ಷಣಾ ದಳದ ಮುಖ್ಯ ಪಾಲಕರಾದ ಡಾ| ಮುರಳಿ ಮೋಹನ್ ಚೂಂತಾರ್ ಇವರು ಪೌರ ರಕ್ಷಣಾ ದಳದ ಕಾರ್ಯಕರ್ತರು ತರಬೇತಿಯ ಪ್ರಯೋಜನ ಪಡೆದುಕೊಂಡು ಸಮಾಜದಲ್ಲಿ ಸೈನಿಕನ ರೀತಿ ಕೆಲಸ ಮಾಡಬೇಕು. ಈ ಸಮಾಜದಲ್ಲಿ ಏನೇ ತೊಂದರೆ ಉಂಟಾದಾಗ ನಮ್ಮನ್ನು ನಾವು ರಕ್ಷಿಸಿಕೊಂಡು ಇತರರನ್ನು ಯಾವ ರೀತಿ ರಕ್ಷಣೆ ಮಾಡಬಹುದು, ವಿದ್ಯುತ್ ಶಾಕ್, ಹೃದಯ ಸ್ತಂಭನ, ನೀರಿನ ಅವಘಡಗಳಂತಹ ಸನ್ನಿವೇಶದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂದು ತರಬೇತಿ ನೀಡಲಾಗುತ್ತದೆ. ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ. ಎಂ. ಕೃಷ್ಣ ಭಟ್ ಇವರು, ವಿಪತ್ತು ನಿರ್ವಹಣಾ ತರಬೇತಿಯನ್ನು ಪ್ರತಿಯೊಬ್ಬರು ಪಡೆಯುವುದು ತುಂಬಾ ಅಗತ್ಯ, ಅನಿವಾರ್ಯ ಸಂದರ್ಭಗಳಲ್ಲಿ ನಾವು ಏನು ಮಾಡಬೇಕು ಎಂದು ತಿಳಿದಿರುವುದು ಮುಖ್ಯ. ತಮ್ಮ ಬಗ್ಗೆ ಎಚ್ಚರ ವಹಿಸುತ್ತಾ ಈ ಸಮಾಜಕ್ಕೆ ಒಳ್ಳೆಯ ಸೇವೆಯನ್ನು ನೀಡಿ ಎಂದು ಪೌರ ರಕ್ಷಣಾ ದಳದ ಕಾರ್ಯಕರ್ತರಿಗೆ ಶುಭ ಕೋರಿದರು.


ವಿವೇಕಾನಂದ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿಯ ಸಂಚಾಲಕರಾದ ಮಹಾದೇವ ಶಾಸ್ತ್ರಿ, ಸದಸ್ಯರಾದ ಕೆ.ಟಿ.ಮುರಳಿ, ಪ್ರಾಚಾರ್ಯರಾದ ಗೋಪಿನಾಥ ಶೆಟ್ಟಿ, ವಿವೇಕಾನಂದ ಕಾಲೇಜಿನ ನಿವೃತ ಪ್ರಾಚಾರ್ಯರಾದ ಪೀಟರ್ ವಿಲ್ಸನ್ ಪ್ರಭಾಕರ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸನ್ನ ಭಟ್ ಇವರು ಅತಿಥಿಗಳನ್ನು ಸ್ವಾಗತಿಸಿದರು. ಪುತ್ತೂರು ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾದ ಆಸ್ಕರ್ ಆನಂದ್ ವಂದಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಜಯಲಕ್ಷ್ಮಿ ಪ್ರಾರ್ಥಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಉಷಾಕಿರಣ್ ಕಾರ್ಯಕ್ರಮ ನಿರ್ವಹಿಸಿದರು.
ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕರಾದ ಗುರುಪ್ರಸನ್ನ ಕಾರ್ಯಕ್ರಮ ಸಂಯೋಜಿಸಿದ್ದರು. ಸಭಾ ಕಾರ್ಯಕ್ರಮ ನಂತರ ಪೌರ ರಕ್ಷಣಾ ದಳದ ಕಾರ್ಯಕರ್ತರಿಗೆ ಎನ್ ಡಿ ಆರ್ ಎಫ್ ನ ಕಾನ್ಸ್ಟೇಬಲ್ ವಿ ವಿ ಎಸ್ ನಾರಾಯಣ ಮತ್ತು ತಂಡದವರು ವಿಪತ್ತು ನಿರ್ವಹಣಾ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ಹಾಗೂ ತರಬೇತಿ ನೀಡಿದರು.

More articles

Latest article