ಬಂಟ್ವಾಳ: ಲಾಕ್ ಡೌನ್ ಅವಧಿಯಲ್ಲಿ ಜನರಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಕಿಟ್ ವಿತರಿಸುವ ಕಾರ್ಯಕ್ರಮ ನೋಡಿದ್ದೇವೆ. ಆದರೆ ಇಲ್ಲೊಬ್ಬರು ವಿಶಿಷ್ಠವಾದ ಕಾರಣಕ್ಕೆ ಸುತ್ತಮುತ್ತಲಿನ ಜನರಿಗೆ ಆಹಾರದ ಕಿಟ್ ವಿತರಿಸಿ ಗಮನಸೆಳೆದು, ಗ್ರಾಮದಲ್ಲಿ ಪ್ರಶಂಸೆಗೂ ಪಾತ್ರರಾಗಿದ್ದಾರೆ. ಮಹಿಳೆಯೋರ್ವಳ ನಡೆ ಗ್ರಾಮದಲ್ಲಿ ಮಾದರಿಯೆನಿಸಿದೆ.

ಎಲ್ಲರೂ ಕಿಟ್ ನೀಡುತ್ತಾರೆ. ಆದರೆ, ಇದು ವಿಭಿನ್ನ ಕಾರ್ಯಕ್ರಮ.
ಕೊರೊನಾದಿಂದ ಗೆದ್ದು ಬಂದ ಮಹಿಳೆಯಿಂದ ಕಿಟ್ ವಿತರಣೆ.
ಹಾಗಾಗಿಯೇ ಸುದ್ದಿಯಾಗಿದೆ.

ಇವರು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದವರು.
ಮೂಲತಃ ಕೃಷಿ ಕುಟುಂಬದ ಮಹಿಳೆ ಇವರು. ಇವರ ಗಂಡ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಇವರಿಗೆ ಕೊರೊನಾ ಸೊಂಕು ತಗುಲಿ ಆಸ್ಪತ್ರೆಗೆ ದಾಖಲಾಗಿ, ಇದೀಗ ಕೊರೊನಾದಿಂದ ಗೆದ್ದು ಮನೆಗೆ ವಾಪಸ್ಸಾಗಿದ್ದಾರೆ.

ಕಳೆದ ತಿಂಗಳು ವೇಣೂರು ಸಮೀಪದ ಶಿರ್ಲಾಲು ಗ್ರಾಮದ 41 ವರ್ಷದ ಮಹಿಳೆಯೋರ್ವರಿಗೆ ಕೊರೊನಾ ಸೊಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿತು.

ಆದರೆ ಕೊರೊನಾ ಪಾಸಿಟಿವ್ ನ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ ಎಂಬ ಮಾಹಿತಿ ಜಿಲ್ಲಾಡಳಿತ ನೀಡಿತ್ತು. ಮನೆಯಲ್ಲಿ ಕೇವಲ ಮೂವರು.  ಕೊರೊನಾ ಸೊಂಕಿತ ಮಹಿಳೆಯ ಜೊತೆ ಇಬ್ಬರು ಪ್ರಾಥಮಿಕ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳು. ಕಳೆದ ಮೂರು ತಿಂಗಳ ಹಿಂದೆ ಇವರಿಗೆ ನ್ಯುಮೋನಿಯಾ ಜ್ವರ ಕಾಣಿಸಿಕೊಂಡಿದ್ದು, ಇದಕ್ಕೆ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಕಳೆದ ತಿಂಗಳು ಮತ್ತೆ ಜ್ವರ ಕಾಣಿಸಿಕೊಂಡ ನಂತರ ಇವರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಿದಾಗ ಇವರಿಗೆ ಕೊರೊನಾ ಪಾಸಿಟಿವ್ ಸೊಂಕು ದೃಢಗೊಂಡಿತ್ತು.
ಈ ಹಿನ್ನಲೆಯಲ್ಲಿ ಇವರನ್ನು ಮಂಗಳೂರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಜೂನ್ 30 ರಂದು ಆದಿತ್ಯವಾರ ಅವರು ಚಿಕಿತ್ಸೆ ಮುಗಿಸಿ ಕೊರೊನಾ ವಿರುದ್ದ ಗೆದ್ದು ಮನೆಗೆ ವಾಪಸ್ಸಾಗಿದ್ದಾರೆ.
ಇವರಿಗೆ ಕೊರೊನಾ ಪಾಸಿಟಿವ್ ಸೊಂಕು ದೃಢಪಟ್ಟ ಕೂಡಲೇ ಶಿರ್ಲಾಲು ಇವರ ಮನೆಯ ಸುತ್ತ ಮುತ್ತ 7 ಮನೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು.15 ಮನೆಗಳ ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಇದು ಸರಕಾರದ ಸುತ್ತೋಲೆ ಪ್ರಕಾರ.
ಆದರೆ ಇವರಿಗೆ ಕೊರೊನಾ ಸೊಂಕು ದೃಢಗೊಂಡಿದ್ದರಿಂದ ಇಷ್ಟು ಮನೆಯವರಿಗೆ ಸಾಕಷ್ಟು ತೊಂದರೆ ಆಗಿದೆ ಎಂಬ ಮನಸ್ಸು ಇವರಿಗೆ ಬೇಸರ ತಂದಿತ್ತು. ಆ ಒಂದು ಕಾರಣಕ್ಕೆ ಇವರು ಸುತ್ತಮುತ್ತಲಿನ ಸುಮಾರು 17 ಮನೆಗಳಿಗೆ ದಿನಬಳಕೆಯ ಕಿಟ್ ನೀಡಿ ಮಾನವೀಯತೆ ತೋರಿದರು. ತನ್ನಿಂದ ಯಾರಿಗೂ ನೋವು ಆಗಬಾರದು ಎಂಬ ಮನಸ್ಸಿನಿಂದ ಇವರು ಈ ಮಹತ್ಕಾರ್ಯದ ಮೂಲಕ ಮಾದರಿಯಾಗಿದ್ದಾರೆ.

ವೇಣೂರು ಶಿರ್ಲಾಲು ಅಂಗಡಿ ಮಾಲಕ ಶ್ರೀದರ್ ಪೂಜಾರಿ ಅವರು ಕಿಟ್ ವಿತರಣೆಯ ನೇತೃತ್ವ ವಹಿಸಿದ್ದರು.
ವೇಣೂರು ಪೋಲೀಸ್ ಠಾಣಾ ಎಸ್. ಐ.ಲೋಲಾಕ್ಷ ಕಿಟ್ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಪಿ.ಡಿ.ಒ.ಹಾಗೂ ಸಿಬ್ಬಂದಿ ಗಳು ಹಾಜರಿದ್ದರು.
ಕೊರೊನಾ ಸೊಂಕಿತ ಮಹಿಳೆಯ ಮನೆ ಸೀಲ್ ಡೌನ್ ಆಗಿರುವುದರಿಂದ ಅವರು ಈ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here