Wednesday, October 18, 2023

ಕೊರೊನಾ ಲಾಕ್ ಡೌನ್ ಜನರಲ್ಲಿ ಪರೋಪಕಾರ ಮನೋಭಾವ ಮೂಡಿಸಿದೆ : ಡಾ| ಪ್ರಭಾಕರ್ ಭಟ್

Must read

ಬಂಟ್ವಾಳ: ಕೊರೊನಾದಿಂದ ಜನರಿಗೆ ಅಲ್ಪಸ್ವಲ್ಪ ಕಷ್ಟ ಸಂಭವಿಸಿದರೆ, ತೊಂದರೆಗೊಳಗಾದರೆ ಸ್ವಲ್ಪ ಮಟ್ಟಿಗೆ ಪ್ರಯೋಜನವೂ ಆಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜನರು ತಮ್ಮ ಮೂಲ ಆಚರಣೆಗಳಿಗೆ ಹಿಂದಿರುಗಿದ್ದಾರೆ. ಆಹಾರ ಪದ್ಧತಿ, ಸಾಮಾಜಿಕ ಸಹಕಾರ, ಸ್ವಚ್ಛತೆಯ ಪಾಠ ನಮಗೆ ಕಲಿಸಿಕೊಟ್ಟಿದೆ. ಕಳ್ಳಿಗೆ ಗ್ರಾಮದಲ್ಲಿ ಲಾಕ್ ಡೌನ್ ಸಂದರ್ಭ ಯುವಕರ ಪರಿಶ್ರಮದಿಂದ ಮೂರು ಮನೆ, ಒಂದು ತೆರೆದ ಬಾವಿ ನಿರ್ಮಾಣವಾಗಿದೆ. ಈ ಮೂಲಕ ಜನರಲ್ಲಿ ಪರೋಪಕಾರದ ಭಾವನೆಯೂ ಜಾಗೃತಿಯಾಗಿದೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ನುಡಿದರು.
ಅವರು ಮಂಗಳವಾರ ನೆತ್ರಕೆರೆಯಲ್ಲಿ ನವೋದಯ ಮಿತ್ರಕಲಾ ವೃಂದ, ನೇತ್ರಾವತಿ ಮಾತೃ ಮಂಡಳಿ ನೆತ್ರಕೆರೆ, ಹಳೆವಿದ್ಯಾರ್ಥಿ ಸಂಘ ಮತ್ತು ಗ್ರಾಮವಿಕಾಸ ಪ್ರತಿಷ್ಠಾನ ಕಳ್ಳಿಗೆ ವತಿಯಿಂದ ನೆತ್ರಕೆರೆ ಕಮಲಾ ಬೆಳ್ಚಡ್ತಿ ಕುಟುಂಬಕ್ಕೆ ಸುಮಾರು 3.5 ಲಕ್ಷ ಮೊತ್ತದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ,ಮಾತನಾಡಿದರು. ಸಂಘದ ವತಿಯಿಂದ ನಿರ್ಮಿಸಿದ ಮೂರನೇ ಮನೆ ಇದಾಗಿದೆ.
ಹಿಂದೂ ಸಮಾಜದ ಬಡವರ, ಅಶಕ್ತರ ಸೇವೆಗೆ ನಾವು ಯಾವಾಗಲೂ ಸಿದ್ಧರಿರಬೇಕು. ಇದರಿಂದ ನಮ್ಮವರ ಬಲವಂತದ ಮತಾಂತರ, ಷೋಷಣೆಗಳನ್ನು ತಡೆಯಬಹುದು. ಕಳ್ಳಿಗೆ ಗ್ರಾಮದ ಯುವಕರ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಮತ್ತೋರ್ವ ಅತಿಥಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಸರಳ ಜೀವನದ ಉತ್ತಮ ಕಲ್ಪನೆಯಿಂದ ಜೀವನ ಸಾಕಾರವಾಗುವುದು. ಪ್ರಧಾನಿಯವರ ಆತ್ಮನಿರ್ಭರ್ ಯೋಜನೆಯಿಂದ ಜನರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿ ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯ ಸ್ವಾಮೀಜಿ ದೀಪ ಬೆಳಗಿ, ಭಾರತಮಾತೆಯ ಭಾವಚಿತ್ರದೊಂದಿಗೆ ಮನೆಯ ಕೀ ಹಸ್ತಾಂತರಿಸಿ ಶುಭ ಹಾರೈಸಿದರು.
ಪುತ್ತೂರು ಜಿಲ್ಲಾ ಮಾನ್ಯ ಸಂಘಚಾಲಕರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಜಿಪಂ ಸದಸ್ಯ ರವೀಂದ್ರ ಕಂಬಳಿ, ಗ್ರಾಪಂ ಸದಸ್ಯೆ ಹರಿಣಾಕ್ಷಿ ಬೆರ್ವ, ಉದ್ಯಮಿ ಟಿ. ತಾರನಾಥ ಕೊಟ್ಟಾರಿ, ದಾನಿಗಳಾದ ರಾಧಾಕೃಷ್ಣ ತಂತ್ರಿ ಪೊಳಲಿ, ಉಮೇಶ್ ಸಾಲ್ಯಾನ್ ಬೆಂಜನಪದವು, ಶಿಕ್ಷಕಿ ಮೋಹಿನಿ, ಸಂಘದ ಅಧ್ಯಕ್ಷ ಬಿ.ಸುರೇಶ್ ಭಂಡಾರಿ ಅರ್ಬಿ, ಗೌರವಾಧ್ಯಕ್ಷ ಪಿ. ಸುಬ್ರಹ್ಮಣ್ಯ ರಾವ್, ನೆತ್ರಕೆರೆ ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ಜ್ಯೋತೀಂದ್ರ ಶೆಟ್ಟಿ ಮುಂಡಾಜೆ, ಕಳ್ಳಿಗೆ ಗ್ರಾಮ ವಿಕಾಸ ಪ್ರತಿಷ್ಠಾನ ಸಂಯೋಜಕ ಸಂತೋಷ್ ಕುಮಾರ್, ಸಂಗೀತಾ ವಿನೋದ್ ವಿಠ್ಠಲ ಸಾಲ್ಯಾನ್ ಮತ್ತಿತರರಿದ್ದರು. ನವೋದಯ ಮಿತ್ರಕಲಾ ವೃಂದ ನೆತ್ರಕೆರೆ ಇದರ ಸಂಚಾಲಕರಾದ ದಾಮೋದರ ನೆತ್ರಕೆರೆ ಕಾರ್ಯಕ್ರಮ ನಿರ್ವಹಿಸಿದರು.

More articles

Latest article