Thursday, April 18, 2024

ಬಂಟ್ವಾಳ ನಿವಾಸಿಗಳಿಗೊಂದು ಪತ್ರ

ಪ್ರೀತಿಯ ಬಂಟ್ವಾಳದ ನಿವಾಸಿಗಳೇ, ನಿಮಗೆಲ್ಲರಿಗೂ ವಂದನೆಗಳು..
ನನಗೆ ಗೊತ್ತಿದೆ, ಕೊರೋನಾ ಮಹಾಮಾರಿ ಬಂಟ್ವಾಳಕ್ಕೆ ಮಾತ್ರವಲ್ಲ, ಇಡೀ ಭಾರತವನ್ನು, ಇಡೀ ವಿಶ್ವವನ್ನೇ ಕಂಗೆಡಿಸಿದೆ.
ಕಳೆದ 40 ದಿನಗಳಿಂದ ಇಡೀ ಭಾರತದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದಾಗಿ ಎಲ್ಲಾ ವರ್ಗದವರೂ ಕಷ್ಟಪಡುತ್ತಿದ್ದಾರೆ. ನನ್ನ ಬಂಟ್ವಾಳದ ನಾಗರೀಕರೂ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಲ್ಲದೆ ಬಂಟ್ವಾಳ ಇಂದು ಕೊರೋನಾ ಹಾಟ್ ಸ್ಪಾಟ್ ಆಗಿರುವುದಂತೂ ನಿಜಕ್ಕೂ ವಿಷಾಧದ ಸಂಗತಿ.
ದಿನದಿಂದ ದಿನಕ್ಕೆ ನನ್ನ ಹೆಸರು ಕೆಡುತ್ತಿದ್ದು, ಕೊರೋನಾ ದಿಂದ ನಾನೂ ತಲೆತಗ್ಗಿಸುವಂತಾಗಿದೆ. ಯಾಕೆ ಹೀಗಾಗುತ್ತಿದೆ ಎಂದು ನಾನು ನನ್ನನ್ನೇ ಪ್ರಶ್ನಿಸುತ್ತಿದ್ದೇನೆ. ಆದರೆ ನನಗೆ ಉತ್ತರ ಇ‌ನ್ನೂ ಸಿಕ್ಕಿಲ್ಲ.
ಆದರೆ ಕೊರೋನಾ ಆರಂಭದಿಂದಲೂ ಅದರ ನಿಗ್ರಹಕ್ಕೆ ಬಂಟ್ವಾಳದ ಎಲ್ಲಾ ಆಡಳಿತವರ್ಗ ವಹಿಸಿದ ಕಾಳಜಿ, ರೂಪಿಸಿದ ಯೋಜನೆ, ಕಾರ್ಯಗತ ಗೊಳಿಸಿದ ರೀತಿ ಎಲ್ಲವೂ ಭೇಷ್ ಭೇಷ್.. ಎನ್ನುವಂತಿತ್ತು. ಈ ಹಂತದಲ್ಲಿ ಕೊರೋನಾ ವಿರುದ್ದದ ಹೋರಾಟದ ನೇತೃತ್ವ ವಹಿಸಿದ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಹಾಗೂ ಸಾಥ್ ನೀಡಿದ ಸರ್ವ ಇಲಾಖೆಗೂ ಅಭಿನಂದನೆಗಳು.
ಕೊರೋನಾ ಲಾಕ್ ಡೌನ್ ನಿಂದಾಗಿ ಆಗಿರುವ ಸಂಕಷ್ಟಗಳನ್ನು ತಾಳ್ಮೆಯಿಂದಲೇ ಸಹಿಸಿದ ನನ್ನ ಜನತೆಗೂ ನಾನು ಚಿರರುಣಿ. ಅಲ್ಲದೆ ಸಂಕಷ್ಟದಲ್ಲಿರುವವರ ನೆರವಿಗೆ ನಿಂತ ಹಾಲಿ ಶಾಸಕರು, ಮಾಜಿ ಸಚಿವರು, ಅನೇಕ ಜನಪ್ರತಿನಿಧಿಗಳು, ವಿವಿಧ ಸಂಘಸಂಸ್ಥೆಗಳು, ಧಾರ್ಮಿಕ ಕೇಂದ್ರಗಳ ಪ್ರಮುಖರು ಮಾನವೀಯತೆ ಇನ್ನೂ ಜೀವಂತವಿದೆ ಎಂದು ಜಗತ್ತಿಗೆ ಸಾರಿದ್ದಾರೆ.
ಆದರೂ ಬಂಟ್ವಾಳದಲ್ಲಿ ಕೆಲವರ ನಿರ್ಲಕ್ಷ್ಯದಿಂದ ಹಲವು ನಿಯಮಗಳು ದಾರಿ ತಪ್ಪಿದೆ ಎನ್ನುವಾಗ ಬೇಸರವಾಗುತ್ತಿದೆ.
ಲಾಕ್ ಡೌನ್ ಸಡಿಲಿಕೆ ಎಂದಾಕ್ಷಣ ಇರುವ ನಿರ್ಬಂಧಗಳನ್ನೆಲ್ಲಾ ಮರೆತು ವ್ಯವಹರಿಸುತ್ತಾ ಇದ್ದೀರಲ್ಲಾ, ಇದೇ ನನ್ನ ಆತಂಕಕ್ಕೆ ಕಾರಣವಾಗಿರುವುದು. ಸಾಮಾಜಿಕ ಅಂತರ, ಸುರಕ್ಷಿತ ಅಂತರ ವನ್ನು ಕಾಪಾಡಿಕೊಳ್ಳುವುದೇ ಕೊರೋನಾ ನಿಗ್ರಹದ ಮೊದಲ ಹೆಜ್ಜೆ ಎಂಬ ಅರಿವಿದ್ದರೂ,ಅದರ ಪಾಲನೆಯಾಗುತ್ತಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸದೆ, ಸರ್ಕಾರ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಎಲ್ಲವನ್ನೂ ಮಾಡಲಿ ಎಂಬ ನಿರ್ಲಕ್ಷ್ಯವಿದೆಯಲ್ಲಾ, ಅದೇ ಕೊರೋನಾ ವಿಚಾರದಲ್ಲಿ ನಾನು ತಲೆತಗ್ಗಿಸುವಂತೆ ಮಾಡಿದೆ.
ಯಾರದೋ ಒತ್ತಡಗಳಿಂದಾಗಿ ತೆರೆಯಬೇಕಾದ್ದು ತೆರೆದಿಲ್ಲ. ತೆರೆಯಬಾರದ್ದು ತೆರೆದಿದೆ. ಮಕ್ಕಳ ಬಾಲ್ಯ, ಶಿಕ್ಷಣ, ಪ್ರತಿಭೆಗಳೆಲ್ಲಾ ಕೊರೋನಾ ಮಹಾಮಾರಿಯಿಂದಾಗಿ ಕಳೆದು ಹೋಗುವ ಭೀತಿ ಎದುರಾಗಿದೆ.
ಆದ್ದರಿಂದ ಬಂಟ್ವಾಳದ ಜನತೆಯಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ.

* ಬಂಟ್ವಾಳ ಪೇಟೆ ಕೊರೋನಾ ಮಹಾಮಾರಿಯ ಹಾಟ್ ಸ್ಪಾಟ್ ಆಗಿದ್ದು, ಇನ್ನೂ ಹಲವುದಿನಗಳ ಕಾಲ ನೀವೆಲ್ಲರೂ ಸಾಮಾಜಿಕ ಅಂತರದ ಪಾಲನೆಗಾಗಿ ಲಾಕ್ ಡೌನ್ ನ ಕಡ್ಡಾಯ ಪಾಲನೆ ಮಾಡಿ.

* ಲಾಕ್ ಡೌನ್ ಸಡಿಲಿಕೆ ಎಂದರೆ ಅದು ನಿಮಗೆ ಜಿಲ್ಲಾಡಳಿತ ಕೊಟ್ಟಿರುವ ರಿಯಾಯಿತಿ. ಕೊರೋನಾ ಈ ಸಮಯವನ್ನೇ ಬಳಸಿ ನಿಮ್ಮನ್ನು ಆವರಿಸಬಹುದು.

* ಶಾಲೆ, ಕಾಲೇಜುಗಳು ಮತ್ತೆ ತೆರೆಯಬೇಕು, ಎಲ್ಲರೂ ಖುಷಿಯಿಂದ ಸಂಭ್ರಮಿಸಬೇಕು ಎನ್ನುವ ಕಾಳಜಿ ನನ್ನಲ್ಲಿಯೂ ಇದೆ. ಆದರೆ ಪರೀಕ್ಷೆ, ತರಗತಿಯ ಹೆಸರಿನಲ್ಲಿ ಮಕ್ಕಳನ್ನು ಒಗ್ಗೂಡಿಸುವ ಕೆಲಸ ಕೆಲ ತಿಂಗಳಮಟ್ಟಿಗೆ ಮಾಡಬೇಡಿ.

* ಇದು ಮೂರನೇ ಹಂತದ ಲಾಕ್ ಡೌನ್. ಹಿಂದಿಗಿಂತಲೂ ಈಗ ಕೊರೋನಾ ಹರಡುವಿಕೆ ಹೆಚ್ಚಾಗುತ್ತಿದೆ ಎನ್ನುವ ಎಚ್ಚರ ನಿಮ್ಮಲ್ಲಿರಲಿ.
ಲಾಕ್ಡೌನ್ ಸಡಿಲಿಕೆಯನ್ನೇ ಸಂಭ್ರಮ ಅಂದುಕೊಳ್ಳದಿರಿ.

* ಮದ್ಯದಂಗಡಿಯೂ ಸೇರಿದಂತೆ ಬಹುತೇಕ ಅಂಗಡಿಗಳ ತೆರೆಯುವಿಕೆಗೆ ಸರ್ಕಾರ ಅನುಮತಿ ನೀಡಿದೆ. ಆದರೆ ನಿಮ್ಮೊಳಗಿನ ಸ್ವಯಂಎಚ್ಚರ ಜಾಗೃತವಾಗದೇ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

* ಬಂಟ್ವಾಳ ಪೇಟೆಯಲ್ಲಿ ಕೊರೋನಾ ಮೂವರನ್ನು ಬಲಿತೆಗೆದುಕೊಂಡಿದೆ. ಇಂತಹಾ ಕೆಟ್ಟ ಸನ್ನಿವೇಶ ಮರುಕಳಿಸದಂತೆ ಪ್ರತಿಯೊಬ್ಬರೂ ಜಾಗೃತರಾಗಿ.

* ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸಿ. ಕೊರೋನಾ ವಾರಿಯರ್ಸ್ ಗಳಾಗಿ ಶ್ರಮಿಸುತ್ತಿರುವ ಅವರ ಆರೋಗ್ಯ, ಅವರ ಕುಟುಂಬಿಕ ಆರೋಗ್ಯ ಕ್ಕಾಗಿ ನೀವು ಪ್ರಾರ್ಥಿಸಿ.

ಮುಂದಿನ ದಿನಗಳಲ್ಲಿ ಕೊರೋನಾ ನಿಗ್ರಹಕ್ಕೆ ಬಂಟ್ವಾಳ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೋರ್ವ ನಾಗರೀಕನೂ ಸ್ವಯಂ ಜಾಗೃತರಾಗಿ ಎನ್ನುವ ಆಶಯ ನನ್ನದು. ಕೊರೋನಾ ಮುಕ್ತ ಬಂಟ್ವಾಳ, ಕೊರೋನಾ ಮುಕ್ತ ದಕ್ಷಿಣಕನ್ನಡ, ಕೊರೋನಾ ಮುಕ್ತ ಕರ್ನಾಟಕ, ಕೊರೋನಾ ಮುಕ್ತ ಭಾರತ, ಕೊರೋನಾ ಮುಕ್ತ ವಿಶ್ವ ಎಲ್ಲರ ಆಶಯವಾಗಲಿ. ಮುಂದಿನ ಪತ್ರದಲ್ಲಿ ಮತ್ತೆ ಮಾತಾಡೋಣ..

ಇಂತೀ ನಿಮ್ಮ
ಬಂಟ್ವಾಳ
(ನಿರೂಪಣೆ: ಮೌನೇಶ ವಿಶ್ವಕರ್ಮ)

More from the blog

ಲೋಕಸಭಾ ಚುನಾವಣೆ : ಎ.20 ರಂದು‌ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೃಹತ್ ಚುನಾವಣಾ ಪ್ರಚಾರ

ಬಂಟ್ವಾಳ: ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎ.20 ರಂದು‌ ಶನಿವಾರ ಮಧ್ಯಾಹ್ನ 2.30 ಕ್ಕೆ ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀನಾರಾಯಣ ಗುರು ಮಂದಿರದಲ್ಲಿ ಬೃಹತ್ ಚುನಾವಣಾ...

ಹಿಮ್ಮುಖವಾಗಿ ಚಲಿಸಿದ ಪಿಕಪ್‌… ವ್ಯಕ್ತಿ ಸಾವು

ಬೆಳ್ತಂಗಡಿ: ಶಿಬಾಜೆ ಗ್ರಾಮದ ತಂಬ್ಲಾಜೆಯಲ್ಲಿ ಪಿಕಪ್‌ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ರುಕ್ಮ ಮುಗೇರ ಹಾಗೂ ನಾಗೇಶ್‌ ಅವರು ಪಿಕಪ್‌ ವಾಹನದಲ್ಲಿ...

ಜೀಪ್ ಬೈಕ್ ಗೆ ಡಿಕ್ಕಿ… ಬೈಕ್ ಸವಾರ ಸಾವು : ಇಬ್ಬರು ಮಕ್ಕಳು ಗಂಭೀರ

ಪುತ್ತೂರು: ಜೀಪೊಂದು ಬೈಕ್ ಗೆ ಡಿಕ್ಕಿ ಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಣಿಯೂರು- ಮಂಜೇಶ್ವರ ಅಂತರಾಜ್ಯ ರಸ್ತೆಯ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ಬಡಕ್ಕೋಡಿ ಕಡ್ಯ ನಿವಾಸಿ...

ರಾಜ್ಯದಲ್ಲಿ ಮತ್ತೆ ಏರಿದ ತಾಪಮಾನ

ಬೆಂಗಳೂರು: ಕಳೆದೊಂದು ವಾರದಿಂದ ತಗ್ಗಿದ್ದ ತಾಪಮಾನ ಮತ್ತೆ ಏರಿಕೆಯಾಗಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು 2ರಿಂದ 3 ಡಿಗ್ರಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...