Saturday, October 21, 2023

ಬಂಟ್ವಾಳ: ವಾಣಿಜ್ಯ ಸಂಕೀರ್ಣದ ಎರಡು ತಿಂಗಳ ಬಾಡಿಗೆ ಸಂಪೂರ್ಣ ಮನ್ನಾ ಮಾಡಿದ ಮಾಲಕ ಇಕ್ಬಾಲ್ ನಿಶ್ಬಾ

Must read

ಬಂಟ್ವಾಳ : ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಜನ ಉದ್ಯೋಗ-ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲದ ಪರಿಣಾಮ ಜನ ಸಾಮಾನ್ಯರು ಅದರಲ್ಲೂ ಮಧ್ಯಮ ವರ್ಗದ ಜನ ಸಂಕಷ್ಟದ ಮೇಲೆ ಸಂಕಷ್ಟದ ಪರಿಸ್ಥಿತಿ ಎದುರಿಸಿದ್ದು ಎಲ್ಲರಿಗೂ ಗೊತ್ತಿರುವಂತದ್ದೆ. ಬಡವರು ಸರಕಾರದ ಕೆಲ ಯೋಜನೆಗಳನ್ನು ಉಪಯೋಗಿಸಿಕೊಂಡು ನೆಮ್ಮದಿಯ ಜೀವನ ನಡೆಸಿದರೆ, ಶ್ರೀಮಂತರು ತಮ್ಮ ಆರ್ಥಿಕ ಕ್ರೋಢೀಕರಣದಿಂದ ಜೀವನ ನಡೆಸಿದರು. ಆದರೆ ದಿನಗೂಲಿ ನೌಕರಿ ಮಾಡಿಕೊಂಡು ನಿತ್ಯ ಜೀವನ ನಡೆಸುವ ಮಧ್ಯಮ ವರ್ಗದ ಮಂದಿ ಮಾತ್ರ ಅತ್ತ ನೌಕರಿಯೂ ಇಲ್ಲದೆ, ಇತ್ತ ಸರಕಾರದ ಸಹಕಾರವೂ ಇಲ್ಲದೆ, ಮತ್ತೊಂದೆಡೆ ಸಂಪತ್ತಿನ ಕ್ರೋಢೀಕರಣವೂ ಇಲ್ಲದೆ ಬಹಳಷ್ಟು ಸಂಕಷ್ಟ ಹಾಗೂ ಯಾತನಾಮಯ ಸಂಧಿಗ್ಧ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.


ಈ ಮಧ್ಯೆ ಮಧ್ಯಮ ವರ್ಗದ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಬಂಟ್ವಾಳ ನಿವಾಸಿ, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಯುವ ಉದ್ಯಮಿ, ನಿಶ್ಬಾ ಗ್ರೂಪ್ ಮಾಲಕ ಇಕ್ಬಾಲ್ ನಿಶ್ಬಾ ಅವರು ತನ್ನ ಒಡೆತನದ ವಸತಿ ಹಾಗೂ ವಾಣಿಜ್ಯ ಸಂಕೀರ್ಣದಲ್ಲಿರುವ ಬಾಡಿಗೆದಾರರ ಪಾಲಿಗೆ ಆಪದ್ಭಾಂಧವರಾಗಿ ಸಹಕರಿಸಿದ್ದು, 2 ತಿಂಗಳುಗಳ ಬಾಡಿಗೆಯನ್ನು ಸಂಪೂರ್ಣ ಮನ್ನಾ ಮಾಡುವ ಸಂಕಷ್ಟದ ಸಮಯದಲ್ಲಿ ನೆರವು ನೀಡಿ ಸ್ಪಂದಿಸಿದ್ದಾರೆ.
ಸೈಮ್ ಗ್ರೂಪ್ ಆಫ್ ಕಂಪೆನಿಯ ಸಿಇಒ ಆಗಿರುವ ಇವರು ತನ್ನ ಒಡೆತನದ ಬಂಟ್ವಾಳ, ಬಿ ಸಿ ರೋಡು, ಮಂಗಳೂರು ಹಾಗೂ ಉಪ್ಪಳದಲ್ಲಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಾಡಿಗೆದಾರ ಮಧ್ಯಮ ವರ್ಗದ ಕುಟುಂಬಗಳ ಸಂಕಷ್ಟವನ್ನು ಸ್ವತಃ ಅರಿತುಕೊಂಡು ಲಾಕ್‍ಡೌನ್ ಸಂದರ್ಭದ ಎರಡು ತಿಂಗಳುಗಳ ಬಾಡಿಗೆ ಮನ್ನಾ ಮಾಡುವ ಮೂಲಕ ಸ್ಪಂದಿಸುವ ಸಹಕಾರ ಮನೋಭಾವ ತೋರಿದ್ದು, ಎಲ್ಲರ ಶ್ಲಾಘನೆಗೆ ಕಾರಣವಾಗಿದೆ.
ಇಕ್ಬಾಲ್ ಅವರು ಸದಾ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡವರಾಗಿದ್ದು, ತನ್ನ ಆದಾಯದ ಒಂದಂಶವನ್ನು ಸಮಾಜದ ಬಡವರ, ಸಂಕಷ್ಟದಲ್ಲಿರುವವರ ಕಷ್ಟಗಳಿಗೆ ಸ್ಪಂದಿಸಲು ಬಳಸಿಕೊಳ್ಳುತ್ತಾ ಬಂದಿದ್ದು, ಬಡವರ ಸಂಕಷ್ಟ ಅರಿತು ತನ್ನಿಂದಾದ ಸಹಾಯ-ಸಹಕಾರ ನೀಡುವ ಪ್ರವೃತ್ತಿಯವರಾಗಿದ್ದಾರೆ. ಲಾಕ್‍ಡೌನ್ ಸಂದರ್ಭ ತನ್ನ ಸ್ವಂತ ಊರಾದ ಬಂಟ್ವಾಳ-ಕೆಳಗಿನಪೇಟೆಯಲ್ಲಿ ಬಂಟ್ವಾಳ ಜಮಾಅತ್ ಹಾಗೂ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ಥಾಪಿಸಲಾದ ಲಾಕ್‍ಡೌನ್ ರಿಲೀಫ್ ಫಂಡ್‍ಗೂ ಕೂಡಾ ಇಕ್ಬಾಲ್ ಅವರು ತನ್ನಿಂದಾದ ಗರಿಷ್ಠ ಮಟ್ಟದ ಆರ್ಥಿಕ ಸಹಕಾರ ನೀಡಿದ್ದಲ್ಲದೆ ಊರಿನ ಪ್ರತಿಯೊಂದು ಸೇವಾ ಹಾಗೂ ಕಾರುಣ್ಯ ಚಟುವಟಿಕೆಗಳಿಗೂ ಸದಾ ಮುಂಚೂಣಿ ಸಹಕಾರವನ್ನು ನೀಡುವವರಾಗಿರುತ್ತಾರೆ. ಇದೀಗ ಲಾಕ್‍ಡೌನ್ ಸಂಕಷ್ಟದ ಸಮಯದಲ್ಲಿ ತನ್ನ ಒಡೆತನದ ಕಟ್ಟಡಗಳಲ್ಲಿರುವವರ ಪಾಲಿಗೆ ಆಪದ್ಬಾಂಧವರಾಗುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

More articles

Latest article