Thursday, April 18, 2024

ಮಣ್ಣಿಗೂ ಜೀವ ಇದೆಯೇ

ನಾನಾಗ ಪ್ರೈಮರಿ ಶಾಲೆಗೆ ಹೋಗುತ್ತಿದ್ದೆ. ನಮ್ಮ ಮನೆಯ ಮುಂಭಾಗದಲ್ಲೇ ಹಸಿರುಡುಗೆಯನ್ನು ಹೊದ್ದಂತೆ ಗದ್ದೆಗಳು ಕಂಗೊಳಿಸುತ್ತಿದ್ದುವು. ಅದೇ ದಾರಿಯಾಗಿ ಶಾಲೆಗೆ ನಮ್ಮ ಪಯಣ.
ಆಗ ತಾನೆ ಬಂದಿದ್ದ ಐಆರ್8 ಅನ್ನುವ ಭತ್ತದ ಹೊಸ ತಳಿಯನ್ನು ರೈತರು ಬೆಳೆಯುತ್ತಿದ್ದರು. ಒಂದು ಅಡಿಗಿಂತ ಹೆಚ್ಚು ಬೆಳೆಯದ ಆ ಬತ್ತದ ಪೈರು ತನ್ನ ತೆನೆಯ ಭಾರದಿಂದ ಮದುಮಗಳಂತೆ ನೆಲಕ್ಕೆ ಬಾಗಿತ್ತು. ತುಂಬಿ ತುಳುಕಿದ್ದ ಅದರ ಈ ಮೈಮಾಟವನ್ನು ನಾವು ಕಂಡದ್ದು ಒಂದು ವರ್ಷ ಮಾತ್ರ. ಮರು ವರ್ಷ ಪೈರುಗಳು ಎಳವೆಯಲ್ಲೇ ಕೃಶವಾಗಿ ಬಿದ್ದುಕೊಂಡಿದ್ದವು. ಏನೋ ಹುಳವಂತೆ, ಟಿಕ್ ಟ್ವೆಂಟಿ ಸಿಂಪಡಿಸಿದರು. ಸೊಸೈಟಿಯಿಂದ ಯೂರಿಯಾ ತಂದು ಹಾಕಿದರು. ಪೈರು ಧುತ್ತನೆ ಎದ್ದು ನಿಂತಿತು. ಮರು ವರ್ಷ ಮತ್ತೊಂದೇ ಸಮಸ್ಯೆ, ಅಲ್ಲಲ್ಲಿ ದುಂಡು ದುಂಡಗೆ, ಚೌಕ ಚೌಕಾಕೃತಿಯಲ್ಲಿ ಪೈರೆಲ್ಲಾ ಬಿದ್ದು ಹೋಗಿ ಕರಟಿದಂತಿತ್ತು. ಈ ಸಲ ಕೃಷಿ ಇಲಾಖೆಯ ನಿರ್ದೇಶನದಂತೆ ಟಿಕ್ ಟ್ವೆಂಟಿಗಿಂತಲೂ ವಿಷಯುಕ್ತವಾದ ಎಂಡ್ರೆಕ್ಸ್ ಸಿಂಪಡಿಸಲಾಯಿತು, ಅದಕ್ಕನುಣವಾಗಿ ದುಪ್ಪಟ್ಟು ಶಕ್ತಿಯ ಯಾವುದೋ ಗೊಬ್ಬರ ಹಾಕಿದರು.
ಮೂರನೆಯ ವರ್ಷ ಗದ್ದೆಯ ಅರ್ಧಕ್ಕರ್ಧ ರೋಗ. ಈ ವರ್ಷ ಫಾಲಿಡಾಲ್ ಸಿಂಪಡಿಸಿ ಹೆಸರು ಗೊತ್ತಿಲ್ಲದ ಇನ್ನೊಂದು ಯಾವುದೋ ಗೊಬ್ಬರವನ್ನು ಬುಡಕ್ಕೆ ಚೆಲ್ಲಲಾಯಿತು; ಆದರೆ ಬೆಳೆ ಅಷ್ಟಕ್ಕಷ್ಟೆ. ಯಾರೋ ಹೇಳಿದ ಪ್ರಕಾರ ಮಣ್ಣನ್ನು ಕಾಸರಗೋಡಿನಲ್ಲಿರುವ ಸಿಪಿಸಿಆರ್ ಐಗೆ ಕೊಟ್ಟು ಪರೀಕ್ಷೆಗೆ ಒಳಪಡಿಸಲಾಯಿತು. ಅವರು ಹೇಳಿದ್ದು ಒಂದೇ ಮಾತು, ಈ ಮಣ್ಣು ಸತ್ತುಹೋಗಿದೆಯೆಂಬುದಾಗಿ. ಆಶ್ಚರ್ಯವೇ ಆಶ್ಚರ್ಯ; ಮಣ್ಣು ಸತ್ತು ಹೋಗುವುದು!? ಅದಕ್ಕೂ ಜೀವ ಇದೆಯ?! ಹೌದು, ಕಣ್ಣಿಗೆ ಕಾಣದ ಮಣ್ಣಿನ ರಂಧ್ರಗಳ ಮೂಲಕ ಭೂಮಿಯೂ ಉಸಿರಾಡುತ್ತದೆ, ಯಾವಾಗ ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಚೆಲ್ಲುತ್ತೇವೋ ಆವಾಗ ಪದರಪದರವಾಗಿ ಇರುವ ಮಣ್ಣು ಸ್ವಲ್ಪ ಸ್ವಲ್ಪವೇ ತನ್ನ ಮೂಲಭೂತ ಸಾವಯವವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ, ಆಮ್ಲಜನಕದ ಕೊರತೆ ಉಂಟಾಗಿ ತನ್ನ ಮೇಲಾಗುವ ಯಾವುದೇ ರೋಗದ ಧಾಳಿಯನ್ನು ಎದುರಿಸುವಲ್ಲಿ ಸೋಲುತ್ತದೆ, ಉಸಿರಾಟವನ್ನು ನಿಲ್ಲಿಸುತ್ತದೆ. ಈ ಮೂಲಕ ನಾವೇ ಕಲ್ಪಿಸಿರುವ ರಾಜಮಾರ್ಗದ ಮೂಲಕ ಕೃಮಿಕೀಟಾದಿಗಳು ಅಲ್ಲಿರುವ ಬೆಳೆಗಳಿಗೆ ವಕೃಸಿಕೊಳ್ಳುತ್ತವೆ. ಕೃಮಿನಾಶಕಗಳನ್ನು ಬಳಸುತ್ತೇವೆ, ಸತ್ತುಹೋದ ಮಣ್ಣಿನ ಮತ್ತಷ್ಟು ಕೆಳಪದರದಲ್ಲಿರುವ ಫಲವತ್ತತೆಯನ್ನು ಗಿಡಗಳಿಗೆ ಎಳೆದುಕೊಡುವುದಕ್ಕಾಗಿ ಹಿಂದೆಂದಿಗಿಂತಲೂ ಶಕ್ತಿಶಾಲಿ ರಾಸಾಯನಿಕ ಗೊಬ್ಬರವನ್ನು ಬಳಸುತ್ತೇವೆ. ಹೀಗೆಯೇ ಬರಬರತ್ತಾ ಮಣ್ಣು ತನ್ನ ಸಾರವನ್ನೆಲ್ಲಾ ಕಳೆದುಕೊಳ್ಳುತ್ತದೆ. ಇದರ ಜತೆಯಲ್ಲೇ ಯಾವ ಕೃಮಿಕೀಟಾದಿಗಳು ಮಣ್ಣಿನ ಹಾಗೂ ಬೆಳೆಯ ಸಂರಕ್ಷಣೆ ಮಾಡಬೇಕಾಗಿತ್ತೋ ಅವುಗಳೂ ನಿರ್ನಾಮವಾಗುತ್ತವೆ. ಹೆಚ್ಚಿನಂಶ ನಾವು ಶಾಲೆಗೆ ಹೋಗುವಾಗ ಗದ್ದೆಯ ಬದುವಿನಲ್ಲಿ ಗೋಚರವಾಗುತ್ತಿದ್ದ ನೀರುಹಾವು(ಒಳ್ಳೆ), ಎರೆಹುಳು, ನರ್ತೆ, ಏಡಿ ಅದೇ ರೀತಿ ಕಾಲ್ಚೆಂಡಿನಂತೆ ಕಾಲಿಗೆ ಸಿಗುತ್ತಿದ್ದ ಕಫ್ಫೆ ಇವುಗಳೆಲ್ಲಾ ಇಂದು ಕಾಣದಿರುವುದಕ್ಕೆ ಇದೇ ಕೃಮಿನಾಶಕಗಳು ಕಾರಣ ಅನ್ನುವುದು ನೂರಕ್ಕೆ ನೂರು ಸತ್ಯ. ಇವುಗಳೆಲ್ಲಾ ಇದ್ದಾಗ ಮಾತ್ರ ಅದು ಜೀವಂತ ಗದ್ದೆ, ಇಲ್ಲವಾದಲ್ಲಿ ತಾತ್ಕಾಲಿಕವಾಗಿ ಜೀವರಕ್ಷಕ ಸಾಧನವನ್ನು(ಕ್ರಿಮಿ ನಾಶಕ ಹಾಗೂ ರಾಸಾಯನಿಕ ಗೊಬ್ಬರ)ಅಳವಡಿಸಿದ ಜೀವಚ್ಛವ ಎನ್ನಬೇಕು.ಒಟ್ಟಿನಲ್ಲಿ ಹೇಳಾಬೇಕಾದರೆ ಗದ್ದೆ ಅನ್ನುವ ಪರಿಕಲ್ಪನೆಕಯ ಸಂರಚನೆ ಏನಿದೆಯೋ ಅದರ ಜಾಲ ತುಂಡಾಗಿ ಹೋಗುತ್ತದೆ. ಇನ್ನೆಲ್ಲಿಯ ಬೇಸಾಯ?
ಶೀಘ್ರದಲ್ಲೇ ಅಧಿಕ ಬೆಳೆಗಳನ್ನು ಪಡೆಯುವುದಕ್ಕಾಗಿ
ಪ್ರತೀವರ್ಷ ಒಂದಕ್ಕೊಂದು ಮಿಗಿಲಾದ ಶಕ್ತಿಯುಳ್ಳ ಕೃಮಿನಾಶಕಗಳು ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾಹೋದಂತೆ, ಮಣ್ಣಿಗೆ ಪೋಷಕಾಂಶಗಳನ್ನು ಒದಗಿಸಿಕೊಡಬೇಕಾದ ಸೂಕ್ಷ್ಮಾಣುಜೀವಿಗಳು ನಾಶವಾಗುವುದಲ್ಲದೆ ಮಣ್ಣಿನ ಒಂದೊಂದೇ ಪದರಗಳು ತನ್ನ ಸತ್ವವನ್ನು ಕಳೆದುಕೊಂಡು ಸಾಯುತ್ತಾಬರುತ್ತದೆ. ಹೀಗೆ ಬರಡಾಗುವ ಮಣ್ಣು ನೀರನ್ನು ಹಿಡಿದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಜತೆಯಲ್ಲಿ ಅಂತರ್ಜಲಮಟ್ಟದ ಕುಸಿತಕ್ಕೂ ಕಾರಣವಾಗುತ್ತದೆ.
ಇನ್ನೊಂದು ಅಪಾಯವೆಂದರೆ, ಇಂತಹ ಮಣ್ಣಿನ ಸತ್ವವನ್ನು ಹೀರಿಕೊಂಡೇ ಬೆಳೆಯುವ ಕೃಷಿ ಉತ್ಪನ್ನಗಳು ಮನುಷ್ಯನ ಆರೋಗ್ಯದಮೇಲೂ ಪರಿಣಾಮವನ್ನು ಬೀರುತ್ತದೆ; ಪುತ್ತೂರು ತಾಲೂಕಿನ ಪಾಣಾಜೆಯ ಸ್ವರ್ಗದಲ್ಲಿ ಗೇರುಕೃಷಿ ಸಂದರ್ಭದಲ್ಲಿ ಸಿಂಪಡಿಸಿದ ಎಂಡೋಸಲ್ಫಾನ್ ಇದಕ್ಕೆ ಜೀವಂತ ಉದಾಹರಣೆ. ಇದರ ಪರಿಣಾಮ ವಂಶವಾಹಿಯಲ್ಲೇ ಸೇರಿಕೊಂಡು, ಹುಟ್ಟುವ ಮಕ್ಕಳಲ್ಲೂ ಇದರ ಸಮಸ್ಯೆ ಸಾಕಷ್ಟು ಕಂಡುಬರಬಹುದು ಅಥವಾ ಕಂಡುಬಂದಿದೆ., ಇಷ್ಟುಮಾತ್ರವಲ್ಲದೆ, ಕ್ಯಾನ್ಸರಿಗೆ ಕಾಣವಾಗುವ ಸಾಧ್ಯತೆಗಳೂ ದಟ್ಟವಾಗಿದೆ ಅನ್ನುವುದನ್ನು ಮಾನಗಾಣಬೇಕಾಗಿದೆ.

✍️ರಾಜಮಣಿ ರಾಮಕುಂಜ

More from the blog

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ಮಾಜಿ ಸಚಿವ ಜನಾರ್ಧನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಮತದಾನ ಪ್ರಕ್ರಿಯೆ

ಚುನಾವಣಾ ಆಯೋಗದ ನಿರ್ದೇಶನದಂತೆ ಕಳೆದ ಬಾರಿಯಂತೆ ಸೆಕ್ಟರ್‌ ಅಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳ ತಂಡ ಮನೆ-ಮನೆಗೆ ತೆರಳಿ ಮತದಾನ ಮಾಡಿಸುತ್ತಿದೆ. ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205-ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85...

ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ : ಬಜರಂಗದಳ, ವಿ.ಹಿಂ.ಪರಿಷತ್ ಕಲ್ಲಡ್ಕ ಪ್ರಖಂಡದಿಂದ ಖಂಡನೆ

ಬಂಟ್ವಾಳ: ಅಪಘಾತ ವಿಚಾರದಲ್ಲಿ ಗಂಡ ಹೆಂಡತಿಗೆ ನಾಲ್ವರು ಹಲ್ಲೆ ನಡೆಸಿದ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ಸಂಜೆ ವೇಳೆ ನಡೆದಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ...

ಲೋಕಸಭಾ ಚುನಾವಣೆ : ಮತಯಂತ್ರಗಳ ಕಮಿಷನಿಂಗ್‌ ಕಾರ್ಯ…. ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಬಂಟ್ವಾಳ :ಮೊಡಂಕಾಪಿನಲ್ಲಿರುವ ಇನ್ಫೆಂಟ್‌ ಜೀಸಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ದಿನ ಲೋಕಸಭಾ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 205 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಗುವ ಮತಯಂತ್ರಗಳ ಕಮಿಷನಿಂಗ್‌ ಕಾರ್ಯವು ನಡೆಯಿತು. ಈ ಸಂದರ್ಭದಲ್ಲಿ...